More

    ಕೆಲ್ಸ ಮಾಡಲಾಗದಿದ್ದರೆ ಜಾಗ ಖಾಲಿ ಮಾಡಿ: ಗುತ್ತಿಗೆ ಕಂಪನಿಗೆ ಸಿಎಂ ಖಡಕ್ ಸೂಚನೆ

    ಬೆಂಗಳೂರು: ಕಾಮಗಾರಿ ಆರಂಭಿಸುವಂತೆ ಆರು ತಿಂಗಳ ಹಿಂದೆಯೇ ಕಾರ್ಯಾದೇಶ ಹೊರಡಿಸಿ, ಹಣ ನೀಡಿದ್ದರೂ ಈವರೆಗೆ 5-6 ಪರ್ಸೆಂಟ್ ಮಾತ್ರ ಕೆಲ್ಸ ಮಾಡಿದ್ದೀರಿ. ನಿಮಗಿದು ಸಮಾಧಾನ ತಂದಿದೆಯೇ? ಇಲ್ಲಿ ನಾಗರಿಕರಿಗೆ ಆಗುತ್ತಿರುವ ತೊಂದ್ರೆ ಬಗ್ಗೆ ನಿಮಗೆ ಪ್ರಜ್ಞೆ ಬೇಡ್ವಾ. ನಿಮ್ಮಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಜಾಗ ಖಾಲಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಗುತ್ತಿಗೆ ಕಂಪನಿ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ ಪರಿಯಿದು.

    ಬುಧವಾರ ಡಿಸಿಎಂ, ಸಚಿವ ಸಹದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಳೆನೀರುಗಾಲುವೆಗಳ ಕಾಮಗಾರಿ ವೀಕ್ಷಿಸಿ ವಾಪಸಾಗುವಾಗ, ಅರ್ಧಕ್ಕೆ ಸ್ಥಗಿತಗೊಂಡಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಕೆಲ ಸಮಯ ಗುತ್ತಿಗೆ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಕಾಮಗಾರಿ ವಿಳಂಬಕ್ಕೆ ಸಬೂಬು ನೀಡಲು ಯತ್ನಿಸಿದ ಕಂಪನಿಯವರ ಮಾತಿಗೆ ಬ್ರೇಕ್ ಹಾಕಿ ಕೆಲಸ ಮಾಡದಿರುವ ಬಗ್ಗೆ ರೇಗಿದರು. ಕಾರ್ಯಾದೇಶ ನೀಡುವ ವೇಳೆ ಯೋಜನೆ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಸ್ಥಗಿತಗೊಂಡಿರುವ ಕಾಮಗಾರಿ ಪುನಾರಂಭಕ್ಕಾಗಿಯೇ ನಿಮಗೆ ಹಣ ನೀಡಿದ್ದರೂ, ಪ್ರಗತಿ ತೋರಿಸಲು ಸಾಧ್ಯವಾಗಿಲ್ಲ. ಕಾಟಾಚಾರಕ್ಕಾಗಿ ಕೆಲಸ ಮಾಡದೆ ಗುತ್ತಿಗೆ ವಹಿಸಿಕೊಂಡಂತೆ ಕಾಮಗಾರಿ ನಡೆಸಿ. ಇಲ್ಲವೇ ಕಾಮಗಾರಿ ಬಿಟ್ಟು ಹೊರನಡೆಯಿರಿ ಎಂದು ತರಾಟೆಗೆ ತೆಗೆದುಕೊಂಡರು.

    ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಪ್ರಮುಖ ಕಾಮಗಾರಿ ಆಗಿದ್ದು, ಈ ಭಾಗದ ಟ್ರಾಫಿಕ್ ಸಮಸ್ಯೆಗೆ ಹೆಚ್ಚಿನ ಉಪಯೋಗವಾಗಲಿದೆ. ಕಾಮಗಾರಿ ಚುರುಕು ನೀಡಲು ಸ್ಪಷ್ಟ ಸೂಚನೆ ನೀಡಬೇಕಿದೆ ಎಂದರು. ಸಚಿವರ ಮಾತನ್ನು ಗ್ರಹಿಸಿದ ಸಿಎಂ, ಗುತ್ತಿಗೆದಾರರಿಗೆ ನೋಟಿಸ್ ನೀಡಿರಿ. ಇದಕ್ಕೆ ಸ್ಪಂದಿಸದಿದ್ದರೆ ಕಾನೂನಿನಂತೆ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ಗುತ್ತಿಗೆ ನೀಡುವಂತೆ ಸೂಚಿಸಿದರು.

    ಕಾಮಗಾರಿಗಳ ವೀಕ್ಷಣೆ:

    ಇದಕ್ಕೂ ಮುನ್ನ ಬೆಳಗ್ಗೆ 11.40ಕ್ಕೆ ಗೃಹ ಕಚೇರಿ ಕೃಷ್ಣಾದಿಂದ ವೋಲ್ವೊ ಬಸ್‌ನಲ್ಲಿ ನಗರ ಪ್ರದಕ್ಷಿಣೆ ಆರಂಭಿಸಿದ ಸಿಎಂ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿರುವ ಮಳೆನೀರುಗಾಲುವೆ ಕಾಮಗಾರಿ ಸಹಿತ 7 ಕಡೆಗಳಲ್ಲಿ ವೀಕ್ಷಣೆ ಮಾಡಿದರು. ಸಾರಕ್ಕಿ ಬಳಿ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾನ ಕಾರ್ಯವನ್ನು ವೀಕ್ಷಿಸಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಇಂತಹ ಯೋಜನೆ ಜನರಿಗೆ ಅನುಕೂಲ ಆಗುವುದಿದ್ದರೆ ಬೇರೆಡೆಯೂ ಕೈಗೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅನಗ್ರಹ ಲೇಔಟ್ ಬಳಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಸಿಎಂ ಅವರನ್ನು ಬರಮಾಡಿಕೊಂಡು ಅಲ್ಲಿನ ಸಮಸ್ಯೆಯನ್ನು ವಿವರಿಸಿದರು.

    ಈಜಿಪುರ ಮೇಲ್ಸೇತುವೆ ವೀಕ್ಷಣೆ ವೇಳೆ ಮಳೆ ಸುರಿಯಲಾರಂಭಿಸಿದ ಕಾರಣ ಯಮಲೂರು ಕೊಡಿ ಬಳಿ ಮಳೆನೀರುಗಾಲುವೆ ಕಾಮಗಾರಿ ಹಾಗೂ ಅಗರ ಕೆರೆಯ ಕಾಮಗಾರಿ ವೀಕ್ಷಿಸದೆ ವಾಪಸಾಗಬೇಕಾಯಿತು.

    ಸಿಟಿ ರೌಂಡ್ಸ್ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಸಿಎಂ ರಾಜಕೀಯ ಸಲಹೆಗಾರ ಕೆ.ಗೋವಿಂದರಾಜು, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಲಮಂಡಲಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್, ಬಿಡಿಎ ಆಯುಕ್ತ ಎನ್.ಜಯರಾಂ ಹಾಗೂ ಇತರ ಹಿರಿಯ ಅಧಿಕಾರಿಗಳಿದ್ದರು.

    ಸಿಟಿ ರೌಂಡ್ಸ್ ವೇಳೆ ಟ್ರಾಪಿಕ್ ಜಾಮ್:

    ಸಿಎಂ, ಡಿಸಿಎಂ ಅವರು ಸಿಟಿ ರೌಂಡ್ಸ್ ಹೋದ ಕಡಗಳಲ್ಲಿ ಕಾಮಗಾರಿ ವೀಕ್ಷಣೆ ಮಾಡಿದರು. ಈ ವೇಳೆ ಇಲ್ಲೆಲ್ಲ ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು ಕಂಡುಬಂತು. ಸಿಎಂ ಬೆಂಗಾವಲು ವಾಹನ ಹೋದ ಬಳಿಕವೇ ಸವಾರರಿಗೆ ತರಳು ಅವಕಾಶ ಮಾಡಿಕೊಟ್ಟ ಕಾರಣ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts