More

    ಕೃಷ್ಣ ಮೃಗ ಸಂತತಿ ಪಿಲಿಕುಳದಲ್ಲಿ ಹೆಚ್ಚಳ, ಚೆನ್ನೈಯಿಂದ ಹಲವು ಪ್ರಾಣಿಗಳ ಆಗಮನ ನಿರೀಕ್ಷೆ

    ಮಂಗಳೂರು: ರಾಜ್ಯದ ಏಕೈಕ ಸಾರ್ವಜನಿಕ ಸಹಭಾಗಿತ್ವದ ಮೃಗಾಲಯ ಪಿಲಿಕುಳ ನಿಸರ್ಗಧಾಮದಲ್ಲಿ ನೋಡಲು ಮುದ್ದಾಗಿರುವ ಕೃಷ್ಣ ಮೃಗ, ಜಿಂಕೆ, ಕಾಡು ನಾಯಿ ಸಂತತಿ ಹೆಚ್ಚಳವಾಗಿದೆ.

    ರಾಣೆಬೆನ್ನೂರಿನಿಂದ 2010ರಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಅಳಿವಿನಂಚಿನಲ್ಲಿರುವ 12 ಕೃಷ್ಣ ಮೃಗಗಳನ್ನು ತರಲಾಗಿತ್ತು. ಪ್ರಸ್ತುತ ಇವುಗಳ ಸಂಖ್ಯೆ 40ಕ್ಕೆ ಏರಿದೆ. ಸಾಮಾನ್ಯವಾಗಿ ಉಷ್ಣಾಂಶ ಹೆಚ್ಚಿರುವ ಪ್ರದೇಶಕ್ಕೆ ಹೊಂದಿಕೆಯಾಗುವ ಕೃಷ್ಣ ಮೃಗವನ್ನು ಇಲ್ಲಿಗೆ ತಂದಾಗ ವಾತಾವರಣ ಹೊಂದಿಕೆಯಾಗದು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಸಂತಾನ ವೃದ್ಧಿಯಾಗಿದೆ.

    ಕೆಲವು ಕೃಷ್ಣ ಮೃಗಗಳನ್ನು ರಾಣೆಬೆನ್ನೂರು ವನ್ಯಧಾಮ ಸಹಿತ ಕೆಲವು ಮೃಗಾಲಯಗಳಿಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪಿಲಿಕುಳ ಮೃಗಾಲಯದ ಆಕರ್ಷಣೆ ಹೆಚ್ಚಿಸುವ ಉದ್ದೇಶದಿಂದ ಇನ್ನಷ್ಟು ಹೆಚ್ಚಿನ ಪ್ರಭೇದಗಳ ಮೃಗಗಳನ್ನು ಸೇರಿಸುವ ಕಾರ್ಯ ನಡೆಯುತ್ತಿದೆ. ಚೆನ್ನೈಯಿಂದ ಶೀಘ್ರದಲ್ಲೇ ಹಲವು ಪ್ರಾಣಿಗಳು ಪಿಲಿಕುಳಕ್ಕೆ ಬರಲಿವೆ. ಅಲ್ಲಿ ಚುನಾವಣೆ ಪ್ರಕ್ರಿಯೆಯಿಂದ ವಿಳಂಬವಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೃಷ್ಣ ಮೃಗ ದೇಶದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ‘ಎ’ ಶೆಡ್ಯೂಲ್‌ನಲ್ಲಿ ಸೇರಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಮೃಗಗಳ ಮೇಲೆ ಕೇಂದ್ರ ಸರ್ಕಾರ ವಿಶೇಷ ನಿಗಾ ಇಟ್ಟಿದೆ. ಪ್ರತಿವರ್ಷ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಇದರ ಲೆಕ್ಕ ಸಲ್ಲಿಸಬೇಕಾಗುತ್ತದೆ. ಸಂಖ್ಯೆ ಕಡಿಮೆಯಾದರೆ ಅಥವಾ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾದರೂ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಧಾರ್ಮಿಕವಾಗಿಯೂ ಕೃಷ್ಣ ಮೃಗ ಪ್ರಾಧಾನ್ಯತೆಯನ್ನು ಪಡೆದಿದೆ.

    ಪಿಲಿಕುಳ ಜೈವಿಕ ಉದ್ಯಾನವನ ಸುಮಾರು 120 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿದೆ. ವಿವಿಧ ಪ್ರಭೇದದ 1200ಕ್ಕೂ ಅಧಿಕ ಪ್ರಾಣಿ, ಪಕ್ಷಿಗಳು, ಉರಗಗಳು ಇಲ್ಲಿವೆ. ರಾಜ್ಯದಲ್ಲಿ ಬನ್ನೇರುಘಟ್ಟ ಮತ್ತು ಮೈಸೂರು ಹೊರತುಪಡಿಸಿದರೆ ರಾಜ್ಯದಲ್ಲಿ ಮೂರನೇ ದೊಡ್ಡ ಮೃಗಾಲಯವಾಗಿದೆ.

    ಕದ್ರಿ ಪಾರ್ಕ್ ಬಳಿಗೆ ಮತ್ತೆ ಜಿಂಕೆ?: ಪಿಲಿಕುಳದಲ್ಲಿ ಜಿಂಕೆಗಳ ಸಂಖ್ಯೆಯೂ ನಾಲ್ಕು ಪಟ್ಟು ಹೆಚ್ಚಳವಾಗಿವೆ. ಹಿಂದೆ ಕದ್ರಿ ಪಾರ್ಕ್ ಬಳಿಯ ಜಿಂಕೆ ಪಾರ್ಕ್‌ನಲ್ಲಿ ಇದ್ದ ಜಿಂಕೆ ಹಾಗೂ ಉರಗಗಳನ್ನು 2004ರಲ್ಲಿ ಪಿಲಿಕುಳಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಕದ್ರಿ ಉದ್ಯಾನವನ ಅಭಿವೃದ್ಧಿಗೆ ಪೂರಕವಾಗಿ ಮತ್ತೆ ಜಿಂಕೆಗಳನ್ನು ಇಲ್ಲಿಗೆ ತರುವ ಬಗ್ಗೆ ಪ್ರಸ್ತಾಪ ಮಾಡಿರುವ ಜಿಲ್ಲಾಧಿಕಾರಿ, ಪರಿಶೀಲಿಸುವಂತೆ ತೋಟಗಾರಿಕಾ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಪಿಲಿಕುಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಂಕೆಗಳನ್ನು ಜಿಂಕೆ ಪಾರ್ಕ್‌ನಲ್ಲಿಡುವ ಬಗ್ಗೆ ಚಿಂತನೆ ಇದೆ.

    ಪಿಲಿಕುಳ ಜೈವಿಕ ನಿಸರ್ಗಧಾಮದಲ್ಲಿ ಕೃಷ್ಣ ಮೃಗ, ಜಿಂಕೆ ಹಾಗೂ ಕಾಡು ನಾಯಿಗಳ ಸಂತತಿ ಹೆಚ್ಚಳವಾಗಿದೆ. ಇತರ ಮೃಗಾಲಯಗಳಿಗೆ ಹೋಲಿಸಿದರೆ ಸಂತಾನಾಭಿವೃದ್ಧಿಗೆ ಪೂರಕ ವಾತಾವರಣವಿದೆ. ಆದ್ದರಿಂದ ಇವುಗಳ ಸಂತತಿ ಹೆಚ್ಚಳವಾಗಿವೆ. ಬೇರೆ ಮೃಗಾಲಯಗಳಿಗೆ ಸ್ಥಳಾಂತರ ಮಾಡುವ ಯೋಜನೆ ಇದೆ. ಚೆನ್ನೈಯಿಂದ ಇನ್ನಷ್ಟು ಪ್ರಾಣಿಗಳು ಪಿಲಿಕುಳ ಉದ್ಯಾನವನಕ್ಕೆ ಶೀಘ್ರದಲ್ಲೇ ಬರಲಿವೆ.

    ಜಯಪ್ರಕಾಶ್ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ನಿಸರ್ಗಧಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts