More

    ಬಿಸಿ ತುಪ್ಪವಾದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಬದಲಾವಣೆ

    ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಅದಲು ಬದಲಿನ ವಿಚಾರವು ನುಂಗಲಾರದ, ಉಗಿಯಲಾಗದ ಬಿಸಿ ತುಪ್ಪ ಎನ್ನುವಂತಾಗಿದ್ದು, ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ಹೌದು! ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಂ.ಟಿ.ಬಿ.ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ ಕೆ.ಸುಧಾಕರ್ ನೇಮಕದೊಂದಿಗೆ ಅತೃಪ್ತಿ ಹೊರ ಬರುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವುದರ ಜತೆಗೆ ಸ್ಥಳೀಯವಾಗಿ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಯೋಜನೆಯ ಆಸೆಗೆ ಜವಾಬ್ದಾರಿ ಹಂಚಿಕೆಯಲ್ಲಿನ ಏರುಪೇರು ತಣ್ಣೀರು ಎರಚಿದೆ.

    ಈಗಾಗಲೇ ಪಕ್ಷದ ಮುಖಂಡರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು, ಬೆಂಬಲಿಗರು ನಾಯಕರನ್ನು ಭೇಟಿ ಮಾಡಿ, ಹೊಸ ಬೆಳವಣಿಗೆಯ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ನಿಧಾನವಾಗಿ ಒತ್ತಡವನ್ನು ಹೇರಿ, ನಿರ್ಧಾರವನ್ನು ಬದಲಾಯಿಸುವ ನಿಟ್ಟಿನಲ್ಲಿ ಕಸರತ್ತು ನಡೆಸಬೇಕೆಂಬ ಸಲಹೆಯನ್ನು ನೀಡಲಾಗಿದೆ. ಇದೇ ವೇಳೆ ಹಲವರು ಅಸ್ತಿತ್ವಕ್ಕೆ ಧಕ್ಕೆ ಬರುವ, ಇತರ ಜಿಲ್ಲೆಯ ಮೇಲೆ ಅನವಶ್ಯಕ ನಿಗಾ, ಹೆಚ್ಚಿನ ಒತ್ತಡ, ಕ್ಷೇತ್ರದ ಕಡೆಗಣನೆಯ ಟೀಕೆಯ ಮಾತುಗಳ ಬಗ್ಗೆ ಗಮನ ಸೆಳೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಹಿರಂಗ ತೇಪೆ, ಆಂತರಿಕ ಅತೃಪ್ತಿ: ಆಯಾ ಜಿಲ್ಲೆಯ ಉಸ್ತುವಾರಿಯನ್ನು ಪಡೆಯಬೇಕೆಂಬುದು ಸಹಜವಾಗಿ ಸಚಿವರಾದ ಡಾ ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಬಯಕೆಯಾಗಿತ್ತು. ಕರೊನಾ ನಿಯಂತ್ರಣ, ರಾಷ್ಟ್ರೀಯ ಉತ್ಸವಗಳಲ್ಲಿ ಧ್ವಜಾರೋಹಣ, ಪ್ರಗತಿ ಪರಿಶೀಲನಾ ಸಭೆ ಸೇರಿ ಜನಪರ ಕೆಲಸಗಳಿಗೆ ತಾತ್ಕಾಲಿಕವಾಗಿ ಸುಧಾಕರ್‌ಗೆ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿತ್ತು. ಇದಕ್ಕೆ ಅನುಗುಣವಾಗಿ ಹೊಂದಿಕೊಂಡು ಜಿಲ್ಲಾ ಪ್ರವಾಸ, ಆಡಳಿತ ಯಂತ್ರಾಂಗದಲ್ಲಿ ಹಿಡಿತ ಸಾಧಿಸುತ್ತಿರುವ ನಡುವೆ ಜಿಲ್ಲೆಯ ಜವಾಬ್ದಾರಿಯನ್ನು ಬೇರೊಬ್ಬರಿಗೆ ಬಿಟ್ಟು ಕೊಡುವಂತಾಗಿದೆ.

    ಅದೇ ರೀತಿ ಎಂ.ಟಿ.ಬಿ.ನಾಗರಾಜ್ ಸ್ವಂತ ಕ್ಷೇತ್ರವನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬಿಟ್ಟು ನೆರೆಯ ಚಿಕ್ಕಬಳ್ಳಾಪುರಕ್ಕೆ ಬರುವಂತಾಗಿದೆ. ಇದಕ್ಕೆ ಆದೇಶ ಹೊರ ಬೀಳುತ್ತಿದ್ದಂತೆ ಉಭಯ ನಾಯಕರು ಬೆಂಬಲಿಗರ ನಡುವೆ ಅತೃಪ್ತಿಯನ್ನು ಹೊರ ಹಾಕಿದ್ದಾರೆ. ಪಕ್ಷದ ಹೈಕಮಾಂಡ್ ಆದೇಶದ ಹಿನ್ನೆಲೆಯಲ್ಲಿ ಮನಸ್ಸು ಇಲ್ಲದಿದ್ದರೂ ಒಪ್ಪಿಕೊಳ್ಳುವಂತಾಗಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದರ ನಡುವೆ ಬಹಿರಂಗವಾಗಿ ಮಾತ್ರ ಮುಖಭಂಗ ತಪ್ಪಿಸಿಕೊಳ್ಳಲು, ಭಿನ್ನಮತಕ್ಕೆ ಅವಕಾಶ ನೀಡಿ ಪಕ್ಷದ ವರಿಷ್ಠರ ಅವಕೃಪೆಗೊಳಾಗುವುದನ್ನು ತಪ್ಪಿಸುವ ಏಕೈಕ ಲೆಕ್ಕಾಚಾರದಲ್ಲಿ ತೀರ್ಮಾನಕ್ಕೆ ಬದ್ಧರಾಗಿರುವುದರ ಬಗ್ಗೆ ಬಹಿರಂಗವಾಗಿ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.

    ಕೈ ತಪ್ಪಿದ ಧ್ವಜಾರೋಹಣ: ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಜ.26 ರಂದು ಹಮ್ಮಿಕೊಂಡಿರುವ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣದ ಜವಾಬ್ದಾರಿಯು ಸುಧಾಕರ್ ಕೈ ತಪ್ಪಿದ್ದು, ಎಂ.ಟಿ.ಬಿ.ನಾಗರಾಜ್ ಪಾಲಾಗಿದೆ. ಈ ಮೊದಲು ಆಹ್ವಾನ ಪತ್ರಿಕೆಯಲ್ಲಿ ಸುಧಾಕರ್ ಹೆಸರು ಮುದ್ರಿಸಿದ್ದ ಜಿಲ್ಲಾಡಳಿತವು ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆ ಧ್ವಜಾರೋಹಣದ ಬದಲಿಗೆ ಅಧ್ಯಕ್ಷತೆ ವಹಿಸುವುದರ ಬಗ್ಗೆ ನಮೂದಿಸಿದೆ. ಹಿಂದೆ ಕಳೆದ ಎರಡು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಸುಧಾಕರ್ ಧ್ವಜವಂದನೆ ಸ್ವೀಕರಿಸಿದ್ದರು.

    ಚಿಕ್ಕಬಳ್ಳಾಪುರ ಬದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿಗೆ ಕೇಳಲಾಯಿತು. ಆದರೆ, ಪಕ್ಷದ ವರಿಷ್ಠರ ತೀರ್ಮಾನ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಒಪ್ಪಿಕೊಳ್ಳಲಾಗಿದೆ.
    ಎಂ.ಟಿ.ಬಿ.ನಾಗರಾಜ್, ನೂತನ ಜಿಲ್ಲಾ ಉಸ್ತುವಾರಿ ಸಚಿವ

    ಜಿಲ್ಲೆಯಲ್ಲಿ ಮುಂಬರುವ ಚುನಾವಣೆ ಮತ್ತು ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಸಚಿವ ಡಾ ಕೆ.ಸುಧಾಕರ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಗಬೇಕಾಗಿತ್ತು. ಆದರೆ, ಬೇರೆ ಭಾಗಕ್ಕೆ ನಿಯೋಜಿಸಿರುವುದರಿಂದ ಬೇಸರವಾಗಿದೆ.
    ಶ್ರೀನಿವಾಸ್, ಬಿಜೆಪಿ ಯುವ ಮುಖಂಡ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts