More

    ಶರಣರ ವಿಚಾರಧಾರೆ ಸಮಾಜಕ್ಕೆ ಅಗತ್ಯ

    ಬಸವಕಲ್ಯಾಣ: ಸಾಮಾಜಿಕ ಸಮಾನತೆ, ಸರ್ವರಿಗೂ ಸಮಬಾಳು, ಸಮಪಾಲು ಸಂದೇಶ ಸಾರಿದ ಶರಣರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

    ಮಂಠಾಳ ಗ್ರಾಮದ ಶ್ರೀ ಗುರುಲಿಂಗೇಶ್ವರ ಚೌಕಿ ಮಠದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವ ಹಾಗೂ ಪ್ರಥಮ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿದ ಅವರು, ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಶರಣ ಸಂಸ್ಕೃತಿ ಉತ್ಸವ ಆಯೋಜಿಸಿ ಶರಣರ ತತ್ವ ಸಂದೇಶ ಪ್ರಚಾರ-ಪ್ರಸಾರ ಕಾರ್ಯ ನಡೆಯುತ್ತಿರುವುದನ್ನು ಶ್ಲಾಘಿಸಿದರು.

    ಶರಣರು ದೇವಾಲಯಗಳನ್ನು ನಿರ್ಮಿಸದೆ ದೇಹವೇ ದೇವಾಲಯ ಎಂದು ಸಾರಿದ್ದರು. ಮೌಢ್ಯ, ಜಾತಿಭೇದ, ವರ್ಣಭೇದವನ್ನು ವಿರೋಧಿಸಿದ್ದರು. ಶರಣರ ತತ್ವ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

    ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ರೈತರ ಬೆನ್ನಿಗೆ ನಿಂತಿರುವುದಾಗಿ ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತವೆ. ಆದರೆ ೭೫ ವರ್ಷವಾದರೂ ಅನ್ನದಾತರಿಗೆ ಮೂಲಸೌಲಭ್ಯ ಕಲ್ಪಿಸುವ ಬಗ್ಗೆ ಯಾರೊಬ್ಬರೂ ಚಿಂತನೆ ನಡೆಸಿಲ್ಲ. ರೈತರ ವೇದನೆ ಅರ್ಥೈಸಿಕೊಳ್ಳುವ ಜನಪ್ರತಿನಿಧಿಗಳ ಕೊರತೆ ಕಾಡುತ್ತಿದೆ. ರೈತರು ಜಾಗೃತರಾಗದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳಲಿದೆ ಎಂದು ಎಚ್ಚರಿಸಿದರು.

    ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಪೂರಕ ವಾತಾವರಣ ಕಲ್ಪಿಸಬೇಕು. ವಿದ್ಯುತ್, ಬೀಜ, ರಸಗೊಬ್ಬರ ಒದಗಿಸಬೇಕು. ಸಾವಯವ ಕೃಷಿಗೆ ಪ್ರಾಧ್ಯಾನ್ಯ ನೀಡಬೇಕು. ಬೆಳೆದ ಬೆಳೆಗೆ ನಿರ್ಣಾಯಕ ಬೆಲೆ ನಿಗದಿ ರೈತನಿಂದಲೇ ನಡೆಯಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.

    ಮುತ್ಯಾನ ಬಬಲಾದನ ಶ್ರೀ ಗುರುಪಾದಲಿಂಗೇಶ್ವರ ಶಿವಯೋಗಿಗಳು ಸಾನ್ನಿಧ್ಯ, ಮುಗಳನಾಗಾಂವದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಅಧ್ಯಕ್ಷತೆ, ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ರಟಕಲ್‌ನ ಶ್ರೀ ಸಿದ್ಧರಾಮ ಸ್ವಾಮೀಜಿ, ನಾಗೂರಿನ ಶ್ರೀ ಅಲ್ಲಮಪ್ರಭುಲಿಂಗ ಸ್ವಾಮೀಜಿ, ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ಪ್ರಮುಖರಾದ ಶಾಂತಪ್ಪ ಶೆಟ್ಟಗಾರ, ಚಂದ್ರಕಾಂತ ಹುಗ್ಗೆ ಪಾಟೀಲ್, ಶಿವಕುಮಾರ ಶಟಗಾರ, ರಾಚಣ್ಣ ಕೊರಳೆ, ಮಲ್ಲಯ್ಯ ಸ್ವಾಮಿ, ಬಸವರಾಜ ಮದರಗೆ, ಸಂಜುಕುಮಾರ ಪಂಚಾಳ, ವಿಶ್ವನಾಥ ಇತರರಿದ್ದರು.

    ರವೀಂದ್ರ ಶ್ಯಾಯಪ್ಪ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಪುಷ್ಪರಾಜ ಹಾರಕೂಡೆ ವಂದಿಸಿದರು. ರೇವಣಸಿದ್ದ ಸೂಗುರೆ ನಿರೂಪಣೆ ಮಾಡಿದರು. ಪ್ರಗತಿಪರ ರೈತರು, ಕೃಷಿ ಉತ್ಪನ್ನ ಮಾರಾಟಗಾರರು ಮತ್ತು ಕರಕುಶಲ ಕರ್ಮಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts