More

    ಕೊಡಗಿನಲ್ಲಿ ಬೆಣ್ಣೆ ಹಣ್ಣಿಗೆ ಹೆಚ್ಚಿದ ಬೇಡಿಕೆ

    ಸಿದ್ದಾಪುರ: ಕೊಡಗು ಜಿಲ್ಲೆಯ ಕಿತ್ತಳೆ ಹಣ್ಣಿಗೆ ಪ್ರಸಿದ್ಧಿ. ಆದರೆ, ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಕಿತ್ತಳೆ ಹಣ್ಣು ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ್ದು, ಬೆಳೆಗಾರರು ಬಟರ್ ಫ್ರೂಟ್ ಬೆಳೆಯತ್ತ ಮುಖ ಮಾಡಿದ್ದಾರೆ.


    2005ರಲ್ಲಿ ಕೊಡಗು ಜಿಲ್ಲೆಯಲ್ಲಿ ಬೆಣ್ಣು ಹಣ್ಣು ಬೆಳೆಯುವ ಪ್ರದೇಶಗಳು ಬೆರಳೆಣಿಕೆಯಷ್ಟು ಮಾತ್ರ ಇತ್ತು. ಇದೀಗ 2024 ರಲ್ಲಿ ಜಿಲ್ಲೆಯಲ್ಲಿ 700ರಿಂದ 1000 ಸಾವಿರ ಎಕರೆವರೆಗೆ ಬೆಳೆಯುವ ಪ್ರದೇಶಗಳು ಹೆಚ್ಚಳವಾಗಿವೆ. ವರ್ಷದಿಂದ ವರ್ಷಕ್ಕೆ ಬೆಳೆಯುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಉತ್ತಮ ಆದಾಯ ಗಳಿಸಬಹುದಾದ ಬೆಣ್ಣೆ ಹಣ್ಣಿನ ಕೃಷಿಯತ್ತ ಕೊಡಗಿನ ಬೆಳೆಗಾರರು ಹೆಚ್ಚು ಆಸಕ್ತಿ ವಹಿಸಿದ್ದಾರೆ.


    ಕಸಿ ಮಾಡಿರುವ ಆವಕಾಡೊ ಗಿಡವನ್ನು ನೆಟ್ಟು ಬೆಳೆಸಿದರೆ ಕೇವಲ ಎರಡ್ಮೂರು ವರ್ಷದಲ್ಲಿ ಬಟರ್ ಫ್ರೂಟ್ ಫಸಲು ಬರುತ್ತವೆ. ಕೇವಲ 3 ವರ್ಷದಲ್ಲೇ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಗಳಿಸಬಹುದಾಗಿದೆ. ಇದೀಗ ಜಿಲ್ಲೆಯಲ್ಲಿ ಬಟರ್ ಫ್ರೂಟ್ ಸೀಜನ್ ಆರಂಭವಾಗಿದ್ದು, ಬಹುತೇಕ ಕಡೆಗಳಲ್ಲಿ ಕೊಯ್ಲು ಮಾಡುತ್ತಿದ್ದಾರೆ.


    ಬಟರ್ ಫ್ರೂಟ್, ಆವಾಕಾಡೊ, ಬೆಣ್ಣೆ ಹಣ್ಣು ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಈ ಹಣ್ಣಿಗೆ ಭಾರಿ ಡಿಮ್ಯಾಂಡ್ ಇದೆ. ಇದೀಗ ಫಸಲು ಕೊಯ್ಲಿಗೆ ಬಂದಿದ್ದು ಬೇಸಿಗೆಯಾಗಿರುವುದರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಅತಿ ಹೆಚ್ಚಾಗಿ ಫಸಲು ಸಿಗುವುದರಿಂದ ಬೇಸಿಗೆ ಸಮಯದಲ್ಲಿ ಉತ್ತಮ ಬೇಡಿಕೆ ಇದ್ದು, ಪ್ರತಿ ಕೆ.ಜಿ.ಗೆ 150 ರಿಂದ 200ರೂ.ವರೆಗೆ ಮಾರಾಟವಾಗುತ್ತಿದೆ. ವಾರ್ಷಿಕವಾಗಿ ಎರಡು ಬಾರಿ ಫಸಲು ಬರುತ್ತದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಲ್ಲಿ ಫಸಲು ಬರುವ ಹಣ್ಣಿಗೆ ಬೇಡಿಕೆ ಕಡಿಮೆಯಿದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಹಣ್ಣು ಲಭ್ಯವಿರುತ್ತದೆ. ಅಲ್ಲದೆ ಮಳೆಗಾಲ ಆಗಿರುವುದರಿಂದ ಕೆಜಿಗೆ 30 ರಿಂದ 40 ರೂ. ಮಾತ್ರ ಬೆಲೆ ಸಿಗುತ್ತದೆ.


    ಈ ಅವಧಿಯಲ್ಲಿ ತಮಿಳುನಾಡಿನ ಕೊಡೈಕೆನಾಲ್ ಬಟರ್ ಫ್ರೂಟ್ ಮಾರುಕಟ್ಟೆಗೆ ಲಗ್ಗೆಯಿಡುವುದರಿಂದ ಬೆಲೆ ಕೂಡ ಕುಸಿತವಾಗುತ್ತದೆ. ಆದರೆ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಈ ಹಣ್ಣು ಬೆಳೆದವರಿಗೆ ಬಂಪರ್ ಲಾಭ ಸಿಗಲಿದೆ.


    ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಬಟರ್ ಫ್ರೂಟ್ ಪ್ಲಾಂಟೇಷನ್ ಇರಲಿಲ್ಲ. ಆದರೆ ಇದೀಗ ಕೊಡಗು ಜಿಲ್ಲೆಯ ಎಲ್ಲ ತೋಟಗಳಲ್ಲಿ ಬೆಳೆಯುತ್ತಿದ್ದಾರೆ. ಬಹುತೇಕರು ಕಾಫಿ ಗಿಡಕ್ಕಿಂತ ಹೆಚ್ಚಾಗಿ ಈ ಹಣ್ಣಿನ ಗಿಡವನ್ನು ಆರೈಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆವಕಾಡೊ ಫಸಲು ಕೊಯ್ಲಿಗೆ ಬರುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಬೇಗ ಬಂದಿದೆ. ಬೇಸಿಗೆ ಅವಧಿಯಲ್ಲಿ ಉತ್ತರ ಭಾರತ, ಈಶಾನ್ಯ ಭಾರತದ ಭಾಗಗಳಲ್ಲಿ ಫಸಲು ಇರುವುದಿಲ್ಲ.


    ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆಗಾರರು ತಮ್ಮ ತೋಟದಲ್ಲಿ ಬೆಳೆದ ಬೆಣ್ಣು ಹಣ್ಣನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ತಾವೇ ಕೊಯ್ಲು ಮಾಡಿ ಅಲ್ಲಿಯೇ ತೂಕ ಮಾಡಿ ಬೆಳೆಗಾರರಿಗೆ ಹಣ ನೀಡುತ್ತಾರೆ. ಈ ಬಾರಿ ಭಾರಿ ಬೇಡಿಕೆ ಇರುವುದರಿಂದ ವ್ಯಾಪಾರಿಗಳ ನಡುವೆ ಬೆಳೆಗಾರರಿಂದ ಖರೀದಿಸಲು ಪೈಪೋಟಿ ನಡೆಯುತ್ತಿವೆ.


    ಕೆಲ ವ್ಯಾಪಾರಿಗಳು ಕೊಯ್ಲಿಗೆ ಬರುವುದಕ್ಕಿಂತ ಮುನ್ನ ಮುಂಗಡ ಹಣವನ್ನು ನೀಡಿ ತೋಟವನ್ನೇ ಬುಕ್ ಮಾಡಿಕೊಂಡು, ಫಸಲು ಬಂದಾಗ ಕೊಯ್ಲು ಮಾಡುತ್ತಿದ್ದಾರೆ. ವ್ಯಾಪಾರಿಗಳ ನಡುವಿನ ಪೈಪೋಟಿಯಿಂದ ಬೆಳೆಗಾರರಿಗೆ ಪ್ರತಿ ಕೆಜಿಗೆ 150 ರೂ.ವರೆಗೂ ಸಿಗುತ್ತಿರುವುದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ಕೊಡಗು ಜಿಲ್ಲೆಯಿಂದ ಕೊಯ್ಲು ಮಾಡಿದ ಹಣ್ಣನ್ನು ಹೈದರಾಬಾದ್, ಬೆಂಗಳೂರು, ಕೇರಳ, ತಮಿಳುನಾಡು, ಮುಂಬೈಗಳಿಗೆ ಕಳುಹಿಸುತ್ತಿದ್ದಾರೆ.


    ಆವಕಾಡೊ ಮೂಲ ಅಮೆರಿಕ ಖಂಡದ ಮೆಕ್ಸಿಕೋ, ಗ್ವಾಟೆಮಾಲಾ ಹಾಗೂ ವೆಸ್ಟ್ ಇಂಡೀಸ್ ದೀಪಗಳು. 19-20ನೇ ಶತಮಾನದಲ್ಲಿ ಬಟರ್ ಫ್ರೂಟ್ ಹಣ್ಣು ಬ್ರಿಟಿಷರ ಮೂಲಕ ಭಾರತಕ್ಕೆ ಪರಿಚಯವಾಯಿತು. ಈ ಹಣ್ಣಿನ ಬಗ್ಗೆ ಸಂಶೋಧನೆಗಳು ನಡೆದು ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. 2005ರ ಸುಮಾರಿಗೆ ಹಣ್ಣಿನ ಬಗ್ಗೆ ಭಾರತದಲ್ಲೂ ಸಂಶೋಧನೆಗಳು ಆರಂಭವಾದವು.


    ಕೊಡಗು ಜಿಲ್ಲೆಯ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದಲ್ಲಿ ವಿವಿಧ ತಳಿಗಳಿದ್ದು, ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ.

    ಕೊಡಗು ಜಿಲ್ಲೆಯಲ್ಲಿ ಇದೀಗ ಬಟರ್ ಫ್ರೂಟ್ ಕೊಯ್ಲಿಗೆ ಬಂದಿದ್ದು, ಈ ಅವಧಿಯಲ್ಲಿ ಡಿಮಾಂಡ್ ಇದೆ. ಬೆಳೆಗಾರರಿಂದ ಖರೀದಿಸಿ ಕೊಯ್ಲು ಮಾಡುತ್ತಿದ್ದೇವೆ. ತೋಟದಲ್ಲಿ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ 150 ರೂ. ನೀಡುತ್ತಿದ್ದೇವೆ. ಒಂದೆರಡು ತಿಂಗಳವರೆಗೆ ಉತ್ತಮ ಬೇಡಿಕೆ ಇರಲಿದೆ.
    ಆಸ್ಕರ್ ಅಬ್ದುಲ್ಲಾ ವ್ಯಾಪಾರಿ, ಸಿದ್ದಾಪುರ

    ಬಟರ್ ಫ್ರೂಟ್ ಮಾತ್ರವಲ್ಲ ಕೊಡಗಿನ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಕ್ಕೂ ಬೇಡಿಕೆ ಇದೆ. ಮೈಸೂರು, ಬೆಂಗಳೂರು, ಮುಂಬೈ, ತಮಿಳುನಾಡು, ಕೇರಳ ಸೇರಿ ಇತರ ಭಾಗಗಳ ಬೆಳೆಗಾರರಿಗೆ ಗಿಡವೊಂದಕ್ಕೆ 100 ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ.
    ಗಣೇಶ್ ನರ್ಸರಿ ವ್ಯಾಪಾರಿ, ಮಾಲ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts