More

    ನದಿ ತೀರದಲ್ಲಿ 170 ಅಕ್ರಮ ನಿರ್ಮಾಣ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಕಡಲು ಹಾಗೂ ನದಿ ತೀರದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮ ಉಲ್ಲಂಘಿಸಿ ನಿರ್ಮಿಸಿದ ಒಟ್ಟು 170 ಕಟ್ಟಡಗಳಿವೆ!

    ಕೇರಳದ ಕೊಚ್ಚಿಯ ಮರಾಡ್‌ನ ನದಿ ತೀರದಲ್ಲಿ ಪರಿಸರ ನಿಯಮ ಉಲ್ಲಂಘಿಸಿ ನಿರ್ಮಿಸಿದ ನಾಲ್ಕು ಬಹುಮಹಡಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇತ್ತೀಚೆಗೆ ನೆಲಸಮಗೊಳಿಸಿದ ಬಳಿಕ ಕರಾವಳಿಯ ಈ ವಿಷಯ ಮತ್ತೆ ಚರ್ಚೆಗೆ ಬಂದಿವೆ.
    ಸುರತ್ಕಲ್ ಸಸಿಹಿತ್ಲು ಕಡಲ ತೀರದಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಹೋಂ ಸ್ಟೇ ಹೋಲುವ ಎರಡು ಕಟ್ಟಡಗಳು ಸಹಿತ ಸಿಆರ್‌ಝಡ್ ನಿಯಮ ಉಲ್ಲಂಘಿಸಿದ 30 ಪ್ರಕರಣಗಳು ದಕ್ಷಿಣ ಕನ್ನಡದಲ್ಲಿವೆ. ಇವುಗಳಲ್ಲಿ ಎಂಟು ಪ್ರಕರಣಗಳು ನ್ಯಾಯಾಲಯದಲ್ಲಿದ್ದರೆ, ಇತರ 22 ಪ್ರಕರಣಗಳು ಸರ್ಕಾರದ ಮಟ್ಟದಲ್ಲಿವೆ ಎಂದು ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕ ಡಾ.ದಿನೇಶ್ ಕುಮಾರ್ ತಿಳಿಸಿದ್ದಾರೆ.
    ಉಡುಪಿ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ 34 ಕಟ್ಟಡಗಳಿದ್ದು, ಇವುಗಳಲ್ಲಿ 16 ಪ್ರಕರಣಗಳು ನ್ಯಾಯಾಲಯದಲ್ಲಿವೆ.

    ಇಲ್ಲಿನ ಅಕ್ರಮ ಕಟ್ಟಡಗಳ ಪೈಕಿ ಶೇ.50ರಷ್ಟು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಹೋಂ ಸ್ಟೇ, ರೆಸಾರ್ಟ್ ಮಾದರಿಯವು. 2008-2009 ಬಳಿಕದ ಪ್ರಕರಣಗಳು ಇವುಗಳಲ್ಲಿವೆ. ರಾಜ್ಯದಲ್ಲೇ ಸಿಆರ್‌ಝಡ್ ನಿಯಮ ಉಲ್ಲಂಘಿಸಿದ ಅತ್ಯಧಿಕ 106 ಕಟ್ಟಡಗಳು ಉತ್ತರ ಕನ್ನಡದಲ್ಲಿವೆ. ಇವುಗಳಲ್ಲಿ ಗರಿಷ್ಠ 76 ನಿರ್ಮಾಣಗಳು ಗೋಕರ್ಣ ಬೀಚ್‌ನಲ್ಲೇ ಇವೆ. ಇವುಗಳಲ್ಲಿ ಐದು ಕಟ್ಟಡಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸಮಿತಿ ನಿರ್ದೇಶನ ನೀಡಿದೆ. ಉಳಿದವುಗಳು ವಿವಿಧ ಹಂತಗಳಲ್ಲಿವೆ.

    ಕ್ರಮ ಸುದೀರ್ಘ ಪ್ರಕ್ರಿಯೆ: ಸಿಆರ್‌ಝಡ್ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಸುದೀರ್ಘ ಪ್ರಕ್ರಿಯೆ. ನಿಯಮ ಉಲ್ಲಂಘಿಸಿದವರಿಗೆ ಕಾನೂನು ಕುಣಿಕೆಯಿಂದ ನುಣುಚಿಕೊಳ್ಳಲು ಸಾಕಷ್ಟು ಅವಕಾಶಗಳು ಕೂಡ ಸಿಗುತ್ತವೆ. ಇಲಾಖೆ ಅಧಿಕಾರಿಗಳಿಂದ ಅಕ್ರಮ ಕಟ್ಟಡಗಳ ಮಾಲೀಕರಿಗೆ ಮೊದಲು ನೋಟೀಸ್ ಜಾರಿಯಾಗುತ್ತದೆ. ಬಳಿಕ ಜಿಲ್ಲಾ ಸಮಿತಿಯಲ್ಲಿ ಚರ್ಚೆಯಾಗುತ್ತದೆ. ಅಲ್ಲಿ ಅನಧಿಕೃತ ಕಟ್ಟಡಗಳೆಂದು ಘೋಷಣೆಯಾಗಿ ಬಳಿಕ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗುತ್ತದೆ. ಅನಂತರ ಮತ್ತೆ ಅಕ್ರಮ ಕಟ್ಟಡ ಮಾಲೀಕರಿಗೆ ನೋಟಿಸ್. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಸ್ವತಃ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಉತ್ತರಿಸಲು 6 ದಿನಗಳ ಅವಧಿ ಇರುತ್ತದೆ. ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಅವಕಾಶವೂ ಇದೆ. ಹೀಗೆ ಸಾಕಷ್ಟು ಕಾಲಾವಕಾಶ ದೊರೆಯುತ್ತದೆ.

    ಪೊನ್ನುರಾಜ್ ಬಳಿಕ ಕ್ರಮವಿಲ್ಲ: ವಿ.ಪೊನ್ನುರಾಜ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿರುವುದು ಹೊರತುಪಡಿಸಿದರೆ ಬಳಿಕ ಬಹುಶಃ ಅನಧಿಕೃತ ಕಟ್ಟಡ ನೆಲಸಲುಗೊಳಿಸಿದ ಉದಾಹರಣೆ ಕರ್ನಾಟಕ ಕರಾವಳಿಯಲ್ಲಿ ಇಲ್ಲ. ಆ ಸಂದರ್ಭ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ 16 ಕಟ್ಟಡಗಳು ನೆಲಸಮಗೊಂಡಿದ್ದವು.

    ಕೇರಳದ ಪರಿಸ್ಥಿತಿಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ ಕಡಲ ತೀರದಲ್ಲಿ ಸಿಆರ್‌ಝಡ್ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು ಬಹುತೇಕ ವಾಸದ ಮನೆಗಳು. ಕೇರಳದಲ್ಲಿ ಕಾನೂನು ಕ್ರಮ ಎದುರಿಸುತ್ತಿರುವ ಅಕ್ರಮ ಕಟ್ಟಡಗಳು ಬಹುಮಹಡಿ ಕಟ್ಟಡಗಳು. ಕರ್ನಾಟಕ ಕರಾವಳಿಯಲ್ಲಿ ನಿಯಮದ ಬಗ್ಗೆ ಹೆಚ್ಚಿನ ಅರಿವು ಇದೆ. ಹೆಚ್ಚಿನವರು ಕಡಲು, ನದಿ ತೀರದಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವುದಿಲ್ಲ.

    ಡಾ.ದಿನೇಶ್ ಕುಮಾರ್
    ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts