More

    ಡಿಸೆಂಬರ್‌ನೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಉಮಾಶಂಕರ್

    ಶಿವಮೊಗ್ಗ: ಅಂಬೇಡ್ಕರ್, ಬಸವ ವಸತಿ, ಗಂಗಾ ಕಲ್ಯಾಣ ಸೇರಿದಂತೆ ಎಲ್ಲ ಇಲಾಖೆಗಳೂ ಯೋಜನೆಗಳ ಕ್ರಿಯಾಯೋಜನೆ ಪಡೆದು ಫಲಾನುಭವಿಗಳ ಆಯ್ಕೆ ಸಿದ್ಧಪಡಿಸಿಕೊಂಡು ಡಿಸೆಂಬರ್‌ನೊಳಗೆ ಅನುಷ್ಠಾನಗೊಳಿಸಬೇಕು. ಫೆಬ್ರವರಿ, ಮಾರ್ಚ್‌ವರೆಗೂ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ಎಸ್.ಉಮಾಶಂಕರ್ ಹೇಳಿದರು.

    ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಹುತೇಕ ಇಲಾಖೆಗಳಲ್ಲಿ ಇದೀಗ ಯೋಜನೆಗಳ ಅನುಷ್ಠಾನಗೊಳ್ಳುತ್ತಿದ್ದು, ಪ್ರಗತಿ ಬಗ್ಗೆ ನಾನು ಈ ಬಾರಿ ಕೇಳಲ್ಲ. ಆದರೆ ಮುಂದಿನ ಸಭೆ ನಡೆಸುವಾಗ ಗುರಿ ಸಾಧನೆ ಶೇ.100 ಇರಬೇಕು. ಯಾವುದೇ ಕಾರಣಕ್ಕೆ ಯೋಜನೆಗಳ ಅನುಷ್ಠಾನವನ್ನು ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
    ಮಳೆಗಾಲ ಆಗಿರುವ ಕಾರಣ ವಿದ್ಯಾರ್ಥಿಗಳ ನಿತ್ಯದ ತರಗತಿಗಳಿಗೆ ಯಾವುದೇ ಅಡಚಣೆ ಆಗದಂತೆ ಹಾಗೂ ಅವಘಡಗಳು ಸಂಭವಿಸದಂತೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ತ್ವರಿತವಾಗಿ ನೆಲಸಮಗೊಳಿಸಲು ತುರ್ತು ಕ್ರಮವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲಹೆ ನೀಡಿದರು.
    ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೂ ಒಂದು ಮಗುವೂ ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಬೇಕು. ಪ್ರತಿ ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ತಲುಪಿಸಲು ಕ್ರಮಕೈಗೊಳ್ಳಬೇಕು. ಮಧ್ಯಾಹ್ನದ ಬಿಸಿಯೂಟಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ಮತ್ತು ಬೇಳೆಯನ್ನು ಬಳಸುವಂತೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪಗೆ ಸೂಚಿಸಿದರು.
    ಸರ್ಕಾರಿ ಶಾಲೆಗಳಲ್ಲಿನ ಕಾಮಗಾರಿಗಳನ್ನು ನರೇಗಾ ಮೂಲಕ ಮಾಡಲಾಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ, 232 ಶಾಲೆಗಳಿಗೆ 10 ಕೋಟಿ ರೂ. ಮಂಜೂರಾಗಿತ್ತು. ಅದರಲ್ಲಿ 3 ಕೋಟಿ ರೂ. ಬಿಡುಗಡೆ ಆಗಿದ್ದು, ನರೇಗಾ ಮೂಲಕ ಶೌಚಗೃಹ ನಿರ್ಮಾಣ ಸೇರಿ ಹಲವು ಕಾಮಗಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts