More

    ರಾಜ್ಯ ರಾಜಕೀಯದಲ್ಲಿ ಆಣೆ, ಪ್ರಮಾಣದ ಚರ್ಚೆ: ಧರ್ಮಸ್ಥಳದಲ್ಲಿ ಆಣೆ ಮಾಡಲು ನಾನು ರೆಡಿ; ಕುಮಾರಸ್ವಾಮಿ ಆಹ್ವಾನ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಮತ್ತೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ವಾಗ್ಯುದ್ಧ ನಡೆಯುತ್ತಿದೆ. 2011ರಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಮಧ್ಯೆ ಆಣೆ-ಪ್ರಮಾಣದ ಮಾತಿನ ಯುದ್ಧ ನಡೆದಿತ್ತು. ಈಗಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡುವೆ ಅಂತಹ ಯುದ್ಧಕ್ಕೆ ಪರಸ್ಪರ ಪಂಥಾವ್ಹಾನ ನೀಡಲಾಗಿದೆ.

    ‘ನಾವು ವರ್ಗಾವಣೆಯಲ್ಲಿ ಕಳೆದ 5 ತಿಂಗಳ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಎಂದು ಸಿಎಂ, ಡಿಸಿಎಂ ಸೇರಿ ಎಲ್ಲ ಸಚಿವರು ಆಣೆ ಮಾಡಲಿ. ನಾನೂ ಧರ್ಮಸ್ಥಳದಲ್ಲಿ ಆಣೆ ಮಾಡಲು ರೆಡಿ’ ಎಂದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಹ್ವಾನ ನೀಡಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ತಿರುಗೇಟು ಕೊಟ್ಟರು.

    ಶಾಸಕ ಬಾಲಕೃಷ್ಣ ಅವರ ಸವಾಲ್ ನಾನು ಸ್ವೀಕಾರ ಮಾಡುತ್ತೇನೆ. ಅದರಂತೆ ನನ್ನ ಸವಾಲನ್ನು ಅವರು ಸ್ವೀಕಾರ ಮಾಡಲಿ. ನಾನು, ನನ್ನ ಕುಟುಂಬ ಸರ್ಕಾರದ ಹಣವನ್ನು ಲೂಟಿ ಮಾಡಿಲ್ಲ. ಅಧಿಕಾರಿಗಳ ನಿಯೋಜನೆಯಲ್ಲಿ ಹಣಕ್ಕೆ ಅವಕಾಶ ನೀಡಿಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿ, ತಾಯಿ ಚಾಮುಂಡೇಶ್ವರಿ ಸನ್ನಿಧಿ ಎಲ್ಲೇ ಆದರೂ ನಾನು ಆಣ್ೆ ಮಾಡಲು ಸಿದ್ಧ ಎಂದರು.

    ಚುನಾವಣೆ ವೇಳೆ ನಮ್ಮ ಮನೆ ಹಣ ಖರ್ಚು ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಸದನದಲ್ಲಿಯೇ ಈ ಮಾತನ್ನು ಹೇಳಿದ್ದೇನೆ. ನಮ್ಮ ಕೆಲಸ ನೋಡಿ ಕೆಲವರು ನೀಡಿದ ದೇಣಿಗೆಯಿಂದ ಪಕ್ಷ ಕಟ್ಟಿದ್ದೇನೆ. ಚುನಾವಣೆ ಎದುರಿಸಿದ್ದೇನೆ. ಪಾಪದ ಹಣದಿಂದ ಚುನಾವಣೆ ಮಾಡಿಲ್ಲ ಎಂದು ಹೇಳಿದರು.
    ಈ ಸರ್ಕಾರ ಬಂದಂದಿನಿಂದ ಲೂಟಿ ಹೊಡೆದಿದ್ದೇ ಹೊಡೆದಿದ್ದು. ಇಡೀ ಜಗತ್ತಿಗೆ ಅದು ಗೊತ್ತಿದೆ. ನಮ್ಮ ಸರ್ಕಾರ ಇದ್ದಾಗ ಪೊಲೀಸರ ವರ್ಗಾವಣೆ, ಎಂಜಿನಿಯರ್‌ಗಳ ಬಡ್ತಿ ಸೇರಿ ಎಲ್ಲೂ ಒಂದು ರೂಪಾಯಿ ದಂಧೆ ನಡೆದಿಲ್ಲ. ನಾವು ಮಾಡಿಲ್ಲ ಎನ್ನುವ ಧೈರ್ಯ ಇವರಿಗೆ ಇದೆಯೇ? ಎಂದು ಪ್ರಶ್ನೆ ಮಾಡಿದರು.

    ನಾವು ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ. ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ತಪ್ಪಾಗಿ ಹಣ ಸಂಪಾದನೆ ಮಾಡಿದ್ದರೆ ರಾಜ್ಯ ಸರ್ಕಾರ ತನಿಖೆ ಮಾಡಿ ಅದನ್ನು ವಶಪಡಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

    ಸಿದ್ದರಾಮಯ್ಯಗೆ ನಾನೇ ವಿಲನ್

    ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ. ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳುತ್ತಾರೆ. ತಾಜ್ ನಲ್ಲಿ ನಾನು ಮೋಜು ಮಸ್ತಿ ಮಾಡುತ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡುತ್ತಿದ್ದೆ. ನನ್ನ ಬಳಿ ಎಲ್ಲ ದಾಖಲೆ ಇದೆ ಎಂದು ಟಾಂಗ್ ನೀಡಿದರು.
    ಕಾಂಗ್ರೆಸ್ ನಾಯಕರು ನನಗೆ ಸಿಎಂ ಎನ್ನುವ ಗೌರವ ಕೊಡದೇ ಪಪೆಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

    ಸರ್ಕಾರ ಬೀಳಿಸಿದ್ದ ಸಿದ್ದರಾಮಯ್ಯ

    ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸರ್ಕಾರ ಬೀಳಿಸಿದ್ದರು ಎಂದು ಹೇಳಿದ್ದೆ. ಆದರೆ ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ. ರಮೇಶ್ ಜಾರಕಿಹೋಳಿ ಯಾರು? ಅವರಿಗೂ ನನಗೂ ಯಾವ ಶತ್ರುತ್ವ ಇತ್ತು? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರ್ಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ಆರೋಪ ಮಾಡಿದರು.
    ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್‌ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ಹರಿಹಾಯ್ದರು.

    ಛೀ ಥೂ ಎನ್ನುವ ಕಾಲ ಬರುತ್ತದೆ

    ಕಾಂಗ್ರೆಸ್ ಎಲ್ಲ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ. ಆ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ಹೆಸರು ಬದಲಿಸಿದರೆ ಅಮರಣಾಂತ ಸತ್ಯಾಗ್ರಹ 
    ಕನಕಪುರ ಅಭಿವೃದ್ಧಿ ಮಾಡಿದ್ದೇ ನಾವು. ಬೇಕಿದ್ದರೆ ಏನೇನು ಮಾಡಿದ್ದೇನೆ ಹೇಳುತ್ತೇನೆ. ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ರಾಮನಗರ ಜಿಲ್ಲೆ ಹೆಸರು ಬದಾಯಿಸಿದರೆ ಅಮರಣಾಂತ ಉಪವಾಸ ಮಾಡುತ್ತೇನೆ. ನನ್ನ ಆರೋಗ್ಯದ ಬಗ್ಗೆಯೂ ನಾನು ಚಿಂತಿಸುವುದಿಲ್ಲ. ಕೊನೆ ಕ್ಷಣದ ವರೆಗೂ ನಾನು ಉಪವಾಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts