More

    ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಹೆಚ್ಚಳ


    ಶೃಂಗೇರಿ: ಮಲೆನಾಡಿನಲ್ಲಿ ಜನರು ಕೃಷಿಯಿಂದ ಬದುಕು ಕಟ್ಟಿಕೊಂಡರೂ ಸಣ್ಣ ಹಿಡುವಳಿದಾರರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರು, ತೋಟಗಳಿಗೆ ಗೊಬ್ಬರ, ಔಷಧ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಜಾನುವಾರು ಸಾಕಣೆ ಪ್ರೋತ್ಸಾಹಿಸಲು ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಲು ಸಹಾಯಧನ ಹೆಚ್ಚಿಸಲಾಗಿದೆ.
    ಐದು ವರ್ಷಗಳಿಂದ ತಾಲೂಕಿನಲ್ಲಿ ನರೇಗಾ ಯೋಜನೆಯಡಿ 164 ದನದ ಕೊಟ್ಟಿಗೆ ನಿರ್ಮಿಸಲು ಬೇಡಿಕೆ ಇದ್ದು, 117 ಕೊಟ್ಟಿಗೆ ನಿರ್ಮಿಸಲಾಗಿದೆ. 47 ಕಾಮಗಾರಿಗಳು ಪ್ರಗತಿಯಲ್ಲಿವೆ. ನರೇಗಾದಡಿ ಕೊಟ್ಟಿಗೆ ನಿರ್ಮಾಣಕ್ಕೆ ನೀಡುತ್ತಿದ್ದ ಸಹಾಯಧನವನ್ನು 43 ಸಾವಿರ ರೂನಿಂದ 57 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ನಾಲ್ಕು ಜಾನುವಾರುಗಳ ಕೊಟ್ಟಿಗೆಗೆ 57 ಸಾವಿರ ರೂ. ನೀಡಲಾಗುತ್ತಿದೆ.
    10 ಅಡಿ ಅಗಲ, 18 ಅಡಿ ಉದ್ದ ಹಾಗೂ 5 ಅಡಿ ಎತ್ತರದಲ್ಲಿ ಕೊಟ್ಟಿಗೆ ನಿರ್ಮಿಸಬೇಕು. ಇಂಥ ಕೊಟ್ಟಿಗೆಯಲ್ಲಿ 4 ಜಾನುವಾರುಗಳನ್ನು ಕಟ್ಟಲು ಅವಕಾಶ ಇರಬೇಕು. ನರೇಗಾ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ 43 ಸಾವಿರ ರೂ.ನಲ್ಲಿ 8 ಸಾವಿರ ಕೂಲಿಗೆ ಹಾಗೂ 35 ಸಾವಿರ ಸಾಮಗ್ರಿಗೆ ನಿಗದಿಪಡಿಸಲಾಗುತ್ತಿತ್ತು. ಸಾಮಾನ್ಯ ವರ್ಗದವರಿಗೆ 60:40ರ ಅನುಪಾತ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅನುಪಾತದ ಸಮತೋಲನದ ನಿರ್ಬಂಧ ಇರಲಿಲ್ಲ. ಈ ತಾಂತ್ರಿಕ ಸಮಸ್ಯೆ ನಿವಾರಿಸುವಂತೆ ಕೊಟ್ಟಿಗೆ ನಿರ್ಮಾಣಕ್ಕೆ ಬೇಡಿಕೆ ಬಂದ ಕಾರಣ ಘಟಕಕ್ಕೆ ಸಹಾಯಧನ ಪ್ರಮಾಣ ಏರಿಸಲಾಗಿದೆ. ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
    ಅರ್ಜಿ ಸಲ್ಲಿಸುವುದು ಹೇಗೆ?: ರೈತರು 4 ಜಾನುವಾರುಗಳನ್ನು ಸಾಕಿರಬೇಕು. ನರೇಗಾ ಕಾರ್ಡ್ ಹೊಂದಿರಬೇಕು. ಜಾನುವಾರು ಇರುವ ಕುರಿತು ತಾಲೂಕು ಪಶುವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ತರಬೇಕು. ಆಧಾರ್, ಬ್ಯಾಂಕ್ ಪಾಸ್‌ಬುಕ್ ದಾಖಲೆ ಸಹಿತ ಗ್ರಾಪಂಗೆ ಅರ್ಜಿ ಸಲ್ಲಿಸಬೇಕು. ಗ್ರಾಪಂ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ಸೇರಿಸಿದ ಬಳಿಕ ಮೇಲಾಧಿಕಾರಿಗಳ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts