More

    ಪ್ರಧಾನಿ ಮೋದಿ ಫೋನ್​ ಮೂಲಕ ನೆರೆ ರಾಷ್ಟ್ರಗಳ ನಾಯಕರಿಗೆ ಶುಭಕೋರಿದ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆಯಾ?

    ನವದೆಹಲಿ: ಹೊಸ ವರ್ಷ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಹೊರತುಪಡಿಸಿ ನೆರೆಯ 5 ರಾಷ್ಟ್ರಗಳ ನಾಯಕರಿಗೆ ದೂರವಾಣಿ ಕರೆಯ ಮೂಲಕ ಶುಭಕೋರಿದ್ದಾಗಿ ವರದಿಯಾಗಿದೆ.

    ದೂರವಾಣಿಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾರೊಂದಿಗೆ ಮಾತನಾಡಿರುವ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವೇ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಾಂಗ್ಲಾದ ಪಿತಾಮಹ ಶೇಖ್​ ಮುಜಿಬರ್​ ರೆಹಮಾನ್​ ಅವರ ಜನ್ಮಶತಮಾನೋತ್ಸವ ಸಂಬಂಧ ಬೆಳವಣಿಗೆಯ ಸೇತುವೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಗಳನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ನುಸುಳುಕೋರರನ್ನು ವಾಪಸ್​ ಕಳುಹಿಸಲಾಗುತ್ತದೆ ಎಂದು ಕೆಲ ಬಿಜೆಪಿ ನಾಯಕರು ಟಾರ್ಗೆಟ್​ ಮಾಡಿ ಮಾತನಾಡಿರುವುದು ಬಾಂಗ್ಲಾ ನಾಯಕರ ಇರಿಸುಮುರಿಸಿಗೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಇತ್ತೀಚೆಗೆ ಮೃತಪಟ್ಟ ಬಾಂಗ್ಲಾದೇಶ ಹೈಕಮಿಷನರ್​ ನಿಧನಕ್ಕೂ ಮೋದಿ ಸಂತಾಪ ಸೂಚಿಸಿದ್ದಾರೆ.


    ಭೂತಾನ್​ ರಾಜ ಜಿಗ್ಮೆ ಖೇಸರ್​ ನ್ಯಾಮ್​ಗೆಲ್​ ವಾಂಗ್​ಚುಕ್​ಗೂ ಪ್ರಧಾನಿ ಮೋದಿ ಹೊಸ ವರ್ಷದ ಶುಭಕೋರಿದ್ದಾರೆ. ಈ ವೇಳೆ ಕಳೆದ ವರ್ಷ ಸಂಬಂಧ ವೃದ್ಧಿಯಲ್ಲಿ ಉಭಯ ದೇಶಗಳ ಸಾಧನೆಯನ್ನು ವಿವರಿಸಿದ್ದಾರೆ. ಇದೇ ಯುವ ಜನಾಂಗದ ಬಗ್ಗೆ ಮಾತನಾಡಿ, ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ರಾಜ ಮಾತ್ರವಲ್ಲದೆ, ಭೂತಾನ್​ ಪ್ರಧಾನಿ ಲೊಟಾಯ್​ ತ್ಸೆರಿಂಗ್​ಕೂ ಶುಭ ಹಾರೈಸಿದ್ದಾರೆ.

    ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರಿಗೆ ಕರೆಮಾಡಿ ಶುಭಕೋರಿದ ಪ್ರಧಾನಿ ಮೋದಿ, ಹಲವು ಯೋಜನೆಗಳು ಪೂರ್ಣಗೊಂಡಿದ್ದರ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೊತಿಹಾರಿ-ಅಮ್ಲೆಖ್​ಗುಂಜ್​ ಪೆಟ್ರೋಲಿಯಂ ಪ್ರಾಡಕ್ಟ್​ ಪೈಪ್​ಲೈನ್​ ಯೋಜನೆ ಬಗ್ಗೆ ಹೆಚ್ಚು ಮಾತನಾಡಿದ್ದು, ಶೀಘ್ರ ಉದ್ಘಾಟನೆ ಬಗ್ಗೆಯೂ ಚರ್ಚಿಸಿದ್ದಾರೆ.

    ಇತ್ತೀಚೆಗಷ್ಟೇ ಶ್ರೀಲಂಕಾದ ಅಧ್ಯಕ್ಷರಾದ ಗೋತಬಯ ರಾಜಪಕ್ಸರಿಗೂ ಫೋನ್​ ಮಾಡಿ ಪ್ರಧಾನಿ ಶುಭಕೋರಿದ್ದಾರೆ. ಸ್ನೇಹ ಒಪ್ಪಂದಗಳ ಮೂಲಕ 2020ರಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸಲು ಶ್ರಮಿಸುವುದಾಗಿ ಪರಸ್ಪರ ಮಾತನಾಡಿದ್ದಾರೆ.

    ಮಾಲ್ಡೀವ್ಸ್​ ಅಧ್ಯಕ್ಷ ಇಬ್ರಾಹಿಂ ಮೊಹಮದ್​ ಸೊಲಿಹಾರಿಗೂ ಶುಭಕೋರಿ, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts