More

    ಜೀವಕ್ಕೆ ಅಪಾಯವಿದ್ರೆ ಸಾಕ್ಷಿ ಗುರುತೇ ಬದಲು!; ಪೊಲೀಸ್, ಪ್ರಾಧಿಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಗೃಹ ಇಲಾಖೆ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಹೈ ಪ್ರೊಫೈಲ್ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳುವವರ ಜೀವಕ್ಕೆ ಅಪಾಯವಿದೆ ಎಂದು ಗೊತ್ತಾದರೆ ಸಾಕ್ಷಿಯ ಗುರುತನ್ನೇ ಬದಲಾಯಿಸಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆದು ಅವರಿಗೆ ಹೊಸ ಐಡೆಂಟಿಟಿ ಕಲ್ಪಿಸಿಕೊಡುವ ಅಧಿಕಾರವನ್ನು ಕೇಂದ್ರ ಗೃಹ ಇಲಾಖೆಯು ಆಯಾ ರಾಜ್ಯಗಳ ಪೊಲೀಸರು ಹಾಗೂ ಪ್ರಾಧಿಕಾರಗಳಿಗೆ ನೀಡಿದೆ. ಅಪರಾಧ ಸಾಕ್ಷಿದಾರರಿಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವ ಕುರಿತು ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಸೂಕ್ತ ರಕ್ಷಣೆ ಸಿಗುತ್ತದೆಂಬ ನಂಬಿಕೆ ಬಂದರೆ ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಸಾಕ್ಷ್ಯ ನುಡಿಯಲು ಸಾಕ್ಷಿದಾರರು ನಿರ್ಭೀತಿಯಿಂದ ಮುಂದೆ ಬರಲು ಸಾಧ್ಯವಾಗುತ್ತದೆ ಎಂಬುದು ಈ ಕ್ರಮದ ಹಿಂದಿರುವ ಕಾರಣ.

    ಬದಲಾವಣೆ ಹೇಗೆ?: ನಿರ್ದಿಷ್ಟ ಅಪರಾಧ ಪ್ರಕರಣದಲ್ಲಿ ಸಾಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ಗೌಪ್ಯ ಮಾಹಿತಿಯಿಂದ ದೃಢಪಟ್ಟರೆ, ಅವರ ಮನವಿ ಮೇರೆಗೆ ಗುರುತು ಬದಲಾಯಿಸಬಹುದು. ಸಾಕ್ಷಿಯ ಹೆಸರು, ವೃತ್ತಿ, ವಿಳಾಸ ಬದಲಾಯಿಸಿ, ಸರ್ಕಾರಿ ಸಂಸ್ಥೆಗಳು ಅವರ ಗುರುತಿಗೆ ಪರಿಗಣಿಸಬಹುದಾದಂತಹ ದಾಖಲಾತಿ ಮಾಡಿಕೊಡಬಹುದು. ಆದರೆ, ಹೊಸ ಐಡೆಂಟಿಟಿ ಆತ/ಆಕೆಯ ಮೂಲ ಶೈಕ್ಷಣಿಕ, ವೃತ್ತಿ ಸಂಬಂಧಿ ಹಾಗೂ ಆಸ್ತಿ ಹಕ್ಕನ್ನು ಕಸಿದುಕೊಳ್ಳುವಂತಿರಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.

    ವೆಚ್ಚ ಉಚಿತ: ಭದ್ರತೆ ದೃಷ್ಟಿಯಿಂದ ಸಾಕ್ಷಿಯ ವಾಸ್ತವ್ಯವನ್ನು ರಾಜ್ಯದ ಒಳಗೆ ಅಥವಾ ದೇಶದ ಯಾವುದೇ ಜಾಗಕ್ಕೆ ಬೇಕಾದರೂ ಬದಲಾಯಿಸಿ ಆದೇಶಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ವಾಸ್ತವ್ಯಕ್ಕೆ ತಗುಲುವ ವೆಚ್ಚವನ್ನು ಸಾಕ್ಷಿದಾರರ ರಕ್ಷಣಾ ನಿಧಿಯಿಂದ ಬಳಸಿಕೊಳ್ಳಬಹುದು. ಸಾಕ್ಷಿಗೆ ಸಂಬಂಧಿಸಿದ ಪ್ರತಿ ವಿಚಾರದಲ್ಲೂ ಗೌಪ್ಯತೆ ಕಾಪಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    ಮುಖಾಮುಖಿ ಬೇಡ: ಪೊಲೀಸ್ ತನಿಖೆ ಅಥವಾ ಕೋರ್ಟ್ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ಹಾಗೂ ಸಾಕ್ಷಿದಾರನ ಮುಖಾಮುಖಿ ಭೇಟಿಗೆ ಅವಕಾಶ ಕಲ್ಪಿಸಬಾರದು. ಇಮೇಲ್ ಹಾಗೂ ಮೊಬೈಲ್ ಕರೆಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು. ಸಾಧ್ಯವಾದರೆ ಸಾಕ್ಷಿದಾರರ ಮೂಲ ಮೊಬೈಲ್ ಸಂಖ್ಯೆ ಬದಲಾಯಿಸಿ ಬೇರೆ ಸಂಖ್ಯೆ ಒದಗಿಸಬೇಕು ಎಂದು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಯಲ್ಲಿ ನಮೂದಿಸಲಾಗಿದೆ.

    ದೇಣಿಗೆಗೂ ಅವಕಾಶ: ವಿಟ್ನೆಸ್ ಪ್ರೊಟೆಕ್ಷನ್ ನಿಧಿಗೆ ಬೇಕಾದ ಹಣವನ್ನು ವಾರ್ಷಿಕ ರಾಜ್ಯ ಬಜೆಟ್​ನಲ್ಲಿ ಮೀಸಲಿಡಬೇಕು. ಆ ಹಣವನ್ನು ಸಾಕ್ಷಿದಾರರ ಭದ್ರತೆಗೆ ಬಳಸಬೇಕು. ಬಳಸಿದ ಹಣಕ್ಕೆ ಸಂಬಂಧಿಸಿದ ರಸೀದಿ/ದಾಖಲಾತಿಯನ್ನು ಕೋರ್ಟ್​ಗೆ ಸಲ್ಲಿಸಬೇಕು. ಚಾರಿಟಬಲ್ ಟ್ರಸ್ಟ್, ಉದ್ಯಮಿಗಳು, ಇನ್ನಿತರ ಸಂಘ-ಸಂಸ್ಥೆಗಳಿಂದ ದೇಣಿಗೆ ಪಡೆಯಬಹುದು.

    ಕುಟುಂಬ ಸದಸ್ಯರಿಗೂ ಭದ್ರತೆ: ಅಪರಾಧ ನಡೆದಿರುವ ಜಿಲ್ಲಾ ವ್ಯಾಪ್ತಿಯಲ್ಲಿ ಸಾಕ್ಷಿಯ ಭದ್ರತೆ ಕೋರಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಎಸಿಪಿ ಮತ್ತು ಡಿವೈಎಸ್ಪಿ ಅಧಿಕಾರಿಗಳಿಂದ ಗೌಪ್ಯ ಮಾಹಿತಿ ತರಿಸಿಕೊಂಡು ಪರಿಶೀಲಿಸಿದ ಬಳಿಕ ಭದ್ರತೆಗೆ ಆದೇಶಿಸಲಾಗುತ್ತದೆ. ಪ್ರಕರಣದ ತೀವ್ರತೆ ತಿಳಿದುಕೊಂಡು, ಅಗತ್ಯವಾದರೆ ಸಾಕ್ಷಿದಾರನ ಜತೆಗೆ ಆತನ/ಆಕೆಯ ಕುಟುಂಬ ಸದಸ್ಯರಿಗೂ ಜೀವ ಬೆದರಿಕೆ ಇದ್ದರೆ ಅವರಿಗೂ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಬಹುದು.

    ಎನ್​ಐಎ ಪತ್ರದ ಮೇಲೆ ಜಾರಿ: ದೇಶದ ಐಕ್ಯತೆ ಮತ್ತು ಭದ್ರತೆಗೆ ಧಕ್ಕೆ ತರುವ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಎನ್​ಐಎ ತನಿಖೆ ನಡೆಸುತ್ತದೆ. ಆದರೆ, ಹೈಪ್ರೊಫೈಲ್ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧದ ಸಾಕ್ಷಿಗಳಿಗೆ ತೊಂದರೆಯಾಗದಂತೆ ಭದ್ರತೆ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕುವುದು, ಗೌರವಕ್ಕೆ ಧಕ್ಕೆ ತರುವುದು, ದೈಹಿಕ ಹಲ್ಲೆ ಮಾಡುವ ಪ್ರಕರಣಗಳು ನಡೆಯುತ್ತವೆ. ಸಾಕ್ಷಿಗಳಿಗೆ ಭದ್ರತೆ ಒದಗಿಸದಿದ್ದರೆ ಅಪರಾಧಿಗಳನ್ನು ಶಿಕ್ಷಿಸಿ, ನ್ಯಾಯದಾನ ಸವಾಲಾಗುತ್ತದೆ. ಆದ್ದರಿಂದ ಸಾಕ್ಷಿಗಳಿಗೆ ಹೇಗೆಲ್ಲ ಭದ್ರತೆ ಒದಗಿಸಬೇಕು ಎಂದು ಎನ್​ಐಎ ಮಾರ್ಗಸೂಚಿ ಸಿದ್ಧಪಡಿಸಿದ್ದು, ಅದನ್ನೇ ಜಾರಿಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

    ಬೆದರಿಕೆಯಲ್ಲೂ 3 ಶೈಲಿ

    • ತನಿಖೆ ಸಂದರ್ಭದಲ್ಲಿ ಸಾಕ್ಷಿ ಅಥವಾ ಅವರ ಕುಟುಂಬಕ್ಕೆ ಜೀವ ಬೆದರಿಕೆ
    • ಸಾಕ್ಷಿಯ ಸುರಕ್ಷತೆ, ಗೌರವಕ್ಕೆ ಧಕ್ಕೆ ಅಥವಾ ಆಸ್ತಿ ಹಾನಿ ಮಾಡುವ ಸಾಧ್ಯತೆ
    • ಮಾನಸಿಕ ಅಥವಾ ದೈಹಿಕ ಕಿರುಕುಳ ಕೊಡುವುದಾಗಿ ಬೆದರಿಕೆ ಹಾಕುವುದು

    ಭದ್ರತೆ ಹೇಗಿರಬೇಕು?

    • ಸಾಕ್ಷಿದಾರರ ಮನೆಗೆ ಸೆಕ್ಯುರಿಟಿ ಡೋರ್, ಸಿಸಿ ಕ್ಯಾಮರಾ, ಅಲಾಮ್ರ್, ಫೆನ್ಸಿಂಗ್
    • ಹೆಸರು, ವಿಳಾಸ ಮರೆಮಾಚಿ ಬೇರೆ ಹೆಸರು ಅಥವಾ ಅಕ್ಷರದಲ್ಲಿ ಗುರುತಿಸಿ
    • ತುರ್ತು ಸಂದರ್ಭದಲ್ಲಿ ಸಂರ್ಪಸಲು ಅಧಿಕಾರಿಗಳ ಮೊಬೈಲ್ ಸಂಖ್ಯೆ ಕೊಡಬೇಕು, ಮನೆ ಬದಲಾಯಿಸಿ ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ವಾಸ್ತವ್ಯ ಕಲ್ಪಿಸಿ
    • ಮನೆ ಬಳಿ ಭದ್ರತೆ ಒದಗಿಸಬೇಕು ಹಾಗೂ ನಿರಂತರವಾಗಿ ಪೆಟ್ರೋಲಿಂಗ್ ಹಾಕಬೇಕು
    • ಕೋರ್ಟ್ ವಿಚಾರಣೆಗೆ ಕರೆತರುವಾಗ ಪೊಲೀಸ್ ಎಸ್ಕಾರ್ಟ್​ನಲ್ಲಿ ಕರೆತರಬೇಕು
    • ಕಾಲಕಾಲಕ್ಕೆ ಸಾಕ್ಷಿದಾರರ ಅಗತ್ಯಕ್ಕೆ ಬೇಕಾಗುವಷ್ಟ ಹಣಕಾಸಿನ ನೆರವು ಒದಗಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts