More

    ಮಹಿಳೆಯರ ಪಾತ್ರ ಅಪಾರ

    ಇಳಕಲ್ಲ: ಮಕ್ಕಳ ಲಾಲನೆ, ಪಾಲನೆ ಮಾಡುವುದು ಮಾತ್ರ ಮಹಿಳೆಯರ ಕೆಲಸವಲ್ಲ. ಇಂದು ಪುರುಷರಷ್ಟೇ ಸಮಾನವಾಗಿ ಸ್ತ್ರೀಯರು ಕೆಲಸ ಮಾಡುತ್ತಿದ್ದಾರೆ ಎಂದು ಬಾದಾಮಿ ಸಾಹಿತಿ ಬಸಮ್ಮ ನರಸಾಪುರ ಹೇಳಿದರು.

    ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ‘ಮಹಿಳಾ ಅಸ್ಮಿತೆ ಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಮೊದಲ ಜ್ಞಾನದ ಶಿಕ್ಷಣ ನೀಡುವವರೇ ಮಹಿಳೆಯರು. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಲವಾರು ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ. ಕುಟುಂಬದ ಸ್ವಾಸ್ಥೃ ಕಾಪಾಡಲು ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

    ಡಾ.ಉಮಾ ಅಕ್ಕಿ ‘ಮಹಿಳಾ ಸಂವೇದನೆ’, ಡಾ.ರಾಜೇಶ್ವರಿ ಶೀಲವಂತ ‘ಮಹಿಳೆ ಮತ್ತು ಹೊಸ ಹೆಜ್ಜೆಗಳು’, ಪ್ರೊ.ಕವಿತಾ ಜಂಗವಾಡ ‘ಮಹಿಳೆ ಮತ್ತು ವೈಚಾರಿಕ ಪ್ರಜ್ಷೆ’, ಪ್ರೊ.ಸುಷ್ಮಾದೇವಿ ಒಡೆಯರ ‘ಕೌಟುಂಬಿಕ ಸ್ವಾಸ್ಥೃ’ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಲಲಿತಾ ಹೊಸಪೇಟಿ ಆಶಯ ನುಡಿಗಳನ್ನಾಡಿದರು.

    64 ಕೆರೆಗಳು ಸಂಪೂರ್ಣ ಹಾಳು
    ‘ನನ್ನ ಜಿಲ್ಲೆಯ ವರ್ತಮಾನದ ಸಂವೇದನೆಗಳು’ ಕುರಿತ ಗೋಷ್ಠಿಯಲ್ಲಿ ಮುಖಂಡ ನಾಗರಾಜ ಹೊಂಗಲ ಮಾತನಾಡಿ, ಕೆರೆ ಕಟ್ಟೆ, ಕಾಲುವೆಗಳ ದುರಸ್ತಿ, ಕೆರೆಗೆ ನೀರು ತುಂಬುವುದಕ್ಕಾಗಿ ಸಾಕಷ್ಟು ಹಣ ಖರ್ಚಾಗಿದೆಯೇ ಹೊರತು ರೈತರ ಹೊಲಗಳಿಗೆ ನೀರು ಹರಿದಿಲ್ಲ. ಅಂತರ್ಜಲ ಹೆಚ್ಚಾಗಿಲ್ಲ. 30 ಸಾವಿರ ಎಕರೆಗೆ ನೀರುಣಿಸಬೇಕಿದ್ದ ಜಿಲ್ಲೆಯ 64 ಕೆರೆಗಳು ಸಂಪೂರ್ಣ ಹಾಳಾಗಿವೆ ಎಂದರು.

    ಸಾಹಿತಿ ಗಂಗಾಧರ ಆವಟೇರ ಮಾತನಾಡಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯಲ್ಲಿರುವ ನೀರು, ಖನಿಜ, ಲವತ್ತಾದ ಭೂಮಿ ಸದ್ಬಳಕೆ ಆಗುತ್ತಿಲ್ಲ. ಇದರಿಂದ ಜೀವನ ಮಟ್ಟ ಸುಧಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಾಹಿತಿ ಡಾ.ಸಂಗಮೇಶ ಮಾಟೋಳಿ ‘ಸಾಹಿತ್ಯ ಮತ್ತು ತರುಣ ಪೀಳಿಗೆ’, ನಿವೃತ್ತ ತಹಸೀಲ್ದಾರ್ ಪಿ.ವಿ. ದೇಸಾಯಿ ‘ರಂಗಭೂಮಿ ಹಾಗೂ ಜಾನಪದ’, ಬಸವರಾಜ ನಾಡಗೌಡ ‘ಜಿಲ್ಲೆಯ ಗ್ರಾನೈಟ್ ಉದ್ಯಮ ಹಾಗೂ ಆರ್ಥಿಕತೆ’ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ವಿಶ್ವನಾಥ ವಂಶಾಕೃತಿಮಠ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎ. ಬನ್ನಟ್ಟಿ, ಎಂ.ಬಿ. ಬಳ್ಳಾರಿ, ಆರ್.ಜಿ. ಸನ್ನಿ ಇತರರು ಇದ್ದರು.

    ಪುಸ್ತಕ, ಚಿತ್ರಕಲೆ ಪ್ರದರ್ಶನ
    ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಮಳಿಗೆಗಳು, ಚಿತ್ರಕಲೆ ಪ್ರದರ್ಶನ ಗಮನ ಸೆಳೆಯಿತು. ಭಾನುವಾರ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪುಸ್ತಕ ಮಳಿಗೆಗಳ ಮುಂದೆ ಕಂಡು ಬಂದರು. ವೇದಿಕೆ ಮಹಾದ್ವಾರದ ಮುಂದೆ ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಹಾಗೂ ವಿದ್ಯಾರ್ಥಿಗಳು ಏರ್ಪಡಿಸಿದ್ದ ‘ಚಿತ್ರಕಲೆ ಪ್ರದರ್ಶನ’ ನೋಡುಗರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts