More

    ಕ್ಷೇತ್ರಗಳಲ್ಲಿ ಜನಪ್ರತಿನಿಧಿ ಕಂಡರೂ ಭಯ!

    ಬೆಳಗಾವಿ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಸ್ವತಃ ಜನಪ್ರತಿನಿಧಿಗಳೇ ಅನುಸರಿಸುತ್ತಿಲ್ಲ. ಇದರಿಂದಾಗಿ ಮಹಾಮಾರಿ ಕರೊನಾ ಸೋಂಕನ್ನು ತಮ್ಮ ಕುಟುಂಬಸ್ಥರು ಹಾಗೂ ಕ್ಷೇತ್ರದ ಜನರಿಗೂ ಹರಡಲು ಕಾರಣರಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಈಗ ಕೇಳಿಬರತೊಡಗಿದೆ.

    ವಿಶ್ವವ್ಯಾಪಿಯಾಗಿ ಕರೊನಾ ಅಟ್ಟಹಾಸ ಮೆರೆಯುತ್ತಿದ್ದರೂ ಸಚಿವರು ಹಾಗೂ ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಇಲ್ಲಿಯೂ ನೂರಾರು ಜನರು ಹಾಗೂ ಪಕ್ಷದ ಕಾರ್ಯಕರ್ತರು ಸರ್ಕಾರದ ಯಾವುದೇ ನಿಯಮ ಪಾಲಿಸದೆ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ಭಾಷಣ ಮಾಡುವ ಜನಪ್ರತಿನಿಧಿಗಳು, ‘ಎಲ್ಲರೂ ದೈಹಿಕ ಅಂತರ ನಿಯಮ ಪಾಲಿಸಬೇಕು.

    ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂಬ ಸಲಹೆ ನೀಡುತ್ತಾರೆ. ಆದರೆ, ಸ್ವತಃ ಅವರೇ ದೈಹಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಅವರೂ ಸೋಂಕಿಗೆ ತುತ್ತಾಗಿ, ಇತರರಿಗೂ ಹರಡಿಸುತ್ತಿದ್ದಾರೆ ಎಂದು ಶಾಸಕರ ಆಪ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
    ಶಾಸಕರಿಗೆ ಸೋಂಕು: ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರು ಸೇರಿದಂತೆ ರಾಜ್ಯದಲ್ಲಿ ಅನೇಕ ಜನಪ್ರತಿನಿಧಿಗಳಿಗೆ ಕರೊನಾ ದೃಢಪಟ್ಟಿದೆ.

    ಹೀಗಾಗಿ ಕರೊನಾ ವೈರಸ್ ಬದಲಾಗಿ ಕ್ಷೇತ್ರದ ಜನರು ಇವರಿಂದಲೇ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
    ಬೆಳಗಾವಿ ಜಿಲ್ಲೆಯಲ್ಲಿ ಐವರು ಸಚಿವರು ಹಾಗೂ 14 ಶಾಸಕರು ಇದ್ದು, ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಸೋಂಕು ದೃಢಪಟ್ಟ ಪ್ರದೇಶಗಳಿಗೂ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಈ ಕಾರ್ಯವೇ ಅವರಿಗೆ ಮುಳುವಾಗಿ ಪರಿಣಮಿಸಿದ್ದು, ಅವರಿಗೂ ಕರೊನಾ ವೈರಸ್ ಹರಡಲು ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಇಬ್ಬರು ಶಾಸಕರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೆಂಬಲಿಗರು ಮತ್ತು ಅಧಿಕಾರಿಗಳಲ್ಲೂ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಅವರೆಲ್ಲರೂ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

    ಕರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ಜನಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರುವುದನ್ನು ತಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    ಅಧಿಕಾರಿಗಳಿಗೂ ಕರೊನಾ ವೈರಸ್ ಭೀತಿ: ಜನಪ್ರತಿನಿಧಿಗಳಿಂದ ಇದೀಗ ರಾಜ್ಯದ ಅಧಿಕಾರಿಗಳಿಗೂ ಕರೊನಾ ಸೋಂಕು ತಗಲುವ ಭೀತಿ ಎದುರಾಗಿದೆ. ಜಿಲ್ಲೆ ಮಾತ್ರವಲ್ಲದೆ, ಹೊರ ರಾಜ್ಯಗಳಿಗೂ ಹೋಗಿಬಂದ ಸಚಿವರು ಮತ್ತು ಶಾಸಕರು ಕ್ಷೇತ್ರದಲ್ಲಿ ಪದೇ ಪದೆ ಸಭೆ ಆಯೋಜಿಸುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳಿಗೆ ‘ಅತ್ತ ಧರಿ ಇತ್ತ ಪುಲಿ’ ಎಂಬ ಸಂದಿಗ್ಧ ಸ್ಥಿತಿ ಉಂಟಾಗುತ್ತಿದೆ. ಅವರು ಸಭೆ ಕರೆದರೆ ಹೋಗಲೇಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಎಲ್ಲಿ ತಮಗೂ ಸೋಂಕು ತಗಲುತ್ತದೆಯೇ ಎಂಬ ಆತಂಕ ಮತ್ತೊಂದೆಡೆ. ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts