More

    ಕಾಕೋಳದಲ್ಲಿ ಅಕ್ರಮ ಮದ್ಯ ಮಾರಾಟ

    ರಾಣೆಬೆನ್ನೂರ: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೆ ತಾಲೂಕಿನ ಕಾಕೋಳದಲ್ಲಿ ಮಾತ್ರ ಅಕ್ರಮ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ.

    ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದ ಮುಂದಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ವ್ಯಸನಿಗಳು ಮದ್ಯದ ಬಾಟಲ್​ಗಳನ್ನು ರಸ್ತೆ ಮೇಲೆಯೇ ಒಡೆದು ಹೋಗುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.

    ಕಾಕೋಳ ಗ್ರಾಮ ಹಾಗೂ ತಾಂಡಾದಲ್ಲಿ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಲಾಕ್​ಡೌನ್​ಗೂ ಮುನ್ನವೇ ಮನೆಗಳಲ್ಲಿ ಬಿಯರ್ ಬಾಟಲ್ ಹಾಗೂ ಚೀಪರ್ ಮದ್ಯದ ಪ್ಯಾಕೆಟ್​ಗಳನ್ನು ಸಂಗ್ರಹಿಸಿಕೊಟ್ಟುಕೊಂಡಿದ್ದಾರೆ. ಇದೀಗ ಮದ್ಯದಂಗಡಿ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಇವರಿಗೆ ಭಾರಿ ಬೇಡಿಕೆ ಬಂದಿದೆ.

    ಅಕ್ರಮ ಮದ್ಯ ಮಾರಾಟಗಾರರು ಬಿಯರ್​ಗೆ 400 ರೂ.ಯಿಂದ 500 ರೂ. ಹಾಗೂ ನೂರು ರೂ. ಬೆಲೆಯ ಮದ್ಯದ ಪ್ಯಾಕೆಟ್​ಗಳನ್ನು 300 ರೂ.ಯಿಂದ 400 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಎಲ್ಲಿಯೂ ಮದ್ಯ ಸಿಗದೇ ಇರುವ ಕಾರಣ ಅನಿವಾರ್ಯ ಎಂಬಂತೆ ಕೆಲವರು ಹೆಚ್ಚಿನ ಬೆಲೆಗೆ ಮದ್ಯ ಖರೀದಿಸಿ ಕುಡಿಯುತ್ತಿದ್ದಾರೆ.

    ಹೆದ್ದಾರಿ ಆಗಿದೆ ಅಡ್ಡೆ: ಸದ್ಯ ತರಕಾರಿ ಹಾಗೂ ದಿನಸಿ ಸಾಗಣೆ ಲಾರಿಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ವಾಹನಗಳ ಓಡಾಟ ಬಂದ್ ಮಾಡಲಾಗಿದೆ. ಬಸ್, ಕಾರು, ಬೈಕು ಸೇರಿ ಇತರ ವಾಹನಗಳ ಓಡಾಟವೂ ಹೆದ್ದಾರಿಯಲ್ಲಿ ವಿರಳವಾಗಿದೆ. ಹೀಗಾಗಿ ರಾತ್ರಿ ಸಮಯದಲ್ಲಿ ಕಾಕೋಳ ಗ್ರಾಮದ ಮದ್ಯ ಪ್ರಿಯರು ರಾಷ್ಟ್ರೀಯ ಹೆದ್ದಾರಿ-4ಅನ್ನು ಮದ್ಯದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

    ರಸ್ತೆಯುದ್ದಕ್ಕೂ ಮದ್ಯದ ಬಾಟಲ್​ಗಳನ್ನು ಹಿಡಿದು ಕುಳಿತುಕೊಳ್ಳುವ ಮದ್ಯ ಪ್ರಿಯರು ಅಲ್ಲಿಯೇ ಮದ್ಯ ಸೇವಿಸಿ, ಬಾಟಲ್​ಗಳನ್ನು ಒಡೆದು ಹಾಕುತ್ತಿದ್ದಾರೆ. ಗಾಜಿನ್ ಬಾಟಲ್​ಗಳ ಚೂರುಗಳು ರಸ್ತೆ ತುಂಬ ಹರಡಿಕೊಂಡು ವಾಹನಗಳ ಟಯರ್​ಗೆ ಚುಚ್ಚಿ ಪಂಚರ್ ಆಗಿ ನಿಂತುಕೊಳ್ಳುವ ಘಟನೆ ಹೆಚ್ಚುತ್ತಿವೆ. ಹೀಗಾಗಿ ಬೈಕ್, ಲಾರಿ ಚಾಲಕರು ಗ್ರಾಮದ ಮದ್ಯ ವ್ಯಸನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಹೆದ್ದಾರಿ ಪೊಲೀಸರು ಏನು ಮಾಡುತ್ತಿದ್ದಾರೆ?: ಹೆದ್ದಾರಿಯಲ್ಲಿ ನಡೆಯುವ ಅಕ್ರಮ, ಕಳ್ಳತನ ಹಾಗೂ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಹೆದ್ದಾರಿಯುದ್ದಕ್ಕೂ ಹೈವೆ ಪೆಟ್ರೋಲ್ ವಾಹನಗಳನ್ನು ಗಸ್ತು ತಿರಗಲು ಬಿಟ್ಟಿದೆ. ಪೊಲೀಸರು ಸಹ ರಸ್ತೆಯುದ್ದಕ್ಕೂ ಹಗಲಿನಲ್ಲಿ ತಿರುಗುತ್ತಿದ್ದಾರೆ. ಆದರೆ, ರಾತ್ರಿ ಸಮಯದಲ್ಲಿ ಮಾತ್ರ ನಿದ್ದೆಗೆ ಜಾರುತ್ತಿದ್ದಾರೆ ಎನ್ನುವ ಆರೋಪವಿದೆ.

    ಹೀಗಾಗಿ ಹೆದ್ದಾರಿಯಲ್ಲಿಯೇ ಮದ್ಯ ಪ್ರಿಯರು ನಿರಾಳವಾಗಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಇದರಿಂದಾಗಿ ಇತರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಹೆದ್ದಾರಿ ಬದಿಯಲ್ಲಿ ಮದ್ಯ ಸೇವಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬುದು ಇತರ ವಾಹನ ಸವಾರರ ಆಗ್ರಹವಾಗಿದೆ.

    ತಿರುಗಿ ನೋಡದ ಅಬಕಾರಿ ಅಧಿಕಾರಿಗಳು: ಬಂದ್ ನಡುವೆಯೂ ಬಿಯರ್ ಬಾಟಲ್, ಮದ್ಯದ ಪ್ಯಾಕೆಟ್​ಗಳು ರಸ್ತೆಯುದ್ದಕ್ಕೂ ಬೀಳತೊಡಗಿವೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ಆದರೆ, ಈ ಬಗ್ಗೆ ಕ್ರಮ ಜರುಗಿಸಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಕಡೆ ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.

    ಕೆಲವರು ಉದ್ದೇಶಪೂರ್ವಕವಾಗಿ ಹೆದ್ದಾರಿ ಮೇಲೆ ಹೋಗಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳಂತೂ ಇತ್ತ ಕಡೆ ತಿರುಗಿ ನೋಡುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು.

    | ಚಂದ್ರು ಎಚ್., ಕಾಕೋಳ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts