More

    ಪೊಲೀಸ್ ಇಲಾಖೆ ಸೂಚನೆ ಕಡೆಗಣನೆ

    ಹಾವೇರಿ: ನಿಷೇಧದ ನಡುವೆಯೂ ಸಾಂಪ್ರದಾಯಕ ಹೋರಿ ಬೆದರಿಸುವ ಸ್ಪರ್ಧೆಯನ್ನು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಭ್ರಮದಿಂದ ನಡೆಸಲಾಯಿತು.

    ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳನ್ನು ಆಯೋಜಿಸದಂತೆ ಪೊಲೀಸ್ ಇಲಾಖೆ ಸೂಚನೆ ಹೊರಡಿಸಿತ್ತು. ಅಲ್ಲದೆ, ಎಲ್ಲೆಲ್ಲಿ ಸ್ಪರ್ಧೆಗಳು ನಡೆಯುತ್ತವೆ ಎಂಬ ಮಾಹಿತಿಯನ್ನು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬೀಟ್ ಸಿಬ್ಬಂದಿ ಸಂಗ್ರಹಿಸಿ ಗ್ರಾಮಸ್ಥರಿಗೆ ಸ್ಪರ್ಧೆ ನಡೆಸದಂತೆ ಸೂಚನೆ ನೀಡಬೇಕು. ಒಂದೊಮ್ಮೆ ಸ್ಪರ್ಧೆ ನಡೆದು ಅವಘಡಗಳು ಸಂಭವಿಸಿದರೆ ಸಂಬಂಧಿಸಿದ ಠಾಣೆ ವ್ಯಾಪ್ತಿಯ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಪೊಲೀಸ್ ಉಪ ಅಧೀಕ್ಷಕರು ಸೂಚನೆ ನೀಡಿದ್ದರು. ಆದರೂ ಜಿಲ್ಲೆಯ ವಿವಿಧೆಡೆ ದೀಪಾವಳಿ ಪಾಡ್ಯದಂದು ಹಾಗೂ ಮಂಗಳವಾರ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಿ ಜನ ಕುಣಿದುಕುಪ್ಪಳಿಸಿದರು.

    ಕರೊನಾ ಭಯವಿಲ್ಲ: ಸ್ಪರ್ಧೆಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಕರೊನಾ ಭೀತಿಯಿದ್ದರೂ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಜನರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.

    ಅವಕಾಶ ನೀಡಲು ಒತ್ತಾಯ

    ದೀಪಾವಳಿ ಪಾಡ್ಯದಿಂದ ಒಂದು ತಿಂಗಳವರೆಗೆ ಹಾವೇರಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಪಾಯಕಾರಿ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅದರಂತೆ ಸ್ಪರ್ಧೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುವಂತೆಯೂ ಜಿಲ್ಲಾಡಳಿತ ಈ ಹಿಂದೆಯೇ ಸೂಚಿಸಿತ್ತು. ಆದರೆ ಅದಕ್ಕೆ ಯಾರೊಬ್ಬರೂ ಕ್ಯಾರೇ ಎಂದಿಲ್ಲ. ಕಳೆದ ವರ್ಷ ಹಾನಗಲ್ಲ ತಾಲೂಕಿನಲ್ಲಿ ಹೋರಿ ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಅಲ್ಲದೆ, ಈ ವರ್ಷ ಕರೊನಾ ಭೀತಿಯಿಂದ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಇದರ ಫಲವಾಗಿ ಕೆಲವರು ಆಚರಣೆ ಕೈಬಿಟ್ಟಿದ್ದರು. ಆದರೆ ಯುವಕರ ಗುಂಪು ಯಾರನ್ನು ಕೇಳದೇ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುವ ಬದಲು ಇನ್ನಷ್ಟು ಜಾಗೃತಿ ಮೂಡಿಸಿ ಸುರಕ್ಷತೆಯೊಂದಿಗೆ ಸಾಂಪ್ರದಾಯಕ ಹಬ್ಬದ ಆಚರಣೆಗೆ ಸೂಚನೆ ನೀಡಬೇಕು ಎಂಬುದು ಅನೇಕರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts