More

    ಹೆತ್ತವರ ಋಣ ತೀರಿಸಿ ದೈವತ್ವ ಸಂಪಾದನೆ ಮಾಡಿ

    ಅರಕಲಗೂಡು: ಪಾಲಕರನ್ನು ವೃದ್ಧಾಶ್ರಮಕ್ಕೆ ದೂಡುವುದು ನಮ್ಮ ಸಂಸ್ಕೃತಿಯಲ್ಲ. ಮುಪ್ಪಿನ ಕಾಲದಲ್ಲಿ ಹೆತ್ತವರ ಸೇವೆ ಮಾಡುವುದು ದೈವಿಶಕ್ತಿಗೆ ಸಮಾನವಾಗಿದ್ದು, ಪುಣ್ಯ ಸಂಪಾದನೆಗೆ ಹಾಗೂ ಮೋಕ್ಷಕ್ಕೆ ದಾರಿಯಾಗಲಿದೆ ಎಂದು ಹೊಸದುರ್ಗ ಭಗೀರಥ ಪೀಠಾಧಿಪತಿ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ನುಡಿದರು.

    ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಮೈಲಾರಲಿಂಗೇಶ್ವರ ದೇವಾಲಯದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ಪರೋಪಕಾರಿ ಜೀವಿಯಾಗಬೇಕು. ಅಜ್ಞಾನದ ಕೊಳೆ ತೊಳೆಯುವ ಗುರುಗಳು ಹಾಗೂ ಹೆತ್ತವರು ನಮ್ಮ ಕಣ್ಣ ಮುಂದಿರುವ ದೇವರು. ಇವರ ಋಣ ತೀರಿಸಿ ದೈವತ್ವ ಸಂಪಾದನೆ ಮಾಡಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.

    ಹೊಸದುರ್ಗ ಪೀಠದಲ್ಲಿ ಜಗತ್ತಿನಲ್ಲೇ ಎತ್ತರವಾದ ಭಗೀರಥ ಪುತ್ಥಳಿ ಸ್ಥಾಪನೆಯಾಗುತ್ತಿದ್ದು, ಭಕ್ತರು ಸಹಕಾರ ನೀಡಬೇಕು ಎಂದು ಕೋರಿದರು.
    ಗ್ರಾಪಂ ಸದಸ್ಯ ಸಂತೋಷ್, ಮುಖಂಡರಾದ ರಾಮೇಗೌಡ, ವೆಂಕಟೇಶ್, ಎಂ.ಎಸ್. ಯೋಗೇಶ್, ಕೃಷ್ಣಪ್ಪ, ರಾಜೇಗೌಡ, ನಾಗರಾಜು, ಪ್ರದೀಪ್, ಆನಂದ್, ಮಂಜು, ಮೋಹನ್, ಕುಮಾರ್, ಸೋಮಶೇಖರ್, ಸಚಿನ್, ಪುಟ್ಟರಾಜು, ಶೇಖರೇಗೌಡ ಹಾಗೂ ಗ್ರಾಮಸ್ಥರು ಇದ್ದರು. ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಮಾಜ ಸೇವಕ ಸಿ.ಡಿ. ದಿವಾಕರ್‌ಗೌಡ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಭಾಗವಹಿಸಿದ್ದರು.

    ಶ್ರೀ ಮೈಲಾರ ಕ್ಷೇತ್ರದ ಗುರು ವೆಂಕಟಪ್ಪ ಒಡೆಯರ ನೇತೃತ್ವದಲ್ಲಿ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ವೀರಗಾಸೆ, ಮಂಗಳವಾದ್ಯ ಸಮೇತ ಗೋಮಾತೆ ನೂತನ ವಿಗ್ರಹ, ಶಿಕರ ಕಳಸದೊಂದಿಗೆ ಉತ್ಸವ ನಡೆಯಿತು. ದೇವಸ್ಥಾನ ಪ್ರವೇಶ, ನವಗ್ರಹ, ಮೃತ್ಯುಂಜಯ, ಅಷ್ಟದಿಕ್ಪಾಲಕ, ಅಷ್ಟಲಕ್ಷ್ಮೀ, ಲಕ್ಷ್ಮೀನಾರಾಯಣ, ಉಮಾಮಹೇಶ್ವರಿ, ಹೋಮ, ಪ್ರಾಣ ಪ್ರತಿಷ್ಠಾಪನೆ, ಶಿಕರ ಕಳಸ ಸ್ಥಾಪನೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ, ಸಾಮೂಹಿಕವಾಗಿ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts