More

    ಮಣ್ಣಿನ ಮೂರ್ತಿಗೆ ಹೆಚ್ಚಿದ ಬೇಡಿಕೆ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಅವಕಾಶ ಇರದ ಹಿನ್ನೆಲೆ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣಪತಿ ಮೂರ್ತಿಗೆ ನಿಷೇಧವಿರುವ ಕಾರಣ ಈ ಬಾರಿ ಚಿಕ್ಕ ಚಿಕ್ಕ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ.

    ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡಿದ ಕಾರಣ ಗಣಪತಿ ಮೂರ್ತಿ ತಯಾರಿಸುವ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ. ಗಣೇಶ ಚತುರ್ಥಿಗೆ ಕೇವಲ 3 ದಿನ ಬಾಕಿಯಿದ್ದು, ಅನಾದಿಕಾಲದಿಂದಲೂ ನೈಸರ್ಗಿಕ ಗಣಪತಿ ಮಾಡಿಕೊಂಡು ಬಂದಿರುವ ಕಲಾವಿದರು ಬಿಡುವಿಲ್ಲದೆ ಮೂರ್ತಿ ತಯಾರಿಸುತ್ತಿದ್ದಾರೆ.

    ಮೂರ್ತಿಗಳನ್ನು ವಿಸರ್ಜನೆ ಮಾಡುವ ಬಾವಿ, ಕೆರೆಯ ನೀರು ಪರಿಸರ ಹಾಳಾಗದಂತೆ ಮೂರ್ತಿಗಳಿಗೆ ನೀರಿನ ಬಣ್ಣ ಬಳಿಸಿ ಸಿಂಗರಿಸಲಾಗುತ್ತಿದೆ. ಪೂನಾದ ದಗೂಡುಶೇಟ್, ಹಾವಿನ ಮೇಲೆ, ಬಸವಣ್ಣನ ಮೇಲೆ ಕುಳಿತ ಗಣಪತಿ, ಗೌರಿ ಗಣೇಶ, ಸಾಯಿಬಾಬಾ, ಕೃಷ್ಣನ ಅವತಾರ, ಬ್ರಹ್ಮನ ಸ್ವರೂಪ ಸೇರಿ ವಿವಿಧ ಬಗೆಯ ಗಣಪತಿ ಮೂರ್ತಿಗಳು ರೂಪುಗೊಳ್ಳುತ್ತಿವೆ.

    ಚಿಕ್ಕ ಮೂರ್ತಿಗಳಿಗೆ ಬೇಡಿಕೆ: ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ 4 ಅಡಿ ಎತ್ತರದ ಗಣಪತಿ ಹಾಗೂ ಮನೆಯಲ್ಲಿ 2 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿದೆ. ಮಣ್ಣಿನಿಂದ ಮಾಡಿದ ಗಣಪತಿ ಪ್ರತಿಷ್ಠಾಪಿಸಿ ಆಯಾ ಸ್ಥಳದಲ್ಲಿಯೇ ಮೂರ್ತಿಗಳನ್ನು ಕರಗಿಸಬೇಕು ಎಂಬುದು ಸೇರಿ ಸರ್ಕಾರ ನಾನಾ ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಈ ಬಾರಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣ ಬಳಸಿದ ಚಿಕ್ಕ ಗಣಪತಿ ಮೂರ್ತಿಗಳಿಗೆ ಬೇಡಿಕೆ ಬಂದಿದೆ.

    ನಗರದ ಕುರುಬಗೇರಿ, ಮಾರುತಿ ನಗರ ಹಾಗೂ ವಿವಿಧೆಡೆ ನೈಸರ್ಗಿಕ ಗಣಪತಿ ತಯಾರಿಸಲಾಗುತ್ತಿದ್ದು, ಗ್ರಾಹಕರು ಈಗಾಗಲೇ ತಮಗೆ ಇಷ್ಟವಾದ ಗಣಪತಿ ಮೂರ್ತಿ ಆಯ್ಕೆ ಮಾಡಿ, ಮುಂಗಡವಾಗಿ ಹಣ ಕೊಟ್ಟು ಕಾಯ್ದಿರಿಸಿದ್ದಾರೆ.

    ಕಲಾವಿದರಿಗೆ ಇಲ್ಲ ಲಾಭ: ಕರೊನಾದಿಂದ ಈ ಬಾರಿ ಮಣ್ಣು, ಕಚ್ಚಾ ವಸ್ತು ತರಲು ಹೆಚ್ಚಿನ ಖರ್ಚು ಮಾಡಲಾಗಿದೆ. ಆದರೆ, ಸರ್ಕಾರ ಸಾರ್ವಜನಿಕ ಗಣಪತಿಗೆ ಅವಕಾಶ ನೀಡುವುದೋ, ಇಲ್ಲವೋ ಎಂಬ ಗೊಂದಲದಿಂದ 4 ಅಡಿ ಎತ್ತರದ ಗಣಪತಿ ತಯಾರು ಮಾಡಲಿಲ್ಲ. ಚಿಕ್ಕಪುಟ್ಟ ಗಣಪತಿ ಮೂರ್ತಿಗಳನ್ನು ಮಾತ್ರ ಮಾಡಿದ್ದಾರೆ. ಒಂದು ಗಣಪತಿ 500 ರೂ.ಯಿಂದ 1 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದೇವೆ. ಹೆಚ್ಚಿನ ಉಳಿತಾಯವಾಗುವುದಿಲ್ಲ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ.

    ಅರ್ಥಪೂರ್ಣವಾಗಿ ಆಚರಿಸಿ: ಸರ್ಕಾರದ ನಿರ್ದೇಶನದೊಂದಿಗೆ ಪಾರಂಪರಿಕ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬವನ್ನು ಸರಳ, ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಎಸ್​ಪಿ ಕೆ.ಜಿ. ದೇವರಾಜ ತಿಳಿಸಿದರು. ಪೊಲೀಸ್ ಇಲಾಖೆ ವತಿಯಿಂದ ಸವಣೂರ ಪಟ್ಟಣದ ಸಿಂಪಿಗಲ್ಲಿಯ ವಿಠಲ ಹರಿ ಮಂದಿರ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿವೈಎಸ್​ಪಿ ಕಲ್ಲೇಶಪ್ಪ ಒ.ಬಿ., ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಇಒ ಮುನಿಯಪ್ಪ.ಪಿ, ಜಿಪಂ ಮಾಜಿ ಸದಸ್ಯ ಮೋಹನ ಮೆಣಸಿನಕಾಯಿ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಸರಳವಾಗಿ ಯಾವುದೇ ಗಲಭೆಗಳಿಗೆ ಆಸ್ಪದ ನೀಡದೇ ಅರ್ಥಪೂರ್ಣವಾಗಿ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು. ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜೀಶಾನಖಾನ್ ಪಠಾಣ, ಪಿಐ ಶಶಿಧರ ಜಿ.ಎಂ., ಪಿಎಸ್​ಐ ಹನುಮಂತಪ್ಪ ಶಿವಣ್ಣವರ, ಪುರಸಭೆ ಸದಸ್ಯ ಮಹೇಶ ಮುದಗಲ್, ಪ್ರಮುಖರಾದ ಚನ್ನಬಸವಯ್ಯ ದುರ್ಗದಮಠ, ಬಸವರಾಜ ಮೇಟಿ ಹಾಗೂ ಇತರರು ಇದ್ದರು. ಪಿಎಸ್​ಐ ಮಂಜುನಾಥ ಬಿ. ಎನ್., ಪೊಲೀಸ್ ಪೇದೆ ವಿನಾಯಕ ಚಿನ್ನೂರ ನಿರ್ವಹಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಹೊರಗಡೆಯಿಂದ ಗಣಪತಿ ಮೂರ್ತಿಗಳು ಬಂದಿಲ್ಲ. ಸ್ಥಳೀಯ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆಯಿದೆ. ಆದರೆ, ಕರೊನಾ ಸಮಯದಲ್ಲಿ ಕಚ್ಚಾ ವಸ್ತುಗಳನ್ನು ತರಲು ಈ ಬಾರಿ ಹಣ ಹೆಚ್ಚು ಖರ್ಚಾಗಿದೆ. ಹೀಗಾಗಿ ಪ್ರತಿ ಗಣಪತಿ ಮೇಲೆ 200 ರೂ. ಹೆಚ್ಚಿಗೆ ಮಾಡಿದರೂ ಉಳಿತಾಯ ಕಡಿಮೆಯಾಗಿದೆ.

    | ರಾಘವೇಂದ್ರ, ನೈಸರ್ಗಿಕ ಗಣಪತಿ ತಯಾರಕ

    ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಮನೆಯಲ್ಲಿ ಕಡ್ಡಾಯವಾಗಿ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಬೇಕು. ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.

    | ಡಾ. ಎನ್. ಮಹಾತೇಂಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts