More

    ಚಿಕ್ಕಲ್ಲೂರು ಜಾತ್ರೆ ಪ್ರಾಣಿವಧೆಗೆ ಪ್ರತ್ಯೇಕ ಸ್ಥಳ ಗುರುತಿಸಿ

    ಕೊಳ್ಳೇಗಾಲ: ಬಕ್ರೀದ್ ಹಬ್ಬದ ವೇಳೆ ಜಿಲ್ಲಾಡಳಿತ ಪ್ರಾಣಿ ವಧೆಗೆ ನಿರ್ದಿಷ್ಟ ಸ್ಥಳಾವಕಾಶ ಕಲ್ಪಿಸಿದಂತೆ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿಯೂ ಪಂಕ್ತಿ ಸೇವೆಗೆ ತರುವ ಪ್ರಾಣಿ ವಧೆಗೆ ಪ್ರತ್ಯೇಕ ಸ್ಥಳ ಗುರುತಿಸಬೇಕು ಎಂದು ಶಾಸಕ ಎನ್.ಮಹೇಶ್ ಆಗ್ರಹಿಸಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ನವದೆಹಲಿಯ ಸಾಹಿತ್ಯ ಅಕಾಡೆಮಿ, ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನ, ಕೊಳ್ಳೇಗಾಲದ ದಲಿತ ಬರಹಗಾರರ ಬಳಗ ಹಾಗೂ ಚಾಮರಾಜನಗರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಮಂಟೇಸ್ವಾಮಿ ನೀಲಗಾರ ಪರಂಪರೆ ಹಾಗೂ ಚಿಕ್ಕಲ್ಲೂರು ಜಾತ್ರೆ ಸಾಂಸ್ಕೃತಿಕ ಅನನ್ಯತೆ ಮತ್ತು ಸವಾಲುಗಳು ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಚಿಕ್ಕಲ್ಲೂರು ಜಾತ್ರೆ ಬಹುಸಂಖ್ಯಾತ ಶೋಷಿತರು ಹಾಗೂ ಹಿಂದುಳಿದವರು ಆಚರಿಸುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ. ಇದನ್ನು ಹತ್ತಿಕ್ಕುವುದಕ್ಕೆ ಅವಕಾಶ ಕೊಡಲಾಗದು. ಜಾತ್ರೆಯಲ್ಲಿ ಪಂಕ್ತಿ ಭೋಜನಕ್ಕಾಗಿ ಪ್ರಾಣಿ ವಧೆ ಮಾಡಲಾಗುತ್ತಿದೆ. ಇದು ಪ್ರಾಣಿ ಬಲಿಯಲ್ಲ. ಹಾಗಾಗಿ ಜಾತ್ರೆಯಲ್ಲಿ ಮಾಂಸಾಹಾರ ಪದ್ಧತಿಗೆ ಅವಕಾಶ ಕಲ್ಪಿಸಬೇಕು ಎಂದು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

    ಪ್ರಾಣಿಬಲಿ ನಿಷೇಧ ಆದೇಶವನ್ನು ಪಾಲಿಸಲು ನಾವು ಬದ್ಧರಿದ್ದೇವೆ. ಆದರೆ ಜಾತ್ರೆಗೆ ಪ್ರಾಣಿ ಸಾಗಣೆ ಮಾಡುವುದನ್ನು ತಡೆಯುವುದು, ದೂರದ ಜಾಗದಲ್ಲಿ ಮಾಂಸಾಹಾರ ಸೇವಿಸುವುದಕ್ಕೆ ತಡೆ ನೀಡುವುದು ಸರಿಯಲ್ಲ. ಬೇಕಿದ್ದರೆ ಜಿಲ್ಲಾಡಳಿತವೇ ಪ್ರತ್ಯೇಕವಾಗಿ 50ಕಡೆ ಶಾಮಿಯಾನ ಹಾಕಿಸಿ ಪ್ರಾಣಿವಧೆಗೆ ಅವಕಾಶ ನೀಡಲಿ. ಬಕ್ರೀದ್ ಹಬ್ಬಕ್ಕೆ ಪ್ರಾಣಿವಧೆಗೆ ನೀಡುವ ಅವಕಾಶವನ್ನು ಇಲ್ಲಿಗೂ ನೀಡುವಂತಾಗಲಿ ಎಂದು ಆಗ್ರಹಿಸಿದರು.

    ಶಾಸಕ ಆರ್.ನರೇಂದ್ರ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಚಿಕ್ಕಲ್ಲೂರಿನಲ್ಲಿ ಬಲಿಪೀಠವೇ ಇಲ್ಲ ಅಂದಮೇಲೆ ಪ್ರಾಣಿ ಬಲಿ ನೀಡಲಾಗುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಇಲ್ಲಿ ನಡೆಯುವುದು ಜಾತ್ಯತೀತ ಸಹ ಪಂಕ್ತಿ ಭೋಜನ ಸೇವೆ. ಇದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

    ನಿರ್ಣಯಗಳು: ಪ್ರಾಣಿವಧೆಗೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ 3ನಿರ್ಣಯಗಳನ್ನು ಈ ವೇಳೆ ಕೈಗೊಳ್ಳಲಾಯಿತು. ಜಾತ್ರೆಯಲ್ಲಿ ಮಾಂಸಾಹಾರ ಸಂಸ್ಕೃತಿ ಪ್ರತಿಯೊಬ್ಬರ ಹಕ್ಕು. ಅದಕ್ಕೆ ಅಡ್ಡಿಪಡಿಸುವುದು ಬೇಡ. ಪರಂಪರಾಗತವಾಗಿ ಬಂದಿರುವ ಆಹಾರ ಪದ್ಧತಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂಬ ನಿರ್ಣಯಗಳನ್ನು ಕೈಗೊಂಡು ಸೋಮವಾರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.

    ಕವಿ ಪ್ರೊ.ಎಚ್.ಗೋವಿಂದಯ್ಯ ವಿಷಯ ಮಂಡಿಸಿದರು. ಸಾಹಿತಿ ಡಾ.ವೆಂಕಟೇಶ್ ಇಂದ್ವಾಡಿ, ಜಿಪಂ ಸದಸ್ಯ ಎಲ್.ನಾಗರಾಜು(ಕಮಲ್), ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ದಲಿತ ಬರಹಗಾರರ ಬಳಗದ ಅಧ್ಯಕ್ಷ ಮುಳ್ಳೂರು ಶಿವಮಲ್ಲು, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ, ಅರಕಲವಾಡಿ ನಾಗೇಂದ್ರ ಮಾತನಾಡಿದರು. ಮಂಟೇಸ್ವಾಮಿ ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಂ.ಮಹದೇವಪ್ರಸಾದ್, ತಿಮ್ಮರಾಜಿಪುರದ ಪುಟ್ಟಣ್ಣ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts