More

    ಎಗ್ಗಿಲ್ಲದೇ ಸಾಗಿದೆ ಅನಧಿಕೃತ ಮರಳು ಗಣಿಗಾರಿಕೆ

    ಕಾರವಾರ: ಕಾಳಿ ನದಿಯನ್ನು ಸಿಆರ್​ಜಡ್ ಕಾಯ್ದೆಯಲ್ಲಿ ವಿಶೇಷ ಸಂರಕ್ಷಿತ ತಾಣ ಎಂದು ಗುರುತಿಸಿದ್ದರಿಂದ ಇಲ್ಲಿ ಮರಳು ಗಣಿಗಾರಿಕೆ ನಡೆಸಲು ಕಳೆದ ನಾಲ್ಕು ವರ್ಷಗಳಿಂದ ಅಧಿಕೃತ ಅನುಮತಿ ಸಿಕ್ಕಿಲ್ಲ. ಆದರೆ, ಅನಧಿಕೃತ ಮರಳುಗಾರಿಕೆ ಎಗ್ಗಿಲ್ಲದೇ ಸಾಗಿದೆ.

    ಈ ಹಿಂದೆ ಮರಳುಗಾರಿಕೆ ಮಾಡುತ್ತಿದ್ದ ದೊಡ್ಡ ಬೋಟ್​ಗಳು ಹಾಗೂ ದಡದಲ್ಲಿ ಮರಳು ತೆಗೆಯುತ್ತಿದ್ದ ಕ್ರೇನ್​ಗಳು ತುಕ್ಕು ಹಿಡಿದು ಹಾಳಾಗಿವೆ. ಆದರೆ, ಮರಳುಗಾರಿಕೆಗೆ ಸಂಪೂರ್ಣ ತೆರೆ ಬಿದ್ದಿಲ್ಲ. ಸಣ್ಣ ಬೋಟ್​ಗಳ ಮೂಲಕ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ.

    ಹಳಗೆಜುಗ, ಹಾಕಾವಾಡ, ಹಣಕೋಣ ಜೂಗ, ತೋರಿಬಾಗ, ಸುಂಕೇರಿ, ಖಾರ್ಗೆಜೂಗ, ಕಾತ್ನೆಯಲ್ಲಿ ನಿರಂತರವಾಗಿ ಮರಳು ತೆಗೆಯಲಾಗುತ್ತಿದೆ.

    ಬಿಹಾರ ಉತ್ತರ ಪ್ರದೇಶದ 25 ಕ್ಕೂ ಹೆಚ್ಚು ಕಾರ್ವಿುಕರು ಅಲ್ಲಲ್ಲಿ ಬೀಡು ಬಿಟ್ಟಿದ್ದಾರೆ. ಕಾಂಡ್ಲಾ ಗಿಡಗಳ ನಡುವೆ ಬೋಟ್ ಇಡಲಾಗುತ್ತದೆ. ಸಂಜೆಯಾಗುತ್ತಿದ್ದಂತೆ ಮರಳು ತೆಗೆಯುವ ಕಾರ್ಯ ಜೋರಾಗಿ ನಡೆಯುತ್ತದೆ. ರಾತ್ರೋ ರಾತ್ರಿ ಸಣ್ಣ ವಾಹನಗಳ ಮೂಲಕ ಸಾಗಣೆ ನಡೆಯುತ್ತಿದೆ. ಹಲ ಟಿಪ್ಪರ್​ಗಳೂ ಓಡಾಟ ನಡೆಸುತ್ತವೆ.

    ಅಧಿಕಾರಿಗಳು ಶಾಮೀಲು: ಈ ಅಕ್ರಮ ಅಧಿಕಾರಿಗಳ ಕಣ್ಣ ಮುಂದೆಯೇ ನಡೆಯುತ್ತಿದೆ. ಜಿಲ್ಲೆಯ ಪೊಲೀಸ್, ಕಂದಾಯ ಅಧಿಕಾರಿಗಳ ಶಾಮೀಲಾತಿಯಿಂದ ಅಕ್ರಮ ಮರಳು ಕುಳಗಳು ಮತ್ತಷ್ಟು ಧೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದಲೇ ಕೇಳಿ ಬಂದಿದೆ.

    ರೂಪಾಲಿ ಮನವಿ: ಕಾರವಾರ ಕಾಳಿ ನದಿಯಲ್ಲಿ ಅಧಿಕೃತ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಕಾಳಿ ನದಿಯಲ್ಲಿ ಮರಳು ಗಾಣಿಗಾರಿಕೆಗೆ ಉಂಟಾಗಿರುವ ಸಮಸ್ಯೆಯನ್ನು 10 ದಿನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಗೆಹರಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರಿಗೆ ಸಿಎಂ ಸೂಚಿಸಿದ್ದಾರೆ ಎಂದು ಶಾಸಕಿ ರೂಪಾಲಿ ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿದ್ದಾರೆ.

    ಮಾ. 11 ರಂದು ಮುಕ್ತಾಯ: ಜಿಲ್ಲೆಯ ಇತರ ಮೂರು ನದಿಗಳಲ್ಲಿ ಮರಳು ತೆಗೆಯಲು ನೀಡಿದ್ದ ಅನುಮತಿಯೂ ಕಳೆದ ಮಾರ್ಚ್ 11 ರಿಂದ ಮುಕ್ತಾಯವಾಗಿದೆ. ಇದರಿಂದ ಅಲ್ಲೂ ಅನಧಿಕೃತ ಮರಳುಗಾರಿಗೆ ಮತ್ತೆ ಪ್ರಾರಂಭವಾಗಿದೆ. ಗಂಗಾವಳಿ, ಅಘನಾಶಿನಿ ಶರಾವತಿ ನದಿಗಳಲ್ಲಿ ಮಾತ್ರ 11 ಮರಳುಪಟ್ಟಿಗಳನ್ನು ಗುರುತಿಸಿ 86 ಗುತ್ತಿಗೆದಾರರಿಗೆ ಮರಳು ತೆಗೆಯಲು ಕಳೆದ ವರ್ಷ ರಾಜ್ಯ ಸಿಆರ್​ಜಡ್ ಸಮಿತಿಯಿಂದ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಕೋವಿಡ್ ಲಾಕ್​ಡೌನ್ ಕಾರಣದಿಂದ 6 ತಿಂಗಳು ಮಾತ್ರ ಮರಳು ತೆಗೆಯಲು ಸಾಧ್ಯವಾಗಿದೆ.

    ಈಗ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಿದ್ದರಿಂದ ಮರಳಿಗೆ ಸಾಕಷ್ಟು ಬೇಡಿಕೆ ಇದೆ. ಇದರಿಂದ ಮರಳು ತೆಗೆದು ದುಪ್ಪಟ್ಟು ಬೆಲೆಗೆ ಪೂರೈಸುವ ಕಾರ್ಯ ಸಾಗಿದೆ.

    ಅಧಿಕೃತವಾಗಿ ಮರಳುಗಾರಿಕೆಗೆ ಅನುಮತಿ ಇಲ್ಲ. ಕಾರಣ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಸಮಸ್ಯೆ ಉಂಟಾಗಿದೆ. ಪ್ರವಾಹದಿಂದ ಕಾಳಿ ನದಿಯಲ್ಲಿ ಮರಳು ದಿಬ್ಬಗಳು ಹೆಚ್ಚು ನಿರ್ವಣವಾಗಿವೆ. ಹಾಗಾಗಿ, ಅಧಿಕೃತ ಮರಳು ಗಣಿಗಾರಿಕೆ ನಡೆಸಲು ಇರುವ ತೊಡಕುಗಳನ್ನು ನಿವಾರಿಸಲು ಸಿಎಂ ಅವರಲ್ಲಿ ಮನವಿ ಮಾಡಲಾಗಿದೆ.

    ರೂಪಾಲಿ ನಾಯ್ಕ , ಶಾಸಕಿ, ಕಾರವಾರ-ಅಂಕೋಲಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts