More

    ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ, ಮೌನ ದೌರ್ಬಲ್ಯವಲ್ಲ! ಸಚಿವ ಸತೀಶ್ ಗುಡುಗು

    ಬೆಂಗಳೂರು: ‘ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಆಗಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಆಗಿದೆ. ನಾನು ಕೂಡ ಕಾಂಪ್ರೊಮೈಸ್ ಮಾಡಿಕೊಂಡಿದ್ದೇನೆ. ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ. ನಾನು ಅನುಸರಿಸಿಕೊಂಡು ಬರುತ್ತಿದ್ದೇನೆ. ಪಕ್ಷದ ದೃಷ್ಟಿಯಿಂದ ಕಾಂಪ್ರಮೈಸ್ ಆಗಿದ್ದೇನೆ’ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮೊಳಗೆ ಕುದಿಯುತ್ತಿರುವ ಅಸಮಾಧಾನದ ಕಾರಣ ಹೊರಗೆಡಹಿದ್ದಾರೆ.
    ಈ ಮೂಲಕ ಸರ್ಕಾರದಲ್ಲಿ ಪವರ್ ಸೆಂಟರ್‌ಗಳ ಹಸ್ತಕ್ಷೇಪದ ಬಗ್ಗೆ ನಿಚ್ಚಳ ಮಾಹಿತಿ ಪ್ರಭಾವಿ ಸಚಿವರಿಂದಲೇ ಹೊರಬಿದ್ದಂತಾಗಿದೆ. ಹಾಗೆಯೇ ಸಮಾನ ಮನಸ್ಕ ಶಾಸಕರೊಂದಿಗೆ ಪ್ರವಾಸ ಹೊರಟು ನಿಂತು ಹೈಕಮಾಂಡ್ ಕಳವಳಕ್ಕೆ ಕಾರಣರಾಗಿದ್ದ ಸಚಿವ ಜಾರಕಿಹೊಳಿ ಅವರ ಉದ್ದೇಶವೂ ಬಹಿರಂಗವಾಗಿದೆ.
    ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರ ಬದಲಾವಣೆಗೆ ಶಿಫಾರಸು ಮಾಡಿದ್ದೇನೆ. ಹೈಕಮಾಂಡ್ ಯಾವ ರೀತಿಯಲ್ಲಿ ಮಾಡುತ್ತದೆ ಎಂದು ನೋಡೋಣ. ನಾನು ವರ್ಗಾವಣೆಗೆ ಶಿಫಾರಸು ಮಾಡಿದ್ದೆ, ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿಗಮ, ಮಂಡಳಿ ಕಾರ್ಯಕರ್ತರಿಗೆ ಕೊಡಿ ಅಂತ ಶಿಫಾರಸು ಮಾಡಿದ್ದೆ. ಕೇವಲ ಶಾಸಕರಿಗೆ ಮಾತ್ರ ಬೇಡ ಎಂದು ಹೇಳಿದ್ದೇನೆ. ಮಾಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ತಮ್ಮ ಬೇಸರ ಹೊರಹಾಕಿದರು.
    ನನ್ನ ಮೌನ ದೌರ್ಬಲ್ಯ ಅಲ್ಲವೇ ಅಲ್ಲ. ಕಳೆದ 30 ವರ್ಷದ ರಾಜಕೀಯದಲ್ಲಿ ಮೌನ ಸಕ್ಸಸ್ ಕೊಟ್ಟಿದೆ ಎಂದ ಅವರು ಶಾಸಕರೊಂದಿಗೆ ಟೂರ್ ಪ್ಲಾನ್ ಮುಂದೆ ಕೂಡ ಇರಲಿದೆ. ನಾವು ಟೂರು ಮಾಡಲು ಯಾವುದೆ ಅಡ್ಡಿಯಿಲ್ಲ. ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ. ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು.
    ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದು ಹೇಳಿದರು.
    ಡಿಸಿಎಂ ಬೆಳಗಾವಿ ಭೇಟಿ ವೇಳೆ ಉಸ್ತುವಾರಿ ಸಚಿವನಾಗಿ ಅಲ್ಲಿರಬೇಕಿತ್ತು. ಆದರೆ, ನಾನು ಇರುವುದಿಲ್ಲ ಎಂದು ಡಿ.ಕೆ ಶಿವಕುಮಾರ್‌ಗೆ ಒಂದು ದಿನ ಮೊದಲೇ ತಿಳಿಸಿದ್ದೆ ಎಂದು ಸ್ಪಷ್ಟಪಡಿಸಿದರು.
    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜತೆ ಯಾವುದೇ ಕಿರಿಕಿರಿ ಇಲ್ಲ. ನಾವು ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನೂ ನಾವು ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ನಾನು ಆರು ಬಾರಿ ಶಾಸಕ ಆಗಿದ್ದೇನೆ. ಅವರು ಎರಡು ಬಾರಿ ಮಾತ್ರ ಶಾಸಕರಾಗಿದ್ದಾರೆ. ಕೆಲವರು ಒಂದೆ ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಎಲ್ಲರ ಜತೆಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
    ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್ಸಿಗೆ ಬರುವಾಗ ನನ್ನ ಜತೆ ಮಾತನಾಡಿದ್ದರು. ಕಿರಿಕಿರಿ ಮಾಡುವುದಾದರೆ ನಾನು ಪಕ್ಷ ಸೇರಲ್ಲ ಎಂದು ಹೇಳಿದ್ದರು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಹೆಸರನ್ನ ನೀಡಿದ್ದೇನೆ. ಲಕ್ಷ್ಮಣ ಸವದಿ ಎಲ್ಲೂ ಕಾರ್ಯಾಧ್ಯಕ್ಷ ಸ್ಥಾನ ಕೇಳಿಲ್ಲ. ಅವರನ್ನು ಮಾಡಿದರೆ ನಮ್ಮ ಅಭ್ಯಂತರ ಏನು ಇಲ್ಲ. ಸವದಿ, ನಿಂಬಾಳ್ಕರ್ ಯಾರೇ ಕಾರ್ಯಧ್ಯಕ್ಷರಾದರೂ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts