More

    ಜಿಮ್ ಹೋಗುವ ಮಧ್ಯ ವಯಸ್ಕರಲ್ಲಿ ಹೆಚ್ಚಿದ ಹೃದಯಾಘಾತ; ಬಚಾವಾಗಲು ಇಲ್ಲಿದೆ ಉಪಾಯ…

    ನವದೆಹಲಿ: ಜಿಮ್‌ಗೆ ಹೋಗುವ 50 ವರ್ಷದೊಳಗಿನವರು ಹೃದಯಾಘಾತಕ್ಕೆ ಒಳಗಾಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ವ್ಯಾಯಾಮ ಮಾಡೋದು ದೇಹಕ್ಕೆ ಒಳ್ಳೆಯದಲ್ವಾ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದೀಗ ಜಿಮ್‌ಗೆ ಹೋಗುವ ಮೊದಲು ಏನೇನು ಅನುಸರಿಸಬೇಕು ಎಂಬುದನ್ನು ಆರೋಗ್ಯ ತಜ್ಞರು ಬಹಿರಂಗಪಡಿಸಿದ್ದಾರೆ.

    ತಜ್ಞರ ಪ್ರಕಾರ ಮಧುಮೇಹ, ಅಧಿಕ ರಕ್ತದೊತ್ತಡ, ಹಿಂದೆ ಧೂಮಪಾನ ಮಾಡುತ್ತಿದ್ದವರು, ಕುಟುಂಬದಲ್ಲಿ ಹಿಂದೆ ಯಾರಿಗಾದರೂ ಮಧುಮೇಹ ಇತ್ತಾದಿ ಇದ್ದಲ್ಲಿ ವ್ಯಾಯಾಮ ಮಾಡುವಾಗ ಜಾಗರೂಕರಾಗಿರಬೇಕು.

    ದಿನನಿತ್ಯದ ವ್ಯಾಯಾಮ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿರುವ ಸತ್ಯವಾಗಿದೆ. ಆದರೆ 45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ವ್ಯಾಯಾಮದ ಸಮಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಹೊಸ ಅಧ್ಯಯನದ ಪ್ರಕಾರ ಅತಿಯಾದ ವ್ಯಾಯಾಮ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

    ಮುಂಬೈನ ಸರ್ ಎಚ್‌.ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಲಹೆಗಾರ ಹೃದಯ ಶಸ್ತ್ರಚಿಕಿತ್ಸಕ ಡಾ ಬಿಪಿನ್‌ ಚಂದ್ರ ಭಾಮ್ರೆ “ವ್ಯಾಯಾಮದ ಸಮಯದಲ್ಲಿ ನಾವು ಕತ್ತಿನ ಭಾಗದಲ್ಲಿ ನೋವು, ಬೆನ್ನು ನೋವು, ಎಡ ಭುಜದ ನೋವಿನಂತಹ ಹೃದ್ರೋಗದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ, ವ್ಯಾಯಾಮವನ್ನು ನಿಲ್ಲಿಸಬೇಕು. “ಈಗಾಗಲೇ ಮಧುಮೇಹ, ಅಧಿಕ ರಕ್ತದೊತ್ತಡ ಇದ್ದು ಹಿಂದೆ ಧೂಮಪಾನ ಮಾಡುತ್ತಿದ್ದರೆ, ಕುಟುಂಬದಲ್ಲಿ ಹೃದ್ರೋಗದ ಇತಿಹಾಸ ಇದ್ದರೆ, ಅಂತಹ ಜನರು ಅತಿಯಾಗಿ ವ್ಯಾಯಾಮ ಮಾಡಬಾರದು.

    ಲೆಕ್ಕಕ್ಕಿಂತ ಹೆಚ್ಚು ಅಥವಾ ವೇಗವಾಗಿ ವ್ಯಾಯಾಮ ಮಾಡುವುದನ್ನು ತಪ್ಪಿಸಲೇಬೇಕು. ಅಗತ್ಯಕ್ಕಿಂತ ಹೆಚ್ಚಿನ ವ್ಯಾಯಾಮ ಹೃದಯದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತೆ. ಇದಲ್ಲದೆ, ಬಾಲ್ಯದಿಂದಲೂ ಹೆಚ್ಚಿನ ದೈಹಿಕ ಚಟುವಟಿಕೆ ಇಲ್ಲದವರು ಒಮ್ಮೆಲೆ ವ್ಯಾಯಾಮ ಮಾಡಲು ಶುರು ಮಾಡಿದರೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಒಮ್ಮೆಲೆ ವ್ಯಾಯಾಮವನ್ನು ಶುರು ಮಾಡುವ ಬದಲು, ಮೆಲ್ಲಮೆಲ್ಲನೇ ಶರೀರದ ಸ್ಟಾಮಿನಾ ಹೆಚ್ಚಿಸಿಕೊಳ್ಳುವುದು ಉತ್ತಮ ಉಪಾಯ.

    ‘ಹೆಚ್ಚಿನ ಜನರು ದೈಹಿಕ ಚಟುವಟಿಕೆ ಹೊಂದಿರುವುದಿಲ್ಲ. ಆದರೆ ಅವರು ಇದ್ದಕ್ಕಿದ್ದಂತೆ ಫಿಟ್ ಆಗಲು ಜಿಮ್​ಗೆ ತೆರಳಿ ಕಠಿಣ ವ್ಯಾಯಾಮ ಪ್ರಾರಂಭ ಮಾಡುತ್ತಾರೆ. ಇದು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತೆ. ಎದೆಯಲ್ಲಿ ಅಥವಾ ಬೆನ್ನಿನಲ್ಲಿ ಭಾರದ ಅನುಭವ, ವಾಕರಿಕೆ, ತಲೆತಿರುಗುವಿಕೆ ಅಥವಾ ನೀವು ಕುಸಿದಂತೆ ಅನ್ನಿಸಿದರೆ ತಕ್ಷಣವೇ ವ್ಯಾಯಾಮವನ್ನು ನಿಲ್ಲಿಸಿ ಬಿಡುವುದು ಒಳ್ಳೆಯದು. ಈ ಲಕ್ಷಣಗಳು ಕಂಡುಬಂದ ಕೂಡಲೇ ವೈದರಿಂದ ತಪಾಸಣೆ ಮಾಡಿಸಿಕೊಂಡರೆ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಅಪಾಯವನ್ನು ತಪ್ಪಿಸಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts