More

    ಕೆಎಚ್​ರನ್ನು ಲಘುವಾಗಿ ಪರಿಗಣಿಸಿದ್ರೆ ಸೋಲ್ತೀರಿ!: ಸಿದ್ದರಾಮಯ್ಯಗೆ ಮುನಿಯಪ್ಪ ಬಣದ ಮುಸ್ಲಿಂ ಮುಖಂಡರ ಎಚ್ಚರಿಕೆ

    ಕೋಲಾರ: ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವುದಾದರೆ ಯೋಚಿಸಿ, ನಮ್ಮನ್ನು ಲಘುವಾಗಿ ಪರಿಗಣಿಸದಿರಿ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಬಣ ಸಿದ್ದರಾಮಯ್ಯಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ಸ್ಪರ್ಧೆಗೆ ಆಹ್ವಾನಿಸಿದ್ದ ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ಕುಮಾರ್​ ಬಣಕ್ಕೆ ಕೆಎಚ್​ ಬೆಂಬಲಿಗರು ತಿರುಗೇಟು ನೀಡುತ್ತಿದ್ದಾರೆ.


    ಸ್ಪರ್ಧಿಸುವುದಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಪರ್ಧಿಸಬೇಕು. ಬಹುತೇಕ ಅಲ್ಪಸಂಖ್ಯಾತ ಮುಖಂಡರು ಮುನಿಯಪ್ಪ ಪರ ಇದ್ದು, ಅವರ ಜತೆ ಚರ್ಚಿಸಬೇಕು. ಇಲ್ಲದಿದ್ದರೆ ಫಲಿತಾಂಶದಲ್ಲಿ ಏರುಪೇರಾಗುವುದು ಖಚಿತ ಎಂದು ಕಾಂಗ್ರೆಸ್​ನ ಅಲ್ಪಸಂಖ್ಯಾತ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಸಂದೇಶ ನೀಡಿದ್ದಾರೆ. ಇತ್ತೀಚೆಗೆ ಕೋಲಾರದ ಕೆಲ ಮುಸ್ಲಿಂ ಮುಖಂಡರು ಸಿದ್ದರಾಮಯ್ಯ ಅವರನ್ನು ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಆದರೆ ಕೆಎಚ್​ ಬಣದ ನಿಯೋಗದಲ್ಲಿ ತೆರಳಿದ್ದ ಮುಸ್ಲಿಂ ಮುಖಂಡರ ನಿಯೋಗ, ಈ ಹಿಂದೆ ಬಂದಿದ್ದ ಮುಸ್ಲಿಂ ಮುಖಂಡರಿಗೆ ವಾಸ್ತವತೆಯ ಅರಿವಿಲ್ಲ. ಕೋಲಾರದಲ್ಲಿ 40 ಸಾವಿರಕ್ಕೂ ಹೆಚ್ಚು ಮುಸ್ಲಿಮರ ಮತಗಳಿದ್ದು, ಪಕ್ಷದ ಅಲ್ಪಸಂಖ್ಯಾತರ ಸಮಿತಿ ಸೇರಿ ಬಹುತೇಕ ಮುಖಂಡರು ಮುನಿಯಪ್ಪ ಪರ ಇದ್ದಾರೆ. ಅವರ ಬೆಂಬಲಿಗರನ್ನು ಹಗುರವಾಗಿ ಪರಿಗಣಿಸಿ ಸ್ಪರ್ಧಿಸಿದ್ದೇ ಆದಲ್ಲಿ ಸೋಲುವ ಪರಿಸ್ಥಿತಿ ಎದುರಾಗಬಹುದು ಎಂದು ಮನವಿ ಮಾಡಿದೆ ಎನ್ನಲಾಗಿದೆ.


    ಕೋಲಾರದ ಕಾಂಗ್ರೆಸ್​ನಲ್ಲಿರುವ ಬಣಗಳನ್ನು ಸರಿಪಡಿಸದೆ ಬಂದರೆ ಸೋಲು ಖಚಿತ. ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣದವರು ಗೆಲುವಿನ ದಡ ಸೇರಿಸುತ್ತಾರೆಂದು ವಿಶ್ವಾಸ ಇಟ್ಟುಕೊಳ್ಳಬೇಡಿ, ನಿಮ್ಮನ್ನು ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗುತ್ತಿದೆ.


    ಕೆಎಚ್​ ಬಣದ ಮುಖಂಡರ ಮಾತುಗಳನ್ನು ಕೇಳಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಗೊಂದಲವಿರುವುದು, ಮುನಿಯಪ್ಪ ಮುನಿಸಿಕೊಂಡಿರುವುದು ಎಲ್ಲದರ ಅರಿವು ಇದೆ. ಕೋಲಾರದಿಂದ ಸ್ಪರ್ಧಿಸಿಯೇ ತೀರುತ್ತೇನೆಂದು ನಾನೆಲ್ಲೂ ಹೇಳಿಲ್ಲ. ಬಾದಾಮಿ ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿ ತೀಮಾರ್ನಿಸಲಾಗುವುದು ಎಂದು ತಿಳಿಸಿದ್ದೇನೆ. ಇನ್ನೂ ಎರಡು ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಡ ಬಂದಿದೆ. ಸ್ಪರ್ಧಿಸುವ ಅಗತ್ಯಬಂದರೆ ಖಂಡಿತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.


    ಮುಸ್ಲಿಂ ಮುಖಂಡರ ನಿಯೋಗದಲ್ಲಿ ಕಾಂಗ್ರೆಸ್​ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಇಕ್ಬಾಲ್​, ಮುಖಂಡರಾದ ಪ್ಯಾರೇಜಾನ್​, ಅಪ್ಸರ್​, ಏಜಾಜ್​, ಅಸ್ಲಾಂ, ಕೊಂಡರಾಜನಹಳ್ಳಿ ಏಜಾಜ್​, ನೂರುಲ್ಲಾ ಮತ್ತಿತರರು ಇದ್ದರು.

    ಪಕ್ಷ ಒಂದು ಮೂರು ಬಾಗಿಲು: ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ಮೊದಲಿಗೆ ಶಾಸಕರು, ವಿಧಾನಪರಿಷತ್​ ಸದಸ್ಯರು ನಂತರ ಮುಸ್ಲಿಂ, ಕುರುಬ ಸಮುದಾಯ ಮತ್ತು ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರನ್ನೊಳಗೊಂಡ ನಿಯೋಗ, ಗ್ರಾಪಂ ಅಧ್ಯಕ್ಷ, ಸದಸ್ಯರ ನಿಯೋಗಗಳು ತೆರಳಿ ಮನವಿ ಮಾಡಿಕೊಂಡಿದ್ದವು. ಭಾನುವಾರ ಕೆ.ಎಚ್​.ಮುನಿಯಪ್ಪ ಬೆಂಬಲಿಗರೂ ಆದ ಎಸ್ಸಿ ಘಟಕದ ಮುಖಂಡರು ಮತ್ತು ಸೋಮವಾರ ಮುಸ್ಲಿಂ ಮುಖಂಡರು ಭೇಟಿಯಾಗಿ ನಮ್ಮನ್ನು ಲಘುವಾಗಿ ಪರಿಗಣಿಸದಿರಿ ಎಂದು ಎಚ್ಚರಿಸಿದ್ದರು. ಇನ್ನು ಸಿದ್ದರಾಮಯ್ಯ ಸ್ಪರ್ಧೆ ಖಚಿತ ಎಂದು ರಮೇಶ್​ಕುಮಾರ್​ ಬಣ ಹೇಳುತ್ತಿರುವುದು ಒಂದೆಡೆಯಾದರೆ, ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಕೆಎಚ್​ ಬಣದ ಮುಖಂಡರು ಹೇಳುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಕಾಂಗ್ರೆಸ್​ ಪಕ್ಷ ಒಂದು, ಮೂರು ಬಾಗಿಲು ಎನ್ನುವಂತಾಗಿದೆ. ಇನ್ನು ಈ ಎಲ್ಲ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತಾರೋ, ಹಿಂದೇಟು ಹಾಕುತ್ತಾರೋ ಎಂಬ ಸಂಶಯ ಕಾರ್ಯಕರ್ತರನ್ನು ಕಾಡಲು ಶುರುಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts