More

    ಅಕ್ರಮ ಕ್ವಾರಿ.. ತಡೆಯೋರು ಯಾರ‌್ರೀ..?

    ಬೆಳಗಾವಿ : ಗುರುವಾರ ರಾತ್ರಿ ಕಲ್ಲು ಕ್ರಷರನ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ಶಿವಮೊಗ್ಗ ಜಿಲ್ಲೆಯೇ ಗಡಗಡ ನಡುಗಿಹೋದ ಪ್ರಕರಣ ರಾಜ್ಯದ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಇತ್ತ ಬೆಳಗಾವಿ ಜಿಲ್ಲೆಯಲ್ಲೂ ಈಗ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆ ನಡೆಯುತ್ತಿದೆ.

    ನಿರಾತಂಕವಾಗಿ ಜಿಲ್ಲೆಯ ಬೆಟ್ಟ, ಗುಡ್ಡಗಳ ನೆತ್ತಿ ಒಡೆದು ಅನಧಿಕೃತ ಕಲ್ಲು ಗಣಿಗಾರಿಕೆ ನಡೆದಿದೆ. ಯಾರೇನೇ ಮಾಡಿದರೂ ಈ ‘ದಂಧೆ’ಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಕೋಟ್ಯಂತರ ರೂಪಾಯಿ ರಾಜಧನ ನಷ್ಟವಾಗುತ್ತಿದೆ.

    120ಕ್ಕೂ ಹೆಚ್ಚು ಕಡೆ ಅಕ್ರಮ: ಜಿಲ್ಲೆಯಲ್ಲಿ ಖಾಸಗಿ ಪಟ್ಟಾ ಮತ್ತು ಸರ್ಕಾರದ 1,120 ಎಕರೆ ಪ್ರದೇಶದಲ್ಲಿ 283 ಕಡೆ ಪರವಾನಗಿ ಹೊಂದಿರುವ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೆ, ವಾಸ್ತವದಲ್ಲಿ ಪರವಾನಗಿ ಪಡೆದಕೊಂಡಿರುವ ಕಲ್ಲು ಕ್ವಾರಿ ಪ್ರದೇಶ ಹೊರತುಪಡಿಸಿ, ಸುಮಾರು 120ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಕೃಷಿ ಜಮೀನುಗಳ ರೈತರು, ಗ್ರಾಮಸ್ಥರು ನಿತ್ಯವೂ ಗಣಿಗಾರಿಕೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.

    ಪರಿಸರದ ಮೇಲೆ ದುಷ್ಪರಿಣಾಮ: ಜಿಲ್ಲೆಯ ಗೋಕಾಕ, ಚಿಕ್ಕೋಡಿ, ರಾಯಬಾಗ, ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲೂಕು ವ್ಯಾಪ್ತಿಯಲ್ಲಿ 216 ಕ್ರಷರ್ ಮತ್ತು 283 ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದು, ನಿತ್ಯವೂ ಪರಿಸರ ಮಾಲಿನ್ಯವಾಗುತ್ತಿದೆ. ಕ್ರಷರ್‌ಗಳಿಂದ ಹೊರಬರುವ ಧೂಳು ಹಾಗೂ ಸ್ಫೋಟಕ ವಸ್ತು ಬಳಕೆಯಿಂದ ಕೊಳವೆ, ತೆರೆದ ಬಾವಿಗಳ ನೀರಿನ ಸೆಲೆ ಬಂದ್ ಆಗಿವೆ. ಅಲ್ಲದೆ, ರೈತರ ಬೆಳೆ ಮತ್ತು ಹಣ್ಣಿನ ಗಿಡಗಳಿಗೆ ಧೂಳು ಮೆತ್ತಿಕೊಳ್ಳುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಹೂವು, ಕಾಯಿ ಕಟ್ಟುತ್ತಿಲ್ಲ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲ ಭಾಗಗಳಲ್ಲಿನ ಕಲ್ಲು ಕ್ವಾರಿಗಳಲ್ಲಿ ಅಗಾಧ ಪ್ರಮಾಣದಲ್ಲಿ ಸ್ಫೋಟಕ ಬಳಸುವುದರಿಂದ ಇಲ್ಲಿನ ರಸ್ತೆ ಮಾರ್ಗದಲ್ಲಿ ಓಡಾಡಲೂ ಜನರಿಗೆ ಜೀವಭಯ ಕಾಡುತ್ತಿವೆ.

    ಇಲಾಖೆಗೇ ಇಲ್ಲ ಸಮರ್ಪಕ ಮಾಹಿತಿ

    ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾನೂನು ಹಾಗೂ ಕೇಂದ್ರ ಪರಿಸರ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಮನಸೋಇಚ್ಛೆ ಅನುಮತಿ ನೀಡಿದ್ದಾರೆ. ಅಲ್ಲದೆ, ಅನುಮತಿ ಇಲ್ಲದ ಪ್ರದೇಶಗಳಲ್ಲಿಯೂ ಕಲ್ಲು ತೆಗೆಯುವ, ಸ್ಫೋಟಿಸುವ ಕೆಲಸ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಸರ್ಕಾರ 1 ಟನ್ ಕಲ್ಲಿಗೆ ಅಂದಾಜು 200 ರಿಂದ 350 ರೂ. ದರ ನಿಗದಿಪಡಿಸಿದೆ. ಆದರೆ, ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಎಷ್ಟು ಟನ್ ಕಲ್ಲು ತೆಗೆಯಲಾಗುತ್ತಿದೆ ಎಂಬ ನಿಖರ ಮಾಹಿತಿಯೇ ಇಲ್ಲ ಎಂದು ರೈತರು ದೂರಿದ್ದಾರೆ. ‘2016ರಿಂದಲೇ ಸರ್ಕಾರಿ ಜಮೀನುಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಲ್ಲಿಸಿದೆ. ಜನವಸತಿಯಿಂದ 1-2 ಕಿ.ಮೀ. ದೂರದಲ್ಲಿ ಖಾಸಗಿ ಮಾಲೀಕತ್ವದ ಪಟ್ಟಾ ಭೂಮಿಯಲ್ಲಿ ಷರತ್ತುಗಳ ಅನ್ವಯ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ನೀರಿನ ಮೂಲಗಳು ಸಂಪೂರ್ಣ ಬಂದ್ ಆಗಿ ಕೃಷಿ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ. ರಾಮದುರ್ಗ, ಸವದತ್ತಿ, ಗೋಕಾಕ ಇನ್ನಿತರ ಕಡೆಗಳಲ್ಲಿ ಅಕ್ರಮ ಕಲ್ಲು ಕ್ವಾರಿಗಳಿಂದ ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ.
    | ರವಿ ಸಿದ್ದಮ್ಮನವರ ಜಿಲ್ಲಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ

    ಬೆಳಗಾವಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಅನಧಿಕೃತ ಕ್ವಾರಿ, ಕ್ರಷರ್ ಘಟಕಗಳು ಕಂಡುಬಂದಿಲ್ಲ. ಪರವಾನಗಿ ಹೊಂದಿರುವ ಕೆಲ ಘಟಕಗಳು ಸರ್ಕಾರದ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಪರವಾನಗಿ ಪಡೆದುಕೊಂಡಿರುವ 216 ಕ್ರಷರ್, 38 ಎಂ.ಸ್ಯಾಂಡ್ ಹಾಗೂ 283 ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಎಷ್ಟು ಪ್ರಮಾಣದಲ್ಲಿ ಕಲ್ಲು ತೆಗೆಯಲಾಗುತ್ತಿದೆ ಎಂಬ ಮಾಹಿತಿ ಇಲ್ಲ.
    | ಬಿಂದನಾ ಪಾಟೀಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts