More

    ಬಿಬಿಎಂಪಿ ಆಸ್ತಿತೆರಿಗೆ ಸಂಗ್ರಹದಲ್ಲಿ ಹೆಚ್ಚಳ

    ಆರ್​.ತುಳಸಿಕುಮಾರ್​
    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ತಿತೆರಿಗೆ ಅಡಿಯಲ್ಲಿ 4 ಸಾವಿರ ಕೋಟಿ ರೂ. ಆಸುಪಾಸು ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಆದರೂ, ಗುರಿಗಿಂತ ಕಡಿಮೆ ಮೊತ್ತದ ತೆರಿಗೆ ಸಂಗ್ರಹವಾಗಿರುವುದು ಪಾಲಿಕೆಗೆ ಸಮಾಧಾನ ತಂದಂತಿದೆ.

    ಏಕೆಂದರೆ ಪ್ರತೀ ವರ್ಷ ಪಾಲಿಕೆಯ ಆಸ್ತಿತೆರಿಗೆ ವಸೂಲಾತಿ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಈ ಬಾರಿ ಸರ್ಕಾರದ ವಿವಿಧ ಅನುದಾನ ಲಭ್ಯತೆ ಕಡಿಮೆಯಾದ ಕಾರಣ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಕಂದಾಯ ವಿಭಾಗದ ಮುಖ್ಯಸ್ಥರಾದಿಯಾಗಿ ಕೆಳ ಹಂತದ ಸಿಬ್ಬಂದಿ ವರೆಗೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಬಾಕಿ ವಸೂಲಾತಿಗೆ ಒತ್ತು ನೀಡಿದ ಪರಿಣಾಮ ಟ್ಯಾಕ್ಸ್ ಕಲೆಕ್ಷನ್ 4 ಸಾವಿರ ಕೋಟಿ ರೂ.ಗೆ ಬಂದು ನಿಂತಿದೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷ ಆಸ್ತಿಗಳು ಇವೆ. ಇವುಗಳಲ್ಲಿ 16 ಲಕ್ಷ ಸ್ವತ್ತುಗಳು ಮಾತ್ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಉಳಿದ ಆಸ್ತಿದಾರರಿಂದ ಟ್ಯಾಕ್ಸ್ ಕಲೆಕ್ಷನ್ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಇತ್ತೀಚಿನ ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಆಸುಪಾಸಿನಲ್ಲೇ ತೆರಿಗೆ ಸಂಗ್ರಹವಾಗುತ್ತಿತ್ತು. ಕೊವಿಡ್ ಸಾಂಕ್ರಾಮಿಕದಿಂದಾಗಿ 2020-21 ಹಾಗೂ 2021-22ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ತುಸು ಕಡಿಮೆಯಾಗಿತ್ತು. 2022-23ರಲ್ಲಿ ಹೊಂದಿಷ್ಟು ಸುಧಾರಣೆ ಕಂಡಿತ್ತು. 2023-24ರಲ್ಲಿ ನಾಲ್ಕು ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ವಸೂಲಾತಿ ಗುರಿಯನ್ನು ಹೊಂದಿದ್ದು, ಆರ್ಥಿಕ ವರ್ಷದ ಕೊನೆಯ ದಿನ (ಮಾ.31) 3,900- 3,950 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದನ್ನು ತಾಳೆ ಹಾಕಲು ವಾರ ಕಾಲ ಹಿಡಿಯಲಿದ್ದು, ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮಹದೇವಪುರ ವಲಯದಲ್ಲಿ 1,000 ಕೋಟಿ ವಸೂಲು:

    ಪಾಲಿಕೆ ವ್ಯಾಪ್ತಿಯಲ್ಲಿ ಎಂಟು ವಲಯಗಳಿದ್ದರೂ, ಅರ್ಧದಷ್ಟು ವಲಯಗಳಲ್ಲಿ ಮಾತ್ರ ಹೆಚ್ಚು ತೆರಿಗೆ ವಸೂಲಾಗುತ್ತಿದೆ. ಅದರಲ್ಲೂ ಐಟಿ-ಬಿಟಿ ಕಂಪನಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಕಾರಣ ಮಹದೇವಪುರ ವಲಯದಲ್ಲಿ ಹೆಚ್ಚಿನ ಟ್ಯಾಕ್ಸ್ ಸಂಗ್ರಹವಾಗುತ್ತಿದೆ. ಇಲ್ಲಿ ಈ ಬಾರಿ 1,100 ಕೋಟಿ ರೂ. ಸಂಗ್ರಹ (ಪಾಲಿಕೆಯ ಒಟ್ಟು ಸಂಗ್ರಹದಲ್ಲಿ ಶೇ.40) ಆಗಿದೆ. ಪಾಲಿಕೆ ಇತಿಹಾಸದಲ್ಲಿ ಒಂದೇ ವಲಯದಲ್ಲಿ ಇಷ್ಟು ದೊಡ್ಡ ಮೊತ್ತ ಸಂಗ್ರಹವಾಗಿರುವುದು ಇದೇ ಮೊದಲು. ಮಹದೇವಪುರ ಹೊರತುಪಡಿಸಿದರೆ ಬೊಮ್ಮನಹಳ್ಳಿ, ಪೂರ್ವ ಹಾಗೂ ದಕ್ಷಿಣ ವಲಯಗಳು ನಂತರದ ಸ್ಥಾನದಲ್ಲಿವೆ. ದಾಸರಹಳ್ಳಿ ಹಾಗೂ ರಾಜರಾಜೇಶ್ವರಿನಗರ ವಲಯದಲ್ಲಿ ಅತಿ ಕಡಿಮೆ ಮೊತ್ತದ ಆಸ್ತಿತೆರಿಗೆ ವಸೂಲಾಗುತ್ತಿದೆ.

    2024-25ರಲ್ಲಿ ಹೆಚ್ಚು ಸಂಗ್ರಹ ನಿರೀಕ್ಷೆ:

    ಇತ್ತೀಚಿಗೆ ಮಂಡಿಸಲಾದ ಪಾಲಿಕೆ ಬಜೆಟ್‌ನಲ್ಲಿ ಏ.1ರಿಂದ ಮಾರ್ಗಸೂಚಿ ದರ ಆಧರಿಸಿ ಆಸ್ತಿತೆರಿಗೆ ಸಂಗ್ರಹಿಸುವ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾದ ಕಾರಣ ಹಳೆಯ ಪದ್ಧತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ನಗರವಾಸಿಗಳ ಬೆಂಬಲ ಪಡೆಯಲು ರಾಜ್ಯ ಸರ್ಕಾರ, ಹೊಸ ಪದ್ಧತಿಯನ್ನು ತಡೆಹಿಡಿದಿದೆ. ಜತೆಗೆ ಜು.31ರ ವರೆಗೆ ಶೇ.5 ರಿಯಾಯಿತಿ ೋಷಿಸಲಾಗಿದೆ. ದೊಡ್ಡ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರಿಗೆ ಪ್ರಕಟಿಸಿರುವ ಒಂದು ಬಾರಿ ಇತ್ಯರ್ಥ (ಒಟಿಎಸ್) ಯೋಜನೆ ಜುಲೈವರೆಗೂ ಮುಂದುವರಿಯಲಿದೆ. ಹೀಗಾಗಿ 2024-25ನೇ ಸಾಲಿನಲ್ಲಿ ಒಟಿಎಸ್ ಬಾಕಿ ಮೊತ್ತ ಸೇರಿ 5 ಸಾವಿರ ಕೋಟಿ ರೂ. ಆಸ್ತಿತೆರಿಗೆ ವಸೂಲಾತಿ ಆಗಲಿದೆ ಎಂಬ ವಿಶ್ವಾಸವನ್ನು ಪಾಲಿಕೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    2023-24ರಲ್ಲಿ 4,330 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಮಾ.31ರ ವರೆಗೆ ಸುಮಾರು 3,900 ಕೋಟಿ ರೂ. ವಸೂಲಾತಿ ಆಗಿದೆ. ಲೆಕ್ಕಪತ್ರಗಳನ್ನು ಪರಾಮರ್ಶಿಸಿದ್ದಲ್ಲಿ 4 ಸಾವಿರ ಕೋಟಿ ರೂ. ದಾಟಬಹುದು. 2024-25ನೇ ಸಾಲಿನಲ್ಲಿ ಒಟಿಎಸ್ ಸೇರಿದಂತೆ 5 ಸಾವಿರ ಕೋಟಿ ರೂ. ತೆರಿಗೆ ವಸೂಲಾಗುವ ಸಾಧ್ಯತೆ ಇದೆ.
    – ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

    ಆಸ್ತಿತೆರಿಗೆ ಸಂಗ್ರಹದ ವಿವರ:
    ಆರ್ಥಿಕ ವರ್ಷ ಗುರಿ ಸಂಗ್ರಹ
    2019-20 3,400 2,660
    2020-21 3,500 2,860
    2021-22 4,000 3,089
    2022-23 4,200 3,332
    2023-24 4,330 3,900

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts