More

    ಬೆಳಗಾವಿಯಲ್ಲಿ ಅಬ್ಬರಿಸಿದ ವರುಣ

    ಬೆಳಗಾವಿ: ಬೆಳಗಾವಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು-ಮಿಂಚು ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಿತು. ರಭಸದ ಮಳೆಯಿಂದಾಗಿ ಚರಂಡಿಗಳು ಅಲ್ಲಲ್ಲಿ ಬ್ಲಾಕ್ ಆಗಿ ರಸ್ತೆಗಳ ಮೇಲೆ ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು.

    ಮಧ್ಯಾಹ್ನ 1:45ಕ್ಕೆ ಆರಂಭವಾದ ಮಳೆ ಸತತ 1 ಗಂಟೆಯವರೆಗೂ ಅಬ್ಬರವಾಗಿಯೇ ಸುರಿಯಿತು. ಬೆಳಗಾವಿ ನಗರದ ಬೆಂಡಿ ಬಜಾರ್, ಗಣಪತಿ ಗಲ್ಲಿ, ಖಡೇಬಜಾರ್, ಶಹಾಪುರ, ಗಾಂಧಿ ನಗರ, ಸಮರ್ಥ ನಗರ, ಹಳೇ ಪಿಬಿ ರಸ್ತೆ ಹಾಗೂ ವಿವಿಧ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳು, ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

    ರಸ್ತೆಗಳು ಬ್ಲಾಕ್: ಮಳೆ ನೀರಿನಿಂದಾಗಿ ಪ್ರಮುಖ ರಸ್ತೆಗಳು ಬ್ಲಾಕ್ ಆಗಿದ್ದವು. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳು ಹಾಗೂ ವಿವಿಧ ಕಡೆ ಸ್ಮಾರ್ಟ್‌ಸಿಟಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಂಡಿರುವುದರಿಂದ ಕೆಲವೆಡೆ ಮಳೆ ನೀರು ಹರಿದು ಹೋಗಲು ಆಗಲಿಲ್ಲ.

    ಬೆಂಡಿ ಬಜಾರ್‌ನಲ್ಲಿ ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಮೌಲ್ಯದ ಬಟ್ಟೆಗಳು ನೀರು ಪಾಲಾದವು. ಅಲ್ಲಲ್ಲಿ ರಸ್ತೆಗಳು ಬ್ಲಾಕ್ ಆಗಿದ್ದರಿಂದ ಜನರು ಪರದಾಡುವಂತಾಗಿತ್ತು. ಭಾನುವಾರ ಹಾಗೂ ಲಾಕ್‌ಡೌನ್ ಇಲ್ಲದ್ದರಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಆದರೆ, ಮಧ್ಯಾಹ್ನ ಏಕಾಏಕಿ ಸುರಿದ ಮಳೆ, ವ್ಯಾಪಾರಸ್ಥರಿಗೆ ಶಾಪವಾಗಿ ಪರಿಣಮಿಸಿತು.

    ನಗರದ ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಗಾಳಿ: ಬೆಳಗಾವಿ ನಗರದ ವಿವಿಧ ಕಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ರಸ್ತೆಯ ಎರಡೂ ಬದಿಯಲ್ಲಿ ಅಗೆದಿರುವ ತಗ್ಗುಗಳಲ್ಲಿ ಮಳೆ ನೀರು ತುಂಬಿತು. ಮತ್ತೊಂದೆಡೆ, ಭಯ ಹುಟ್ಟಿಸುವ ರೀತಿಯಲ್ಲಿ ಬೀಸಿದ ರಭಸದ ಗಾಳಿಯಿಂದಾಗಿ ವಿದ್ಯುತ್ ತಂತಿಗಳು ಮರದ ಟೊಂಗೆಗಳಿಗೆ ತಾಗುತ್ತಿದ್ದವು.

    ಕೆಲ ಪ್ರದೇಶದಲ್ಲಿ ಜೋರಾಗಿ ಬೀಸಿದ ಗಾಳಿಗೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗುತ್ತಿದ್ದರಿಂದ ಬೆಂಕಿ ಕಿಡಿ ಹಾರುತ್ತಿದ್ದವು. ಇದರಿಂದ ಸಾರ್ವಜನಿಕರು ಓಡಾಡಲು ಆತಂಕಗೊಂಡರು. ಇನ್ನಾದರೂ ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮರದ ಟೊಂಗೆಗಳಿಗೆ ವಿದ್ಯುತ್ ತಂತಿ ತಗುಲುವುದನ್ನು ತಪ್ಪಿಸಬೇಕು ಎಂದು ಕ್ಲಬ್ ರಸ್ತೆಯ ನಿವಾಸಿ ರವಿಕುಮಾರ ಎಂ.ಪಾವಸೆ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts