More

    ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಮೊದಲ ಎದುರಾಳಿ ಯಾರು ಗೊತ್ತಾ?

    ಕ್ರೈಸ್ಟ್‌ಚರ್ಚ್: ಕರೊನಾ ವೈರಸ್ ಹಾವಳಿಯಿಂದಾಗಿ 2021ರಿಂದ 2022ಕ್ಕೆ ಮುಂದೂಡಿಕೆಯಾಗಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. 2022ರ ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ನ್ಯೂಜಿಲೆಂಡ್‌ನ 6 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಹಾಲಿ ರನ್ನರ್‌ಅಪ್ ಭಾರತ ತಂಡ 2022ರ ಮಾರ್ಚ್ 6ರಂದು ಅರ್ಹತಾ ತಂಡವೊಂದರ ವಿರುದ್ಧ ಸೆಣಸುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

    8 ತಂಡಗಳ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್‌ಗೇರಲಿವೆ. ಮಾರ್ಚ್ 4ರಂದು ಆತಿಥೇಯ ನ್ಯೂಜಿಲೆಂಡ್ ಮತ್ತು ಅರ್ಹತಾ ತಂಡಗಳ ನಡುವೆ ಟೌರಂಗದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಭಾರತ ತಂಡ ಮಾರ್ಚ್ 16ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2017ರ ಆವೃತ್ತಿಯಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ಗೆ ಮಣಿದಿತ್ತು.

    ಮೂಲ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯು 2021ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ಕರೊನಾ ಹಾವಳಿಯಿಂದಾಗಿ ಟೂರ್ನಿ ಒಂದು ವರ್ಷದ ಮಟ್ಟಿಗೆ ಮುಂದೂಡಿಕೆಯಾಗಿದ್ದು, ನ್ಯೂಜಿಲೆಂಡ್‌ನಲ್ಲೇ ಮರುನಿಗದಿಯಾಗಿದೆ. ಇದು ಈ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಮಹಿಳಾ ಕ್ರಿಕೆಟ್‌ನಲ್ಲಿ ನಡೆಯಲಿರುವ ಮೊದಲ ಐಸಿಸಿ ಟೂರ್ನಿಯಾಗಿರುತ್ತದೆ.

    ಭಾರತ, ಆತಿಥೇಯ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೆ ಟೂರ್ನಿಗೆ ಅರ್ಹತೆ ಪಡೆದಿದ್ದು, ಉಳಿದ 3 ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆಯಲಿವೆ. ಮುಂದಿನ ವರ್ಷ ಜೂನ್ 26ರಿಂದ ಜುಲೈ 10ರವರೆಗೆ ಶ್ರೀಲಂಕಾದಲ್ಲಿ ಅರ್ಹತಾ ಟೂರ್ನಿ ನಡೆಯಲಿದೆ.

    ಭಾರತದ ಪಂದ್ಯಗಳು:
    ದಿನಾಂಕ: ಎದುರಾಳಿ (ಸ್ಥಳ)
    2022, ಮಾರ್ಚ್ 6: ಅರ್ಹತಾ ತಂಡ (ಟೌರಂಗ)
    2022, ಮಾರ್ಚ್ 10: ನ್ಯೂಜಿಲೆಂಡ್ (ಹ್ಯಾಮಿಲ್ಟನ್
    2022, ಮಾರ್ಚ್ 12: ಅರ್ಹತಾ ತಂಡ (ಹ್ಯಾಮಿಲ್ಟನ್)
    2022, ಮಾರ್ಚ್ 16: ಇಂಗ್ಲೆಂಡ್ (ಟೌರಂಗ)
    2022, ಮಾರ್ಚ್ 19: ಆಸ್ಟ್ರೇಲಿಯಾ (ಆಕ್ಲೆಂಡ್)
    2022, ಮಾರ್ಚ್ 22: ಅರ್ಹತಾ ತಂಡ (ಹ್ಯಾಮಿಲ್ಟನ್)
    2022, ಮಾರ್ಚ್ 27: ದಕ್ಷಿಣ ಆಫ್ರಿಕಾ (ಕ್ರೈಸ್ಟ್‌ಚರ್ಚ್)

    ಮಹಿಳೆಯರ ಏಕದಿನ ವಿಶ್ವಕಪ್
    *ದಿನಾಂಕ: 2022, ಮಾರ್ಚ್ 4-ಏಪ್ರಿಲ್ 3.
    *ತಂಡಗಳು: 8
    *ಪಂದ್ಯಗಳು: 31
    *ಎಲ್ಲಿ: ನ್ಯೂಜಿಲೆಂಡ್ (ಆಕ್ಲೆಂಡ್, ಹ್ಯಾಮಿಲ್ಟನ್, ಟೌರಂಗ, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ಡುನೆಡಿನ್).

    ಕ್ರೈಸ್ಟ್‌ಚರ್ಚ್‌ನಲ್ಲಿ ಫೈನಲ್
    ಟೂರ್ನಿಯ ಫೈನಲ್ ಪಂದ್ಯ 2022ರ ಏಪ್ರಿಲ್ 3ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ ಟೂರ್ನಿ ಒಂದು ಸೆಮಿಫೈನಲ್ (ಮಾರ್ಚ್ 31) ಪಂದ್ಯವೂ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯ ಮಾರ್ಚ್ 30ರಂದು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆಯಲಿದೆ.

    28 ಕೋಟಿ ರೂ. ಬಹುಮಾನ
    ಟೂರ್ನಿಯ ಒಟ್ಟು ಬಹುಮಾನ ಮೊತ್ತ 28.62 ಕೋಟಿ ರೂಪಾಯಿ (5.5 ದಶಲಕ್ಷ ನ್ಯೂಜಿಲೆಂಡ್ ಡಾಲರ್) ಆಗಿದ್ದು, ಇದು 2017ರ ಕಳೆದ ಆವೃತ್ತಿಗಿಂತ ಶೇ. 60 ಅಧಿಕವಾಗಿರುತ್ತದೆ. 2013ರ ಆವೃತ್ತಿಗೆ ಹೋಲಿಸಿದರೆ ಸಾವಿರ ಶೇಕಡದಷ್ಟು ಅಧಿಕವಾಗಿದೆ. ಟೂರ್ನಿಯ ಎಲ್ಲ ಪಂದ್ಯಗಳು ವಿಶ್ವದೆಲ್ಲೆಡೆ ನೇರಪ್ರಸಾರ ಕಾಣಲಿವೆ.

    *ನಾವು ಅತ್ಯಂತ ಕಠಿಣವಾದ ವರ್ಷವನ್ನು ಕಳೆದಿದ್ದೇವೆ. ನಾವು ಪ್ರೀತಿಸುವ ಆಟವನ್ನು ಮತ್ತೆ ಆಡುವ ಅವಕಾಶ ಲಭಿಸುತ್ತಿರುವುದಕ್ಕೆ ಖುಷಿಯಾಗಿದೆ. ಕಳೆದ 3-4 ವರ್ಷಗಳಲ್ಲಿ ನಡೆದ ಎಲ್ಲ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಉತ್ತಮ ನಿರ್ವಹಣೆ ತೋರಿದೆ. 2022ರ ವಿಶ್ವಕಪ್ ಗೆದ್ದುಕೊಳ್ಳುವಲ್ಲಿ ನಾವು ಯಶಸ್ವಿಯಾದರೆ, ಮುಂದಿನ ತಲೆಮಾರಿನ ಬಾಲಕಿರಿಗೆ ದೊಡ್ಡ ಸ್ಫೂರ್ತಿಯಾಗಿರಲಿದೆ.
    ಮಿಥಾಲಿ ರಾಜ್, ಭಾರತ ಏಕದಿನ ತಂಡದ ನಾಯಕಿ

    ಕ್ರಿಕೆಟ್‌ಗೆ ಮರಳಲು ಸಜ್ಜಾದ ಯುವರಾಜ್, ಶ್ರೀಶಾಂತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts