More

    ಅಕ್ರಮ ಬಡಾವಣೆ, ಕಡಿವಾಣ ಯಾರ ಹೊಣೆ?

    ಬೆಳಗಾವಿ: ನಗರ ಪ್ರದೇಶ, ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಸರ್ಕಾರ ಇ-ಸ್ವತ್ತು ಮಾರ್ಗಸೂಚಿ ಉಲ್ಲಂಘಿಸಿ ಕೃಷಿ ಜಮೀನುಗಳಲ್ಲಿ ಅಕ್ರಮ ಬಡಾವಣೆ ನಿರ್ಮಿಸುತ್ತಿದ್ದಾರೆ. ಆದರೂ ಸಂಬಂಧಿತ ಅಧಿಕಾರಿಗಳು ಈ ಕಾರ್ಯಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

    ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲಾದ್ಯಂತ 33 ಸ್ಥಳೀಯ ಸಂಸ್ಥೆಗಳಿಗೆ ಹೊಂದಿಕೊಂಡಿರುವ ಮತ್ತು ಮೇಲ್ದರ್ಜೇಗೇರಿದ ಕೆಲ ಗ್ರಾಪಂಗಳಲ್ಲಿ ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದೆ (ಎನ್‌ಎ) ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗುತ್ತಿದೆ. 100 ರೂ. ಬಾಂಡ್ ಪೇಪರ್ ಮೇಲೆ 6 ರಿಂದ 8 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ನಿವೇಶನಗಳಿಗೆ ಗ್ರಾಪಂಗಳಲ್ಲಿ ಕಂಪ್ಯೂಟರ್ ಉತಾರಗಳನ್ನೂ ವಿತರಣೆ ಮಾಡಲಾಗುತ್ತಿದೆ.

    80ಕ್ಕೂ ಅಧಿಕ ಬಡಾವಣೆ: ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ಗ್ರಾಪಂ ಆಡಳಿತ ಮಂಡಳಿಯು ತನ್ನ ಅಧಿಕಾರ ವ್ಯಾಪ್ತಿ ಮೀರಿ ಸುಮಾರು 80ಕ್ಕೂ ಅಧಿಕ ಬಡಾವಣೆ ಮಂಜೂರು ಮಾಡಿದೆ. ಜತೆಗೆ ಬಡಾವಣೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ 23,450ಕ್ಕೂ ಅಧಿಕ ನಿವೇಶನಗಳಿಗೆ ಪ್ರತ್ಯೇಕವಾಗಿ ಕಂಪ್ಯೂಟರ್ ಉತಾರ ನೀಡಿದ್ದಾರೆ.

    ಎಲ್ಲೆಲ್ಲಿ ಅಕ್ರಮ?: ಬೆಳಗಾವಿ ತಾಲೂಕಿನ ಸಾಂಬ್ರಾ, ಮಾರಿಹಾಳ, ಹಿಂಡಲಗಾ, ಕಾಕತಿ, ಬೆನಕನಹಳ್ಳಿ, ಕಂಗ್ರಾಳಿ ಬಿ.ಕೆ., ಪೀರನವಾಡಿ, ಮಚ್ಛೆ, ಮಾಂಡೋಳಿ, ಲೋಂಡಾ, ಹಲಗಾ, ಹಂದಿಗನೂರ, ಕಂಗ್ರಾಳಿ ಕೆ.ಎಚ್., ಸವದತ್ತಿ ತಾಲೂಕು ವ್ಯಾಪ್ತಿಯ ಯರಗಟ್ಟಿ, ಮಾಡಮಗೇರಿ, ಸತ್ತಿಗೇರಿ, ಮುರಗೋಡ, ರಾಮದುರ್ಗ, ಮೂಡಲಗಿ, ಗೋಕಾಕ, ಅಥಣಿ, ಕಾಗವಾಡ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ಹಾಗೂ ಖಾನಾಪುರ ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮತ್ತು ಅಕ್ರಮ ಬಡಾವಣೆಗಳಿಗೆ ಅನುಮತಿ ನೀಡುತ್ತಿದ್ದಾರೆ. ಅಲ್ಲದೆ, ಈ ಅಕ್ರಮ ಬಡಾವಣೆಗಳಿಗೆ ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಗ್ರಾಪಂನಿಂದ ನಿಯಮ ಉಲ್ಲಂಘನೆ?: ಪ್ರತಿ ಗ್ರಾಮ ಪಂಚಾಯಿತಿಯೂ ಕೃಷಿಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಿರ್ಧರಿಸಲು ಪಟ್ಟಿ ಸಿದ್ಧಗೊಳಿಸಿರುತ್ತದೆ. ಅದರ ಆಧಾರದಲ್ಲಿ ನಮೂನೆ-9ಅನ್ನು ಪಿಡಿಒ ನೀಡಬೇಕಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ಭಾವಚಿತ್ರ, ಜಾಗದ ಸರ್ವೇ ನಂಬರ್, ಆಸ್ತಿಯ ವಿಸ್ತೀರ್ಣ ಮತ್ತಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿಧದ ಆಸ್ತಿ ಎಂಬ ಛಾಯಾಚಿತ್ರ ಹಾಗೂ ಮತ್ತಿತರ ವಿವರ ಒಳಗೊಂಡಿರುತ್ತದೆ. ನಮೂನೆ-11ರಲ್ಲಿ
    ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮತ್ತಿತರ ವಿವರಗಳನ್ನು ಪಿಡಿಒ ಭರ್ತಿ ಮಾಡಿ ಡಿಜಿಟಲ್ ಸಹಿ ನಮೂದಿಸಬೇಕಾಗುತ್ತದೆ. ಆದರೆ, ಈ ಎಲ್ಲ ಅಂಶಗಳನ್ನೂ ಗಾಳಿಗೆ ತೂರಿ ಬಡಾವಣೆ ನಿರ್ಮಿಸಲು ಅನುಮತಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿಯ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ನಿರ್ಮಾಣಗೊಂಡಿರುವ ಅಕ್ರಮ ಬಡಾವಣೆ ತೆರವುಗೊಳಿಸುವ ಕೆಲಸ ಆರಂಭವಾಗಿದೆ. ತಾಲೂಕು ತಹಸೀಲ್ದಾರ್, ತಾಪಂಗಳಿಗೂ ಅಕ್ರಮ ಬಡಾವಣೆ ತೆರವು ಕುರಿತು ಮಾಹಿತಿ ನೀಡಲಾಗಿದೆ.
    | ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ

    ಗ್ರಾಪಂಗಳಲ್ಲಿ ಅಕ್ರಮ ಬಡಾವಣೆಗಳಿಗೆ ಕಂಪ್ಯೂಟರ್ ಉತಾರ ನೀಡಿರುವ ಕುರಿತು ಪರಿಶೀಲನೆ ನಡೆಸಲಾಗುವುದು. ಸರ್ಕಾರದ ಇ-ಸ್ವತ್ತು ಮಾರ್ಗಸೂಚಿ ಉಲ್ಲಂಘಿಸಿ ಕೃಷಿ ಜಮೀನುಗಳಲ್ಲಿ ಅಕ್ರಮ ಬಡಾವಣೆಗಳ ಕುರಿತು ಅಧಿಕೃತ ದಾಖಲೆಗಳ ಸಮೇತ ದೂರು ಸಲ್ಲಿಸಿದರೆ ಕ್ರಮ ಜರುಗಿಸಲಾಗುವುದು.
    | ಎಚ್.ವಿ. ದರ್ಶನ ಜಿಪಂ ಸಿಇಒ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts