More

    ಕರಾವಳಿ ರಕ್ಷಣೆಗೆ ಹಸಿರು ಹೊದಿಕೆ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಪರಿಸರ ಇಲಾಖೆ ಸಿದ್ಧಪಡಿಸಿದ ಸಮಗ್ರ ಕರಾವಳಿ ವಲಯ ನಿರ್ವಹಣೆ ಯೋಜನೆ (ಐಸಿಝಡ್‌ಎಂಪಿ) ಪ್ರಾಥಮಿಕ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
    ಸುಸ್ಥಿರ ಕರಾವಳಿ ನಿರ್ವಹಣೆ ಕೇಂದ್ರ (ಸೆಂಟರ್ ಫಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್) ಯೋಜನೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುತ್ತಿದೆ. ಮುಂದಿನ ಮಳೆಗಾಲ ಸಂದರ್ಭ ಯೋಜನೆಗೆ ಚಾಲನೆ ಒದಗಿಸಿ ಹಾಗೂ ನಾಲ್ಕರಿಂದ ಐದು ವರ್ಷದೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

    ಪರಿಸರ ಇಲಾಖೆಯು ಕ್ಷೇತ್ರ ಅಧ್ಯಯನ ನಡೆಸಿ ಅನುಷ್ಠಾನ ಸಂಸ್ಥೆ ಅರಣ್ಯ ಇಲಾಖೆ ಹಾಗೂ ಕರಾವಳಿಯ ಜನರೊಂದಿಗೆ ಸಮಾಲೋಚನೆ ನಡೆಸಿ ಪ್ರಥಮ ಹಂತದಲ್ಲಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 10 ಪ್ರದೇಶಗಳಲ್ಲಿ ಮಾದರಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

    ಏನಿದು ಯೋಜನೆ?: ಕಡಲಿನಿಂದ ಬೀಸುವ ಗಾಳಿ ಜತೆ ಸಾಗುವ ಉಪ್ಪು ನೀರಿನ ಹನಿ ಕಡಲ ತೀರದ ಕೃಷಿ ಭೂಮಿಯನ್ನೇ ಹಾಳು ಮಾಡುತ್ತಿದೆ. ಜತೆಗೆ ಕಡಲ್ಕೊರೆತ ತಡೆಯೂ ತೀರದ ಜನರಿಗೆ ಪ್ರತೀ ಮಳೆಗಾಲದ ಸವಾವಾಗಿ ಪರಿಣಮಿಸಿದೆ.
    ಈ ಸಮಸ್ಯೆಗಳಿಗೆ ಸಮುದ್ರ ತೀರದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಬಳ್ಳಿ, ಕುರುಚಲು ಗಿಡ ಮತ್ತು ಮರಗಳನ್ನು ಏರುಗತಿಯಲ್ಲಿ (ಅಂದರೆ ಸಮುದ್ರ ತೀರದಿಂದ ಮೊದಲು ಬಳ್ಳಿ, ಬಳಿಕ ಒಂದಿಷ್ಟು ಎತ್ತರದ ಕುರುಚಲು ಗಿಡ, ಹಾಗೆಯೇ ಏರುಮುಖವಾಗಿ ಭೂಮಿ ಕಡೆ ಸಾಗುವ ರೀತಿಯ ಹಸಿರು) ಬೆಳೆಸುವ ಮೂಲಕ ಕಡಲ ತೀರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಸಿರು ವಲಯ ನಿರ್ಮಾಣ ಈ ಯೋಜನೆ ಗುರಿ. ಅದು ಸಾಧ್ಯವಾದರೆ ಚಂಡ ಮಾರುತದ ಪ್ರಭಾವ ತಗ್ಗಿಸಲು ಕೂಡ ನೆರವಾಗುತ್ತದೆ. ಕುಂದಾಪುರ ಗೋಪಾಡಿ ಬೀಜಾಡಿ ಮತ್ತು ಸುರತ್ಕಲ್ ಲೈಟ್‌ಹೌಸ್‌ನಲ್ಲಿ ಇಂತಹ ನೈಸರ್ಗಿಕ ಸುರಕ್ಷಾ ಕವಚಗಳನ್ನು ಈಗಾಗಲೇ ಕಾಣಬಹುದಾಗಿದೆ.
    ಹಸಿರು ವಲಯಕ್ಕೆ ಅಗತ್ಯ ಸಿಹಿ ನೀರಿನ ವ್ಯವಸ್ಥೆ ಹಾಗೂ ಹೊಸ ಹಸಿರು ವಲಯ ನಿರ್ಮಾಣ ಬಳಿಕದ ಖಾಸಗಿ ಜಮೀನಿನಲ್ಲಿ ದೀರ್ಘಾವಧಿ ಅವಧಿಯ ಮರಗಳನ್ನು ಬೆಳೆಸುವ ಜನರಿಗೆ ಪ್ರೋತ್ಸಾಹಧನ ನೀಡುವುದು ಕೂಡಾ ಯೋಜನೆಯಲ್ಲಿ ಒಳಗೊಂಡಿದೆ.

    ಅಭಿವೃದ್ಧಿ ಮಾದರಿ ಎಲ್ಲೆಲ್ಲಿ?: ದಕ್ಷಿಣಕನ್ನಡ ಜಿಲ್ಲೆಯ ತಣ್ಣೀರುಬಾವಿ, ಇಡ್ಯಾ, ಉಡುಪಿ ಜಿಲ್ಲೆಯ ಕೋಡಿಕನ್ಯಾನ, ಶಿರೂರು, ಗಂಗೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಕಗ್ಗಾಲ, ಧಾರೇಶ್ವರ, ಮಾಚಾಳಿ, ಹರ್ವಾಡ ಮತ್ತು ಬೇಲಿಕೇರಿ ಕರಾವಳಿ ತೀರಗಳಲ್ಲಿ ಪ್ರಥಮ ಹಂತದಲ್ಲಿ ಅಭಿವೃದ್ಧಿ ಮಾದರಿಗಳ ನಿರ್ಮಾಣ ನಡೆಯಲಿದೆ. ಈಗಾಗಲೇ ಅನುಷ್ಠಾನಗೊಂಡ ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ದೊರೆತ ಯಶಸ್ಸಿನಿಂದ ಪ್ರೇರಣೆಗೊಂಡ ಕೇಂದ್ರ ಸರ್ಕಾರ ದ್ವಿತೀಯ ಹಂತದಲ್ಲಿ ಇತರ ಹಲವು ರಾಜ್ಯಗಳಿಗೆ ಯೋಜನೆ ವಿಸ್ತರಿಸಿದ್ದು, ಇದರಲ್ಲಿ ಕರ್ನಾಟಕವೂ ಒಂದು. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಯೋಜನೆ ಕಾರ್ಯಗತಗೊಳ್ಳುತ್ತಿದೆ.

    ಸಮಗ್ರ ಕರಾವಳಿ ವಲಯ ನಿರ್ವಹಣೆ ಯೋಜನೆ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು, ಪ್ರಥಮ ಹಂತದಲ್ಲಿ ಕರಾವಳಿಯ 10 ಪ್ರದೇಶಗಳಲ್ಲಿ ಅಭಿವೃದ್ಧಿ ಮಾದರಿಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ. ನಿಸರ್ಗ ತತ್ವದಡಿಯಲ್ಲೇ ಕಡಲ್ಕೊರೆತ ತಡೆ, ಕರಾವಳಿ ಪ್ರದೇಶದ ಜನರ ಹಾಗೂ ಕೃಷಿ ಜಮೀನಿನ ರಕ್ಷಣೆ ಯೋಜನೆಯಿಂದ ಸಾಧ್ಯವಾಗಲಿದೆ.
    – ಡಾ.ದಿನೇಶ್ ಕುಮಾರ್
    ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts