More

    ಅಧಿಕಾರಕ್ಕೆ ಬಂದರೆ ಕೆಜಿಎಫ್​ನ ಎಲ್ಲ ಸಮಸ್ಯೆಗಳಿಗೆ ಪರಿಹಾರ; ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಭರವಸೆ; ಮುನ್ಸಿಪಲ್​ ಮೈದಾನದಲ್ಲಿ ಬೃಹತ್​ ಸಮಾವೇಶ

    ಕೆಜಿಎಫ್​: ಯಾವುದೇ ಪಕ್ಷಗಳ ಹಂಗು ಇಲ್ಲದೇ ಜೆಡಿಎಸ್​ಗೆ ಐದು ವರ್ಷಗಳ ಆಡಳಿತಕ್ಕೆ ಅವಕಾಶ ನೀಡಿದಲ್ಲಿ ಕೆಜಿಎಫ್​ನಲ್ಲಿ 25 ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಪಟ್ಟಣದ ಮುನ್ಸಿಪಲ್​ ಮೈದಾನದಲ್ಲಿ ಜೆಡಿಎಸ್​ನಿಂದ ಬುಧವಾರ ಆಯೋಜಿಸಿದ್ದ ಪಂಚರತ್ನ ಯೋಜನೆಯ ಬೃಹತ್​ ಸಮಾವೇಶದಲ್ಲಿ ಮಾತನಾಡಿದರು.


    ಕ್ಷೇತ್ರದಲ್ಲಿ ಜನರಿಗೆ ಹಕ್ಕುಪತ್ರಗಳು ನೀಡಿಲ್ಲ. ಆಸ್ಪತ್ರೆಗಳು, ಮೂಲಸೌಲಭ್ಯಗಳ ಕೊರತೆ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಜೆಡಿಎಸ್​ ಅಧಿಕಾರಕ್ಕೆ ಬಂದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.


    ಉತ್ತಮ ಆರೋಗ್ಯ, ಶಿಕ್ಷಣದ ಗುರಿ: ಜೆಡಿಎಸ್​ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ರೈತರ ಬದುಕು, ಪ್ರತಿ ಕುಟುಂಬಕ್ಕೆ ಉದ್ಯೋಗ, ಪ್ರತಿ ಕುಟುಂಬಕ್ಕೆ ಸೂರನ್ನು ಒದಗಿಸಿಕೊಡುವುದು ಪಂಚರತ್ನ ಯೋಜನೆಯ ಉದ್ದೇಶ. ಇದನ್ನು ಜಾರಿಗೊಳಿಸಲು 1.25 ಲಕ್ಷ ಕೋಟಿ ರೂಪಾಯಿ ಸಮಗ್ರ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ಗ್ರಾಮದಲ್ಲಿ ಹೈಟೆಕ್​ ಶಾಲೆಗಳು, ಆರೋಗ್ಯ ಕೇಂದ್ರಗಳನ್ನು ಆರಂಭಿಸಿ ಬಡವರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ದೊರಕಿಸಿಕೊಡುವ ಗುರಿ ಹೊಂದಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.


    ವಿಲನಾದರೆ ಮತ್ತೆ ಮತ ಕೇಳುವುದಿಲ್ಲ: ಮುಂದಿನ ಚುನಾವಣೆಯಲ್ಲಿ ಒಂದು ಅವಕಾಶ ನೀಡಿ 5 ವರ್ಷದ ಸರ್ಕಾರ ನನ್ನ ಕೈಯಲ್ಲಿ ನೀಡಿ, ನಾನು ಅದರಲ್ಲಿ ವಿಫಲನಾದರೆ ಮತ್ತೆ ಎಂದಿಗೂ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ. ನಾನು ಬಿಜೆಪಿ ಮತ್ತು ಕಾಂಗ್ರೆಸ್​ ಅವರಂತೆ ಭಂಡನಲ್ಲ. ಸ್ವಲ್ಪ ಮರ್ಯಾದೆಯಿಂದ ಬದುಕುತ್ತಿದ್ದೇನೆ. ಪಂಚರತ್ನ ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಲು ತಪ್ಪಿದಲ್ಲಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಕುಮಾರಸ್ವಾಮಿ ಶಪಥ ಮಾಡಿದರು.


    ಸ್ವತಂತ್ರ ಸರ್ಕಾರ ಇಲ್ಲದಿದ್ದರೂ 37 ಮಂದಿ ಶಾಸಕರನ್ನಿಟ್ಟುಕೊಂಡು 14 ತಿಂಗಳ ಅಧಿಕಾರಾವಧಿಯಲ್ಲಿ 25 ಸಾವಿರ ಕೋಟಿ ರೂಪಾಯಿ ಹೊಂದಿಸಿ ರೈತರ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗಿದ್ದು, ಇನ್ನು 5 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂಪಾಯಿ ಹಣವನ್ನು ಹೊಂದಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.


    ಸಾಲ ತೀರಿಸುವವರು ಯಾರು?: ಕೆಜಿಎಫ್​ನಲ್ಲಿ ಕಾಂಗ್ರೆಸ್​ ಮತ ಪಡೆಯಲು ಕಳೆದ ಬಾರಿ ಚುನಾವಣೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಿ ಶಕ್ತಿ ಸಂಗಳಿಗೆ ಡಿಸಿಸಿ ಬ್ಯಾಂಕ್​ನ ಮೂಲಕ ಸಾಲ ನೀಡಿದ್ದಾರೆ. ಸಾಲವನ್ನೇನೋ ನೀಡಿದರು, ಆದರೆ ಈಗ ಆ ಸಾಲವನ್ನು ತೀರಿಸುವವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿ, ಜೆಡಿಎಸ್​ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಿ ಶಕ್ತಿ ಸಂಗಳು ಮಾಡಿರುವ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು.


    ತಡವಾಗಿ ಆರಂಭವಾದ ಕಾರ್ಯಕ್ರಮ: ಕಾರ್ಯಕ್ರಮ ಮಧ್ಯಾಹ್ನ 2.30 ನಿಗದಿಯಾಗಿದ್ದು ಆ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ ಕಾರ್ಯಕ್ರಮ ಸಂಜೆ 6.15ಕ್ಕೆ ಪ್ರಾರಂಭವಾಗಿದ್ದರಿಂದ ಮಧ್ಯಾಹ್ನದಿಂದ ಬಿಸಿಲಿನಲ್ಲಿ ಬಸವಳಿದಿದ್ದ ಜನರು ಕಾರ್ಯಕ್ರಮ ಪ್ರಾರಂಭವಾಗುವ ಮುನ್ನವೇ ಗುಂಪು ಗುಂಪಾಗಿ ನಿರ್ಗಮಿಸಿದ್ದರು.


    ಕೆಲವು ಕಾರ್ಯಕರ್ತರು ವಕೀಲ ಬಿ.ಸುರೇಶ್​ಕುಮಾರ್​ ಅವರಿಗೆ ಮತ್ತು ಸ್ಥಳಿಯರಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಪ್ಲೆಕಾರ್ಡ್​ಗಳನ್ನು ಹಿಡಿದುಕೊಂಡಿರುವುದು ಕಂಡುಬಂತು.

    ಅಧಿಕಾರಕ್ಕೆ ಬಂದರೆ ಕೆಜಿಎಫ್​ನ ಎಲ್ಲ ಸಮಸ್ಯೆಗಳಿಗೆ ಪರಿಹಾರ; ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಭರವಸೆ; ಮುನ್ಸಿಪಲ್​ ಮೈದಾನದಲ್ಲಿ ಬೃಹತ್​ ಸಮಾವೇಶ
    ಜೆಡಿಎಸ್​ ಸಮಾವೇಶದಲ್ಲಿ ವಕೀಲ ಬಿ.ಸುರೇಶ್​ಕುಮಾರ್​ ಪರವಾಗಿ ಫ್ಲೆಕ್ಸ್​ ಪ್ರದರ್ಶಿಸಿದ ಅಭಿಮಾನಿಗಳು.


    ವಿಧಾನಪರಿಷತ್​ ಸದಸ್ಯ ಇಂಚರ ಗೋವಿಂದರಾಜು, ಚಿಂತಾಮಣಿ ಶಾಸಕ ಜಿ. ಕೃಷ್ಣಾರೆಡ್ಡಿ, ಜೆಡಿಎಸ್​ ಜಿಲ್ಲಾಧ್ಯಕ್ಷ ವೆಂಕಟ ಶಿವಾರೆಡ್ಡಿ, ವಿಧಾನ ಪರಿಷತ್​ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಲ್ಲೆಯ ವಿವಿಧ ತಾಲೂಕುಗಳ ಆಕಾಂಗಳಾದ ಸಿಎಂಆರ್​ ಶ್ರೀನಾಥ್​, ಮಲ್ಲೇಶ್​ಬಾಬು, ರಾಮೇಗೌಡ, ಡಾ. ರಮೇಶ್​ಬಾಬು, ಕುರ್ಕಿ ರಾಜೇಶ್ವರಿ, ಮುಖಂಡರಾದ ಕೆ. ರಾಜೇಂದ್ರನ್​, ದಯಾನಂದ್​, ವಕ್ತಾರ ಹರಿವಳಗನ್​ ಮೊದಲಾದವರು ಇದ್ದರು.

    ಸಭೆ ನಡೆಸಿ ಒಮ್ಮತದಿಂದ ಅಭ್ಯರ್ಥಿ ಘೋಷಣೆ: ಕೆಜಿಎಫ್ ​ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಗೊಂದಲಗಳಿದ್ದು, ಸ್ಥಳಿಯ ವಕೀಲ ಬಿ. ಸುರೇಶ್​ಕುಮಾರ್​ ಅವರಿಗೆ ಅವಕಾಶ ಕಲ್ಪಿಸುವಂತೆ ಹಲವು ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಡಾ.ರಮೇಶ್​ಬಾಬು ಸಹ ತಮಗೆ ಕೆಜಿಎಫ್​ನಲ್ಲಿ ಅವಕಾಶ ಕಲ್ಪಿಸುವಂತೆ ಕೋರಿರುವುದರಿಂದ ಮುಂದಿನ ಒಂದು ವಾರದೊಳಗೆ ಆಕಾಂಕ್ಷಿಗಳೆಲ್ಲರನ್ನೂ ಸಭೆ ಸೇರಿಸಿ ಒಮ್ಮತದ ರ್ನಿಣಯ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

    ಬಂಗಾರಪೇಟೆ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿರುವ ಮಲ್ಲೇಶ್​ಬಾಬು ಅವರನ್ನು ಕುರಿತು ಸಂಭವನೀಯ ಅಭ್ಯರ್ಥಿ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಅಚ್ಚರಿ ಉಂಟು ಮಾಡಿದರು.

    ಕೆಜಿಎಫ್​ನಲ್ಲಿ ಕೈಗಾರಿಕೆ ಅವಕಾಶ: ಸರ್ಕಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದಲ್ಲಿ ಕೆಜಿಎಫ್​ನಲ್ಲಿ ಕೈಗಾರಿಕೋದ್ಯಮಕ್ಕೆ ಅವಕಾಶ ಕಲ್ಪಿಸಬಹುದು. ಕೇಂದ್ರ ಸರ್ಕಾರ ಬೆಮೆಲ್​ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದು ಇದರಿಂದಾಗಿ ಕಾರ್ಮಿಕರ ಬದುಕು ದುಸ್ತರವಾಗಲಿದೆ ಎಂದು ಕಿಡಿಕಾಡಿದರು.


    ತಮಿಳು ನಿವಾಸಿಗಳು ಹಾಗೂ ಬೇತಮಂಗಲದ ರೈತಾಪಿ ವರ್ಗದ ವಿಶ್ವಾಸ ಗಳಿಸಲು ಸಾಧ್ಯವಾಗದ ಕಾರಣದಿಂದಾಗಿ ಮಾಜಿ ಶಾಸಕ ದಿ.ಭಕ್ತವತ್ಸಲಂ ಎರಡು ಬಾರಿ ಗೆಲುವಿನ ಸನಿಹಕ್ಕೆ ಬಂದು ಸೋತಿದ್ದರು. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೀಡಿದಂತೆ ರಾಜ್ಯದಲ್ಲಿ ನೀಡಿದರೆ ದೊಡ್ಡಮಟ್ಟದ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts