More

    ಆಂಬುಲೆನ್ಸ್ ಚಾಲಕರು ಮಾಫಿಯಾ ಕೈಜೋಡಿಸದಿರಲಿ: ಡಿಸಿಎಂ ಡಿ.ಕೆ.ಶಿ ತಾಕೀತು

    ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ‘108- ಆರೋಗ್ಯ ಕವಚ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್‌ಗಳ ಚಾಲಕರು ಖಾಸಗಿ ಆಸ್ಪತ್ರೆ ಹಾಗೂ ಮಾಫಿಯಾಗಳ ಜತೆಗೆ ಕೈಜೋಡಿಸುವುದನ್ನು ತಡೆಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಾಕೀತು ಮಾಡಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬೆಂಗಳೂರು ಹಾಗೂ ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್’ ಉದ್ಘಾಟಿಸಿ ಮಾತನಾಡಿದರು.

    ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ಚಾಲಕರ ನಡೆ- ನುಡಿ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಅವರು ಖಾಸಗಿ ಆಸ್ಪತ್ರೆಗಳು ಹಾಗೂ ಮಾಫಿಯಾ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

    ತುರ್ತು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ರೋಗಿಗಳನ್ನು ಬೆಂಗಳೂರಿಗೆ ಕರೆತರುವಷ್ಟರಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ತಾಲೂಕು ಮಟ್ಟದಲ್ಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ಒದಗಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ತಾಲೂಕು ಮಟ್ಟದಲ್ಲಿ 5-10 ಐಸಿಯು ಬೆಡ್‌ಗಳ ಘಟಕ ಸ್ಥಾಪಿಸಿ, ರೋಗಿಗಳು ಹಾಗೂ ಗಾಯಾಳುಗಳನ್ನು ದಾಖಲಿಸಿಕೊಂಡು ‘ಟೆಲಿ ಐಸಿಯು ಕ್ಲಸ್ಟರ್’ ಮೂಲಕ ಮಾರ್ಗದರ್ಶನ ಪಡೆಯುವ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

    ಟೆಲಿ ಐಸಿಯು ವ್ಯವಸ್ಥೆ ವಿಸ್ತರಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಪಡೆಯಲು ದೂರದ ಜಿಲ್ಲೆಗಳಿಗೆ ತೆರಳುವುದು ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಅವರಿಗೆ ಸ್ಥಳೀಯವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಉದ್ದೇಶದೊಂದಿಗೆ‘ ಟೆಲಿ ಐಸಿಯು’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸುವುದಾಗಿ ಹೇಳಿದರು.

    ಬೆಂಗಳೂರು ಹಾಗೂ ಬಳ್ಳಾರಿ ಕ್ಲಸ್ಟರ್‌ಗೆ ತಲಾ 9 ತಾಲೂಕು ಆಸ್ಪತ್ರೆಗಳನ್ನು ಜೋಡಿಸಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ 10 ಹಾಗೂ ಮೈಸೂರು ವೈದ್ಯಕೀಯ ಸಂಸ್ಥೆಗೆ 13 ತಾಲೂಕು ಆಸ್ಪತ್ರೆಗಳನ್ನ ಜೋಡಣೆ ಮಾಡಲಾಗಿದೆ. ಮುಂದಿನ ವರ್ಷ 60 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

    41 ಆಸ್ಪತ್ರೆಗಳಲ್ಲಿ ಸೇವೆ: ಟೆಲಿ ಐಸಿಯು ಸೇವೆಯನ್ನು ಈಗಾಗಲೇ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಜಾರಿಗೆ ತರಲಾಗಿದ್ದು, ಈಗ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಲಾಗಿದೆ. ಒಟ್ಟು ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಹಬ್‌ಗಳಾಗಿ ರಚಿಸಲಾಗಿದ್ದು, ಇವುಗಳಿಗೆ 41 ತಾಲೂಕು ಆಸ್ಪತ್ರೆಗಳನ್ನು ಜೋಡಣೆ ಮಾಡಲಾಗಿದೆ. ಈ ಆಸ್ಪತ್ರೆಗಳಲ್ಲಿ 10 ಟೆಲಿ ಐಸಿಯು ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ತಜ್ಞ ವೈದ್ಯರ ಸಲಹೆ ಪಡೆದು ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ. ಕೆ. ರಮೇಶ್‌ಕೃಷ್ಣ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಇಲಾಖೆ ಆಯುಕ್ತ ಡಿ. ರಂದೀಪ್ ಇತರರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts