More

    ಮಾಲ್ದಾರೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ

    ಸಿದ್ದಾಪುರ: ಕಾಡುಪ್ರಾಣಿಗಳ ಹಾವಳಿ, ಕುಡಿಯುವ ನೀರು, ರಸ್ತೆ, ಆಟದ ಮೈದಾನ, ಸ್ಮಶಾನ ಜಾಗ, ಸಾರಿಗೆ ಬಸ್ ಸಂಚಾರ, ಮಾದಕ ವಸ್ತುಗಳ ಬಳಕೆ-ಮಾರಾಟ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ವಿಚಾರಗಳ ಕುರಿತು ಗ್ರಾಮ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

    ಮಾಲ್ದಾರೆ ಪಂಚಾಯಿತಿ ಮುಂಭಾಗ ಗ್ರಾಪಂ ಅಧ್ಯಕ್ಷೆ ಮಾಲತಿ ಅವರ ಅಧ್ಯಕ್ಷತೆ ಹಾಗೂ ನೀಡಲ್ ಅಧಿಕಾರಿ ನವೀನ್‌ಕುಮಾರ್ ಸಮ್ಮುಖದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು.

    ಸಭೆ ಪ್ರಾರಂಭವಾಗುತ್ತಿದ್ದಂತೆ ಸ್ಥಳೀಯರು ಅಧಿಕಾರಿಗಳ ಗೈರಿನ ಬಗ್ಗೆ ಗಮನ ಸೆಳೆದರು. ಆಹಾರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬರುವವರೆಗೂ ಗ್ರಾಮ ಸಭೆ ಮುಂದೂಡಬೇಕೆಂದು ಪಟ್ಟು ಹಿಡಿದರು. ತಕ್ಷಣ ಪಂಚಾಯಿತಿ ಅಧ್ಯಕ್ಷರು ತಹಸೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಬಾರದ ಅಧಿಕಾರಿಗಳನ್ನು ಕಳಿಸುವಂತೆ ಮನವಿ ಮಾಡಿದರು.

    ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಆಹಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಭೆಗೆ ಕಳಿಸಿಕೊಟ್ಟರು. ಬಳಿಕ ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಸ್ಥಳೀಯ ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡರು.

    ಕೆಲಸ ಬಿಟ್ಟು ಗ್ರಾಮಸಭೆಗೆ ಬಂದರೆ ಅಧಿಕಾರಿಗಳು ಗೈರಾಗಿರುತ್ತಾರೆ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಗಮನ ಸೆಳೆಯಬೇಕೆಂದು ಸಭೆಯಲ್ಲಿದ್ದವರು ಒತ್ತಾಯಿಸಿದರು. ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಶಾಶ್ವತ ಬದಲಿ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

    ಸಿದ್ದಾಪುರ-ಮಾಲ್ತಾರೆ ಮುಖ್ಯ ರಸ್ತೆ ಬದಿಯ ಅರಣ್ಯದಂಚಿನಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಸೂಕ್ತ ಕ್ರಮ ವಹಿಸಬೇಕು. ಅಲ್ಲದೇ, ಕಾರ್ಮಿಕರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದು ಕೂಡಲೇ ಪೈಸಾರಿ ಜಾಗ ಗುರುತಿಸಿ ನಿವೇಶನ ನೀಡಬೇಕು. ಜತೆಗೆ ಎಲ್ಲ ಪಡಿತರದೊಂದಿಗೆ ಸೀಮೆಎಣ್ಣೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

    ಸ್ಮಶಾನ ಜಾಗ ಗುರುತಿಸಿ ಆರ್‌ಟಿಸಿ ನೀಡಲಾಗಿದ್ದದೂ ಅಧಿಕಾರಿಗಳು ಜಾಗ ಗುರುತಿಸಿ ಕೊಟ್ಟಿಲ್ಲ. ಕಾಟಾಚಾರಕ್ಕೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರಳುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಆಟದ ಮೈದಾನ ಇಲ್ಲ. ಶಾಲೆ ಮುಂಭಾಗದ ರಸ್ತೆ ಬದಿಯ ಮೈದಾನದಲ್ಲಿ ಮರಗಳು ಬೆಳೆದು ನಿಂತಿದ್ದು ಅರಣ್ಯ ಇಲಾಖೆ ತೆರವುಗೊಳಿಸಬೇಕು. ಜತೆಗೆ ಪಿರಿಯಾಪಟ್ಟಣ- ಮಾಲ್ದಾರೆ -ಸಿದ್ದಾಪುರ ಮಾರ್ಗಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
    ಮಾಲ್ದಾರೆ ಸುತ್ತಮುತ್ತ ಕಳ್ಳತನ ಹೆಚ್ಚಾಗುತ್ತಿದ್ದು, ಕ್ಯಾಮರಾ ಅಳವಡಿಸಬೇಕು. ಗ್ರಾಮದಲ್ಲಿನ ಸಮುದಾಯದ ಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಲವೆಡೆ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿದ್ದು ಸರಿಪಡಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ಮಾರಾಟ ಮಾಡಲಾಗುತ್ತಿದ್ದು, ಮೇಲಧಿಕಾರಿಗಳು ಪರಿಶೀಲಿಸಬೇಕೆಂದು ಒತ್ತಾಯಿಸಿದರು.

    ಮಾಲ್ದಾರೆಯಲ್ಲಿ ನೂತನವಾಗಿ ಪಶುವೈದ್ಯ ಆಸ್ಪತ್ರೆ ಪ್ರಾರಂಭಿಸಲಾಗಿದೆಯಾದರೂ ವೈದ್ಯರು, ಸಿಬ್ಬಂದಿ ಇಲ್ಲ. ಹಾಗಾಗಿ ಸಿಬ್ಬಂದಿ ನೇಮಕ ಮಾಡುವುದರೊಂದಿಗೆ ಸೇವೆ ನೀಡಬೇಕು. ಇನ್ನು ನ್ಯಾಯಬೆಲೆ ಅಂಗಡಿಗಳು ಸಮಯಕ್ಕೆ ಸರಿಯಾಗಿ ಸೇವೆ ನೀಡುತ್ತಿಲ್ಲ. ಕೆಲವು ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದು, ಉಚಿತ ಅಕ್ಕಿಗೆ ಹಣ ಕೇಳುತ್ತಿದ್ದಾರೆ ಎಂದು ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಖರೀದಿಸಿ ನಿವೇಶನವನ್ನಾಗಿ ಪರಿವರ್ತನೆ ಮಾಡಿ ಸರ್ಕಾರದ ನಿಯಮ ಪಾಲಿಸದೆ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರು.

    ಶಾಲೆ ಸಮೀಪವಿರುವ ಬಾರ್‌ನ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಶುಚಿತ್ವ ಕಾಪಾಡಿಕೊಳ್ಳುವಂತೆ ಬಾರ್ ಮಾಲೀಕರಿಗೆ ಸೂಚನೆ ನೀಡಬೇಕೆಂದು ಶಿಕ್ಷಕರು ಒತ್ತಾಯಿಸಿದರು.

    ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಅಧ್ಯಕ್ಷೆ ಮಾಲತಿ, ವಿವಿಧ ಯೋಜನೆಗಳ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಗ್ರಾಮಸ್ಥರು ಕಂದಾಯ ಪಾವತಿಯೊಂದಿಗೆ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಪಿಡಿಒ ಚಂದ್ರಶೇಖರ್, ಉಪಾಧ್ಯಕ್ಷ ಕುಂಞಣ್ಣ, ಸದಸ್ಯರಾದ ಸಮೀರ್, ನಿಯಾಜ್, ಮೊಹಮ್ಮದ್ ಅಲಿ, ಹನೀಫ್, ಚಂದ್ರ, ಜಯಾ, ಸುಜಾತಾ, ಕಾವ್ಯಾ, ಸರಸ್ವತಿ, ಇಸ್ಮಾಯಿಲ್, ಶೋಭಾ, ಮುತ್ತಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts