More

    ಕಾನೂನು ಉಲ್ಲಂಘಿದರೆ ಕ್ರಮ ಕೈಗೊಳ್ಳಿ

    ಕಾರವಾರ: ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಇಂದಿನಿಂದ ಜಾರಿಗೆ ಬರುತ್ತಿದ್ದು ಕಾಯ್ದೆ ಪಾಲಿಸದವರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ ಅಧಿಕಾರಿಗಳಿಗೆ ಸೂಚಿಸಿದರು.

    ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ಗೋಹತ್ಯೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ 6 ವರ್ಷದವರೆಗೆ, ದಂಡವನ್ನು 50 ಸಾವಿರದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಎರಡನೇ ಬಾರಿಯ ಅಪರಾಧಕ್ಕೆ 10 ಲಕ್ಷ ರೂ. ವರೆಗೆ ದಂಡ ವಿಧಿಸಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಗ್ರಾಮಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಪಿಡಿಒಗಳು ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.

    ಕಾಯ್ದೆಯ ಪ್ರಕಾರ ಜಾನುವಾರು ಎಂದರೆ ಹಸು, ಕರು, ಎತ್ತು, ಹೋರಿಗಳು ಹಾಗೂ 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಆಗಿವೆ. ಯಾವುದೇ ಜಾನುವಾರುಗಳು ಖಸಾಯಿ ಖಾನೆಗೆ ಹೊಗಬಾರದು. ಅವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಣೆ ಮಾಡಬೇಕಾಗಿ ಬಂದಲ್ಲಿ ಪಶು ವೈಧ್ಯರ ಪ್ರಮಾಣ ಪತ್ರ ಮತ್ತು ಮಾಲೀಕತ್ವದ ಪತ್ರ ಹಾಗೂ ಎನಿಮಲ್ ಟ್ಯಾಗ್ ಹೊಂದಿರುವಂತೆ ನೊಡಿಕೊಳ್ಳಬೇಕು. ಅಲ್ಲದೆ ಅವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಣೆಗೆ ಅವಕಾಶ ನೀಡಬಾರದು. ಅವುಗಳಿಗೆ ಅಗತ್ಯ ಆಹಾರ ಮತ್ತು ನೀರು ವಾಹನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗರ್ಭ ಧರಿಸಿದ ಜಾನುವರುಗಳನ್ನು ಸಾಗಣೆ ಮಾಡಲು, ರಾತ್ರಿ 8 ರಿಂದ ಬೆಳಗ್ಗೆ 6 ವರೆಗಿನ ಅವಧಿಯಲ್ಲಿ ಕೂಡ ಸಾಗಣೆಗೆ ಅವಕಾಶ ನೀಡಬಾರದು ಎಂದರು.

    ಕಾಯ್ದೆ ಉಲ್ಲಂಘನೆಯಾದ ಬಗ್ಗೆ ದೂರು ಬಂದ ನಂತರ ತಕ್ಷಣ ಹೊಸ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಬೇಕು. ಈ ಕಾಯ್ದೆ ಜಾರಿಗೆ ಪೊಲೀಸ್ ಇಲಾಖೆ ಜತೆ ಇತರ ಇಲಾಖೆಗಳು ಸಹಕಾರ ನೀಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಸ್​ಪಿ ಶಿವಪ್ರಕಾಶ ದೇವರಾಜು, ಎಡಿಸಿ ಕೃಷ್ಣಮೂರ್ತಿ ಎಚ್.ಕೆ. ಎಸಿ ವಿದ್ಯಾಶ್ರೀ ಚಂದರಗಿ ಇದ್ದರು.

    ಸಚಿವರು ಹೇಳಿದ್ದೇನು

    ಮುಂದಿನ ದಿನದಲ್ಲಿ ಪ್ರತಿ ತಾಲೂಕಿಗೆ 2 ಗೋ ಶಾಲೆಗಳನ್ನು ಪ್ರಾರಂಭಿಸಲು ಕ್ರಮ.

    ಸದ್ಯ ಇರುವ ಗೋ ಶಾಲೆಗಳಿಗೆ ಮೇವು ಸೇರಿ ಇತರ ಸೌಲಭ್ಯಗಳ ಮಾಹಿತಿ ಸಂಗ್ರಹಿಸಲು ಸೂಚನೆ.

    ರೈತರು ಸಾಕಲಾಗದ ಹಸುಗಳನ್ನು ಗೋ ಶಾಲೆಗಳಿಗೆ ಸೇರಿಸುವಂತೆ ಸಲಹೆ

    ಗೋ ಹತ್ಯೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಪ್ರಾರಂಭ.

    *ಗೋ ಹತ್ಯೆ ನಿಷೇಧ ಸಮರ್ಪಕ ಜಾರಿಗೆ ವಾರ್ ರೂಂ ಆರಂಭ.

    ರಾಜ್ಯದಲ್ಲಿ ಇನ್ನು ಒಂದೂ ಗೋವಿನ ಹತ್ಯೆಯಾಗದಂತೆ ತಡೆಯುವಲ್ಲಿ ಕಠಿಣ ಕಾಯ್ದೆ ಜಾರಿಯಾಗಿದೆ. ಗೋ ಹತ್ಯೆ ತಡೆಯುವಲ್ಲಿ ರಾಜ್ಯ ದೇಶಕ್ಕೇ ಮಾದರಿಯಾಗುವ ನಿರೀಕ್ಷೆ ಇದೆ.

    | ಪ್ರಭು ಚೌಹಾಣ, ಪಶು ಸಂಗೋಪನಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts