More

    ಮುರಗೋಡದಲ್ಲಿ ಅಸ್ವಚ್ಛತೆಯ ತಾಂಡವ!

    ಮುರಗೋಡ: ಸರ್ಕಾರ ಗ್ರಾಮಾಂತರ ಪ್ರದೇಶದ ಪ್ರತಿ ಗಲ್ಲಿಗಲ್ಲಿಗಳಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಯೋಜನೆಯಡಿ ವಿವಿಧ ಸುಧಾರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದೆ. ಆದರೆ, ಕೆಲವೆಡೆ ಗುತ್ತಿಗೆದಾರರ ನಿರ್ಲಕ್ಷ್ಯ, ಕಳಪೆ ಕಾಮಗಾರಿಯಿಂದಾಗಿ ಯೋಜನೆಗಳ ಉದ್ದೇಶ ಗರಿಷ್ಠ ಪ್ರಮಾಣದಲ್ಲಿ ಸಫಲವಾಗುತ್ತಿಲ್ಲ.

    ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಚರಂಡಿಗಳು ಬಾಯಿ ತೆರೆದುಕೊಂಡಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿವೆ. ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ತೊಂದರೆ ಸಹಿಸದ ಜನರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿನ ಗುಡ್ಡದ ಮಠದ ಓಣಿ, ಬಸವೇಶ್ವರ ದೇವಸ್ಥಾನ ಹತ್ತಿರ, ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಮಾಡಿದ್ದು, ಕಳಪೆ ಕಾಮಗಾರಿಯಿಂದ ಚರಂಡಿ ಕುಸಿದು ಬೀಳುತ್ತಿದೆ. ಈ ರಸ್ತೆಯಲ್ಲಿ ನಡೆದುಕೊಂಡು ನೂರಾರು ಜನರು ಮಹಾಂತ ದುರದುಂಡೇಶ್ವರ ಮಠಕ್ಕೆ, ಬ್ಯಾಂಕ್ ಹಾಗೂ ಇತರ ಕೆಲಸಕ್ಕಾಗಿ ಹೋಗುವುದು ಅನಿವಾರ್ಯವಿದೆ. ರಸ್ತೆಯ ಮಧ್ಯೆ ಇರುವ ಒಳಚರಂಡಿಯಲ್ಲಿ 6 ರಿಂದ 7 ಗುಂಡಿಗಳು ಬಾಯಿ ತೆರೆದುಕೊಂಡಿದ್ದು, ರಾತ್ರಿ ಸಮಯದಲ್ಲಿ ಜನರು ಚರಂಡಿಗೆ ಬಿದ್ದು ಪೆಟ್ಟು ಮಾಡಿಕೊಂಡ ಉದಾಹರಣೆಗಳಿವೆ. ವೃದ್ಧರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಜನರು ಇಲ್ಲಿ ಸಂಚರಿಸುತ್ತಾರೆ. ಚರಂಡಿಯಿಂದ ಹೊರಸೂಸುವ ದುರ್ವಾಸನೆಯಿಂದ ಜನರು ಬೇಸತ್ತಿದ್ದಾರೆ. ಸೊಳ್ಳೆಗಳ ಕಾಟಕ್ಕೆ ಬೇಸತ್ತ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಸೊಳ್ಳೆಗಳು ಹೆಚ್ಚಾಗಿ ಡೆಂೆ, ಚಿಕೂನ್‌ಗುನ್ಯ ಹೆಚ್ಚುವ ಭಯ ಜನರನ್ನು ಕಾಡುತ್ತಿದೆ. ಸ್ವಚ್ಛತೆ ಕೈಗೊಂಡು ಚರಂಡಿ ಬಾಯಿ ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಸಂತೋಷ ಮೊರಬದ, ಮುತ್ತು ಮಲ್ಲಯ್ಯನವರಮಠ, ಕೆ.ಜಿ.ಗುಡ್ಡದಮಠ, ಮಹಾಂತೇಶ ಬೆಣ್ಣಿ ಅಳಲು ತೋಡಿಕೊಂಡಿದ್ದಾರೆ.

    ಮುರಗೋಡ ಗುಡ್ಡದ ಮಠದ ಓಣಿಯ ರಸ್ತೆ ಮಧ್ಯೆ ಚರಂಡಿ ಬಾಯ್ತೆರೆದ ಸ್ಥಿತಿಯಲ್ಲಿರುವ ಬಗ್ಗೆ ಸ್ಥಳೀಯರು ಮನವಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಲಾಕ್‌ಡೌನ್ ಹಾಗೂ ಕೋವಿಡ್-19 ಕೆಲಸಗಳ ಹಿನ್ನೆಲೆಯಲ್ಲಿ ಕಾಮಗಾರಿ ದುರಸ್ತಿಗೆ ವಿಳಂಬವಾಗಿದೆ. ಶೀಘ್ರ ಚರಂಡಿ ದುರಸ್ತಿ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
    | ಡಿ.ಎಸ್.ಕನಕಣ್ಣವರ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಮುರಗೋಡ

    | ಮಹಾಂತೇಶ ಬಾಳೀಕಾಯಿ ಮುರಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts