More

    ಹೊಲದಲ್ಲೇ ಹೂಕೋಸು ನಾಶ

    ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದ ರೈತನೋರ್ವ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದರಿಂದ ಕಷ್ಟಪಟ್ಟು ಬೆಳೆದ ಹೂಕೋಸು ಬೆಳೆಯನ್ನು ಹೊಲದಲ್ಲೇ ನಾಶ ಮಾಡಿದ್ದಾನೆ.

    ರೈತ ಈರಪ್ಪ ಹಳ್ಳದಕೇರಿ ಎಂಬುವವರು ತನ್ನ 2.5 ಎಕರೆ ಭೂಮಿಯಲ್ಲಿ ಹೂಕೋಸು ಬೆಳೆದಿದ್ದರು. ಆದರೆ, ಕರೊನಾ ವೈರಸ್ ಭೀತಿ ಹಾಗೂ ಲಾಕ್‌ಡೌನ್‌ದಿಂದ ಸಮೃದ್ಧವಾಗಿ ಬೆಳೆದ ತರಕಾರಿಯನ್ನು ವ್ಯಾಪಾರಸ್ಥರು ಖರೀದಿಸಲು ಹಿಂದೇಟು ಹಾಕಿದ್ದರಿಂದ ಅದನ್ನು ಟ್ರಾೃಕ್ಟರ್‌ನಿಂದ ರೂಟರ್ ಹೊಡೆದಿದ್ದಾರೆ. ಸಸಿಗಳು, ರಸಗೊಬ್ಬರ, ಔಷಧ ಹಾಗೂ ಭೂಮಿ ಉತ್ತುವುದು ಸೇರಿ 1 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಕಟಾವಿಗೆ ಬಂದ ಹೂಕೋಸಿಗೆ ಉತ್ತಮ ಬೆಲೆ ದೊರೆಯದೆ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಬೆಳೆಗೆ ಮಾಡಿದ ಖರ್ಚೂ ನೀಗಲಿಲ್ಲ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದರೆ ಸುಮಾರು 2.50 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ಇದೀಗ ಅಪಾರ ನಷ್ಟವುಂಟಾಗಿದ್ದು, ಸರ್ಕಾರ ತರಕಾರಿ ಬೆಳೆದು ಕೈಸುಟ್ಟುಕೊಂಡ ರೈತರ ನೆರವಿಗೆ ಧಾವಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಈರಪ್ಪ ಹಳ್ಳದಕೇರಿ ಹಾಗೂ ಬೈಲಹೊಂಗಲ ತಾಲೂಕಿನ ರೈತರು ಒತ್ತಾಯಿಸಿದ್ದಾರೆ.

    ಕುರಿಗಳಿಗೆ ಮೇವಾದ ಹಸಿಮೆಣಸಿನಕಾಯಿ: ಲಾಕ್‌ಡೌನ್ ಆದೇಶ ವಿಸ್ತರಣೆ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದರಿಂದ ನೊಂದ ಖಾನಾಪುರ ತಾಲೂಕಿನ ರೈತರು ಮೆಣಸಿನಕಾಯಿ ಹೊಲಕ್ಕೆ ಕುರಿಗಳನ್ನು ಬಿಟ್ಟು ಮೇಯಿಸಿ ನಾಶಪಡಿಸಿದ್ದಾರೆ. ತಾಲೂಕಿನ ಕಕ್ಕೇರಿ, ಬೀಡಿ, ಗಂದಿಗವಾಡ, ಪಾರಿಶ್ವಾಡ, ಲಿಂಗನಮಠ, ಚುಂಚವಾಡ, ಭೂರನಕಿ ಹಾಗೂ ಮಾಸ್ಕೇನಟ್ಟಿ ಗ್ರಾಮಗಳ ರೈತರು ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಇದೀಗ ನಾಶಪಡಿಸತೊಡಗಿದ್ದಾರೆ. ಕೆಲ ರೈತರು ಕುರಿ ಮೇಯಿಸಿದರೆ, ಇನ್ನೂ ಕೆಲವರು ಮೆಣಸಿನಕಾಯಿ ಗಿಡ ಕಟಾವು ಮಾಡುತ್ತಿದ್ದಾರೆ. ಕೆಲ ರೈತರು ರಾತ್ರೋ ರಾತ್ರಿ ಟ್ರಾೃಕ್ಟರ್ ಮೂಲಕ ರೂಟರ್ ಹೊಡೆದು ಬೆಳೆ ನಾಶಪಡಿಸುತ್ತಿದ್ದಾರೆ. ಕಕ್ಕೇರಿ ಗ್ರಾಮದ ರೈತ ಗಂಗಾಧರ ಸಂಬರ್ಗಿ ಹಾಗೂ ಖಾದರ್ ಗೋಕಾಕ ಅವರು ತಮ್ಮ ಹೊಲದಲ್ಲಿ ಬೆಳೆದ ಎಕರೆ ಮೆಣಸಿನಕಾಯಿಗೆ 30 ಸಾವಿರ ರೂ. ಖರ್ಚು ಮಾಡಿದ್ದರು. ಆದರೆ, ಲಾಕ್‌ಡೌನ್‌ನಿಂದ ಸೂಕ್ತ ಬೆಲೆ ಸಿಗದಿದ್ದರಿಂದ ನಷ್ಟಕ್ಕೆ ಗುರಿಯಾಗಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಖಾನಾಪುರ ತಾಲೂಕಿನ ಹಸಿಮೆಣಸಿನಕಾಯಿ ಬೆಳೆಗಾರರಿಗೆ ಆರ್ಥಿಕ ನೆರವು ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts