More

    ಪೊಲೀಸ್ ಶಾಲೆ ಜಿಲ್ಲೆಯ ಮುಕುಟ

    ಮಲ್ಲಿಕಾರ್ಜುನ ಐಮಂಗಲ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಇಂತಹ ರಕ್ಷಕರಿಗೆ ತರಬೇತಿ ನೀಡುವ ಶಾಲೆ ಐಮಂಗಲದಲ್ಲಿರುವುದು ಜಿಲ್ಲೆಗೆ ಮುಕುಟದಂತಿದೆ.

    ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಈತನಕ ಒಟ್ಟು 4 ತಂಡಗಳಿಗೆ ತರಬೇತಿ ನೀಡಲಾಗಿದ್ದು, 5ನೇ ತಂಡದ ನಿರ್ಗಮ ಪಥಸಂಚಲನವು ಮಾರ್ಚ್ ಮೊದಲ ವಾರ ನಡೆಯಲಿದೆ.

    ಶಾಲೆ ವಿಶೇಷತೆ: ತರಬೇತಿ ಶಾಲೆಯು 58.35 ಎಕರೆ ವಿಸ್ತೀರ್ಣ ಹೊಂದಿದ್ದು, ಇದಕ್ಕೆ ಹಳೇ ಕೋಟೆ ರಕ್ಷಾ ಕವಚವಾಗಿದೆ. ಉತ್ತಮ ಆಡಳಿತ ಕಚೇರಿ, ಪೊಲೀಸ್ ಪ್ರಶಿಕ್ಷಣಾರ್ಥಿಗಳ ವಸತಿ ಗೃಹ, ಭೋಜನ ಶಾಲೆ, ಪಾಠ ಶಾಲೆ, ಸಭಾಂಗಣ, ವಿಶಾಲ ಮೈದಾನ, ವ್ಯಾಯಾಮ ಶಾಲೆ, ಆವರಣದ ಸುತ್ತಲೂ ಗಿಡಗಳನ್ನು ಬೆಳೆಸಲಾಗಿದೆ.

    2002ರಲ್ಲಿ ತಾತ್ಕಾಲಿಕ ತರಬೇತಿ ಶಾಲೆ ಆರಂಭಿಸಲಾಗಿತ್ತು. ಆ ಸಂದರ್ಭದಲ್ಲಿ 824 ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಹೊರಾಂಗಣ ಹಾಗೂ ಒಳಾಂಗಣ ತರಬೇತಿ ನೀಡಲಾಗುತ್ತಿತ್ತು. 2015ರಲ್ಲಿ ಶಾಶ್ವತ ತರಬೇತಿ ಶಾಲೆ ತೆರೆದ ಬಳಿಕ 1317 ಪೊಲೀಸರಿಗೆ ತರಬೇತಿ ನೀಡಲಾಗಿದೆ. ಈಗ 366 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಇವರಲ್ಲಿ ನಿವೃತ್ತ ಸೈನಿಕರೂ ಇದ್ದಾರೆ.

    ಈ ಶಾಲೆಗೆ ಸೇವಾ ನಿರತ ಸಿಬ್ಬಂದಿಗೆ ಪುನರ್ ಮನನ ತರಬೇತಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಹೆಗ್ಗಳಿಕೆ ಇದೆ. ಇಲ್ಲಿ ತರಬೇತಿ ಪಡೆದ ಪೇದೆಗಳು ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಒಬ್ಬರು ಬಿ.ಇ, 28 ಸ್ನಾತಕೋತ್ತರ, 160 ಮಂದಿ ಪದವೀಧರರು, 33 ಪಿಯುಸಿ, 35 ಐಟಿಐ ಡಿಪ್ಲೊಮಾ, ಬಿಇಡಿ, ಡಿಇಡಿ, 5 ಜನ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿದ್ದಾರೆ.

    ಈ ಬಾರಿ ಬೆಂಗಳೂರು ಸಿಎಆರ್ ಹಾಗೂ ಕೆಎಸ್‌ಐಎಸ್‌ಎಫ್‌ಗೆ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇದರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರಾಗಿದ್ದು, 10 ಜನ ಮಾತ್ರ ನಗರವಾಸಿಗಳಾಗಿದ್ದಾರೆ.

    8 ತಿಂಗಳ ಕಾಲಾವಧಿಯಲ್ಲಿ ಕಾನೂನು ಅರಿವು, ಪೊಲೀಸ್ ವಿಜ್ಞಾನ, ಸೈಬರ್ ಕ್ರೈಂ, ಅಪರಾಧ ಶಾಸ್ತ್ರ ಇನ್ನಿತರ ಒಳಾಂಗಣ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಹೊರಾಂಗಣದಲ್ಲಿ ಪಿಟಿ, ಲಾಟಿ ಚಾರ್ಜ್, ಆಯುಧಗಳೊಂದಿಗೆ ಕವಾಯತು, ಕರಾಟೆ, ಯೋಗ, ವಿಐಪಿ ಭದ್ರತೆ, ಕೈದಿ ಹಾಗೂ ಹಣಕಾಸು ಬೆಂಗಾವಲು ಇತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

    ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ ಹೇಳಿಕೆ: ವಿವಿಧ ಇಲಾಖೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಪ್ರಶಿಕ್ಷಣಾರ್ಥಿಗಳಿಗೆ 8 ತಿಂಗಳ ಕಾಲ ಹೊರಾಂಗಣ, ಒಳಾಂಗಣ ತರಬೇತಿ ನೀಡಲಾಗುತ್ತದೆ. ವಿಶೇಷ ಉಪನ್ಯಾಸ ಸಹ ಕೊಡಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಬಹುತೇಕರು ಅನುಕೂಲಕರ ಹಾಗೂ ಅತ್ಯುನ್ನತ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts