More

    ಪಡಗಾನೂರಿನ ಹೋಟೆಲ್, ಮನೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

    ದೇವರಹಿಪ್ಪರಗಿ : ಅಕ್ರಮ ಸಾರಾಯಿ ನಿಷೇಧಿಸಬೇಕೆಂದು ಆಗ್ರಹಿಸಿ ಪಡಗಾನೂರ ಗ್ರಾಮದ ಮಹಿಳೆಯರು ಗುರುವಾರ ಪಟ್ಟಣದಲ್ಲಿ ಧರಣಿ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಪಡಗಾನೂರ ಗ್ರಾಮದಿಂದ ಆಗಮಿಸಿದ ಹಲವಾರು ಮಹಿಳೆಯರು ತಹಸೀಲ್ದಾರ್ ಕಚೇರಿಗೆ ತೆರಳಿ ಧರಣಿ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.

    ದ್ರಾಕ್ಷಾಯಿಣಿ ಗೊಬ್ಬರ, ರೇಷ್ಮಾ ಕದ್ರಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಹೋಟೆಲ್, ಮನೆಗಳಲ್ಲೂ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಪುರುಷರು, ಯುವಕರು ಹಾಗೂ ಮಕ್ಕಳೂ ಸಾರಾಯಿ ದಾಸರಾಗುತ್ತಿದ್ದಾರೆ. ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಗಂಡಂದಿರು ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದು, ಕೊಡದಿದ್ದರೆ ಹೊಡೆದು ಬಡಿದು ದುಡ್ಡು ಕಿತ್ತುಕೊಂಡು ಹೋಗಿ ಸಾರಾಯಿ ಕುಡಿಯುತ್ತಿದ್ದಾರೆ. ಅಲ್ಲದೆ ಮನೆಯಲ್ಲಿನ ದವಸ ಧಾನ್ಯ ಮಾರಿಯೂ ಕುಡಿದು ಬರುತ್ತಿದ್ದಾರೆ. ಇದರಿಂದಾಗಿ ನಮಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಗ್ರಾಮದಲ್ಲಿ ಅಕ್ರಮ ಸಾರಾಯಿ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಹಲವಾರು ಬಾರಿ ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಧರಣಿ ನಿರತ ಮಹಿಳೆಯರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸಿ.ಎ. ಗುಡದಿನ್ನಿ, ಸಂಬಂಧಿಸಿದ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ನಾಳೆ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಪಡಗಾನೂರ ಗ್ರಾಮದ ಪಾರ್ವತಿ ಹಿರೇಮಠ, ಎಲ್.ಎಂ. ಸಾತಿಹಾಳ, ಶಂಕರಮ್ಮ ಸರಬಡಗಿ, ರಾಮವ್ವ ಬನಗೊಂಡ, ಕಾಂತಬಾಯಿ ಇಂಚಗೇರಿ, ಬೋರಮ್ಮ ಹೊಸಟ್ಟಿ, ಸುನಂದಾ ಹಿರೇಮಠ, ಪಾರ್ವತಿ ಹಿರೇಮಠ, ಲಗಮವ್ವ ಮುರಾಳ, ಗುರುಬಾಯಿ ದೊಡಮನಿ, ನೀಲಮ್ಮ ವಟಾಲಿ, ಯಮುನವ್ವ ಮುರಾಳ, ಕಾಂತವ್ವ ಹಿಂಚಿಗೇರಿ, ಯಲ್ಲವ್ವ ಡೋಣೂರ, ಲಕ್ಷ್ಮೀ ಬನಗೊಂಡ ಮತ್ತಿರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts