More

    ಗ್ರಾಮೀಣ ತೆರಿಗೆ ವ್ಯಾಪ್ತಿ ಹೆಚ್ಚಳ; ಮಾಸಾಂತ್ಯಕ್ಕೆ 75 ಲಕ್ಷ ಆಸ್ತಿಗಳು ಕೃಷಿ ಸೆಸ್ ವ್ಯಾಪ್ತಿಗೆ ಸೇರ್ಪಡೆ

    |ರುದ್ರಣ್ಣ ಹರ್ತಿಕೋಟೆ ಬೆಂಗಳೂರು
    ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಎಲ್ಲ ಮೂಲಗಳಿಂದ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಗ್ರಾಮೀಣ ಭಾಗದಲ್ಲಿರುವ ಇನ್ನಷ್ಟು ಭೂಮಿ ಮತ್ತು ಕಟ್ಟಡಗಳನ್ನು ಈ ಮಾಸಾಂತ್ಯದೊಳಗೆ ಕೃಷಿ ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ತನ್ಮೂಲಕ ಗ್ರಾಮ ಪಂಚಾಯಿತಿಗಳ ತೆರಿಗೆ ವ್ಯಾಪ್ತಿ ಹೆಚ್ಚಳಕ್ಕೆ ದಾರಿ ಕಂಡುಕೊಂಡಿದೆ. ಸದ್ಯ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಬಹು ತೇಕ ಜಿಲ್ಲೆಗಳಲ್ಲಿ ನಿಗದಿತ ಪ್ರಮಾಣದಲ್ಲಷ್ಟೇ ತೆರಿಗೆ ಸಂಗ್ರಹವಾಗುತ್ತಿದೆ. ಹಾಗಾಗಿ ತೆರಿಗೆ ವ್ಯಾಪ್ತಿಯನ್ನೇ ವಿಸ್ತರಿಸುವ ಕಡೆ ಸರ್ಕಾರ ಗಮನ ಹರಿಸಿದೆ.

    ಗ್ರಾಪಂ ವ್ಯಾಪ್ತಿಯಲ್ಲಿರುವ ಭೂಮಿ ಮತ್ತು ಕಟ್ಟಡಗಳೆಲ್ಲವೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತಿಲ್ಲ. ಇದರಿಂದ ಸಾಕಷ್ಟು ಪ್ರಮಾಣದ ತೆರಿಗೆ ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಿದರೆ ಗ್ರಾಪಂಗಳ ಆದಾಯ ಹೆಚ್ಚಳವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ ವಾಗಿದೆ. ಗ್ರಾ. ಪಂ.ಗಳಿಂದ ಸದ್ಯ ಎಲ್ಲ ರೀತಿಯ ತೆರಿಗೆ ಸೇರಿ ಅಂದಾಜು 1,400 ಕೋಟಿ ರೂ.ಗಳಷ್ಟು ಸಂಗ್ರಹವಾಗುತ್ತಿದೆ. ಅದರಲ್ಲಿ ಭೂಮಿ ಮತ್ತು ಕಟ್ಟಡಗಳ ಕೃಷಿ ತೆರಿಗೆ ಸಂಗ್ರಹ 900 ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿದೆ. ಎಲ್ಲ ಭೂಮಿ ಮತ್ತು ಕಟ್ಟಡಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟರೆ ಅನೇಕ ಗ್ರಾಪಂಗಳು ಸ್ವಂತ ಆದಾಯ ಗಳಿಸಲಿವೆ.

    ಎಷ್ಟು ಹೊರಗುಳಿದಿವೆ?: ರಾಜ್ಯದಲ್ಲಿ 6,024 ಗ್ರಾಮ ಪಂಚಾಯಿತಿಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಎರಡು ಕೋಟಿಗೂ ಹೆಚ್ಚು ಭೂಮಿ ಮತ್ತು ಕಟ್ಟಡಗಳಿದ್ದರೂ, ಸುಮಾರು 1.26 ಕೋಟಿಯಷ್ಟು ಭೂಮಿ ಮತ್ತು ಕಟ್ಟಡಗಳು ಮಾತ್ರ ಕೃಷಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತಿವೆ. ಆದ್ದರಿಂದ ಜುಲೈ 31 ರೊಳಗೆ ಇನ್ನೂ 75 ಲಕ್ಷ ಭೂಮಿ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಾಚರಣೆ ನಡೆಸಲಿದೆ.

    ಏನೇನು ಮಾಡಬೇಕಾಗಿದೆ?: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಭೂಮಿಯ ಖುದ್ದು ಸಮೀಕ್ಷೆಯನ್ನು ನಡೆಸಬೇಕು ಹಾಗೂ ಅದನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಸೇರಿಸಿ ತೆರಿಗೆ ವಿಧಿಸಲು ಸೂಚನೆ ನೀಡಲಾಗಿತ್ತು. ಆದರೆ, ಈವರೆಗೂ ಈ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಈಗ ಜುಲೈ 31 ರ ತನಕ ಅವಧಿ ನೀಡಲಾಗಿದೆ. ಸಮೀಕ್ಷೆ ಮಾಡಿ ಅದರ ಜತೆಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕು. ತೆರಿಗೆ ವ್ಯಾಪ್ತಿಗೆ ಸೇರಿಸಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಸರ್ಕಾರ ನೀಡಿದೆ.

    ತೆರಿಗೆ ಹೆಚ್ಚಳ ಸದ್ಯಕ್ಕಿಲ್ಲ: ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಯಾವುದೇ ತೆರಿಗೆ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಆದರೆ, ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಿ ಆದಾಯ ವೃದ್ಧಿಸಿಕೊಳ್ಳುವ ಕಡೆ ಮಾತ್ರ ಗಮನ ಹರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳುತ್ತವೆ.

    rural development

    ಎಷ್ಟು ಆದಾಯ?: ಕಟ್ಟಡ ಮತ್ತು ಭೂಮಿಯಿಂದ ಈಗ 900 ಕೋಟಿ ರೂ. ಗಳ ಆದಾಯ ಬರುತ್ತಿದೆ. ಹೊಸದಾಗಿ 75 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟರೆ ಇನ್ನೂ 300 ಕೋಟಿ ರೂ. ಗಳ ಹೆಚ್ಚುವರಿ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ.

    ಇಒ, ಪಿಡಿಒಗಳಿಗೆ ಹೊಣೆಗಾರಿಕೆ ನಿಗದಿ

    ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ಪ್ರತಿ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ), ತಾಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಅವರೇನಾದರೂ ನಿರ್ಲಕ್ಷ್ಯ ತೋರಿಸಿದರೆ ಶಿಸ್ತು ಕ್ರಮ ವಿಧಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಹಿಂದೆಲ್ಲ ಸಾಕಷ್ಟು ಗಡುವು ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಗತಿ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಶಿಸ್ತುಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

    ಕೃಷಿ ನಿರ್ಧರಣೆ ತೆರಿಗೆ ವ್ಯಾಪ್ತಿಗೆ ಒಳಪಡದ ಭೂಮಿ ಮತ್ತು ಕಟ್ಟಡಗಳನ್ನು ಜು.31 ರೊಳಗೆ ಸೇರಿಸಲು ಸೂಚನೆ ನೀಡಲಾಗಿದೆ. ಸುಮಾರು 75 ಲಕ್ಷ ಆಸ್ತಿಗಳು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ. ಈಗ ತೆರಿಗೆ 900 ಕೋಟಿ ರೂ. ಸಂಗ್ರಹವಾಗುತ್ತಿದೆ. ಸಮೀಕ್ಷೆ ಮುಗಿದ ನಂತರ ಎಷ್ಟು ಹೆಚ್ಚಳವಾಗಲಿದೆ ಎಂಬ ಅಂದಾಜು ಸಿಗಲಿದೆ.

    | ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪಂಚಾಯತ್​ರಾಜ್, ಆರ್​ಡಿಪಿಆರ್ ಆಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts