More

    ಚಳವಳಿ, ರಾಜಕೀಯ ನಿಭಾಯಿಸಿಕೊಂಡು ಹೋಗುವೆ

    ಪಾಂಡವಪುರ: ರೈತ ಸಂಘಟನೆ, ಚಳವಳಿ ಮತ್ತು ರಾಜಕೀಯ ಎಲ್ಲವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಹೇಗೆ? ಎಂಬ ಗೊಂದಲದಲ್ಲಿ ಇದ್ದೇನೆ. ಮುಂದೆ ಎಲ್ಲವನ್ನು ನಿಭಾಯಿಸಕೊಂಡು ಹೋಗುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

    ತಾಲೂಕಿನ ಕ್ಯಾತನಹಳ್ಳಿಯ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ರೈತ ಸಂಘ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ರೈತ ಸಂಘ ಕಟ್ಟಿ ಬೆಳೆಸಿದ ಈ ಹಿಂದಿನ ನಾಯಕರು ರಾಜಕಾರಣಿಗಳನ್ನು ಓಲೈಸದೆ ಹೇಗೆ ನಡೆದುಕೊಂಡರು ಎಂಬುದರ ಅರಿವಿದೆ. ಅವರ ನಡೆ-ನುಡಿಯನ್ನು ನಾನು ಮೈಗೂಡಿಸಿಕೊಳ್ಳಬೇಕಿದೆ. ರಾಜ್ಯದಲ್ಲಿ ರೈತ ಸಂಘಟನೆಗೆ ಶಕ್ತಿ ತುಂಬುವ ಜತೆಗೆ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕಿದೆ. ಒಂದೊಂದು ಬಾರಿ ರಾಜಕೀಯ ಪಕ್ಷಗಳಿಗೆ ತುಂಬ ಹತ್ತಿರವಾಗುತ್ತಿದ್ದೇನೆ ಎಂಬ ಭಯ ಕಾಡುತ್ತಿದೆ. ಹಿಂದೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ದಾರಿ ತಪ್ಪಿದರೆ ರೈತ ಸಂಘ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿತ್ತು ಎಂದರು.

    ಹಿಂದೆ ಬರಗಾಲ ಐದು ವರ್ಷಕ್ಕೊಮ್ಮೆ ಬರುತ್ತಿತ್ತು. ಈಗ ಐದು ವರ್ಷಕ್ಕೊಮ್ಮೆ ಮಳೆ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರೀತ್ಯ ಎದುರಾಗುತ್ತಿದೆ. ಹವಾಮಾನಕ್ಕೆ ತಕ್ಕಂತೆ ರೈತರು ಬೆಳೆಗಳನ್ನು ಬೆಳೆಯಬೇಕು. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಾಗಿದೆ. ರೈತರು ವ್ಯವಸಾಯ ಪದ್ಧತಿ ಮತ್ತು ಬೆಳೆಯುವ ಬೆಳೆಯನ್ನು ರೂಪಾಂತರ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ರೈತಸಂಘ ಯಾವ ಧ್ಯೇಯೋದ್ದೇಶ ಅವಡಿಸಿಕೊಂಡಿದೆ ಅದೇ ರೀತಿ ತನ್ನ ನಿಲುವು ವ್ಯಕ್ತಪಡಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ರೈತ ಸಂಘ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ರೈತ ಸಂಘದ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಎಪಿಎಂಸಿ, ವಿದ್ಯುತ್, ಕಾರ್ಮಿಕ ಕಾಯ್ದೆಗಳನ್ನು ರೈತ ಸಂಘಟನೆಗಳು ವಿರೋಧಿಸದಿದ್ದರೆ ಇಂದು ಜಾರಿಯಾಗುತ್ತಿತ್ತು. ರೈತ ಸಂಘಟನೆ ಶಕ್ತಿ ಕುಂದಿಲ್ಲ. ಆದರೆ ರೈತರ ಸಂಘಟನೆಗೆ ಬಲ ತುಂಬುವ ಕೆಲಸ ಮಾಡುತ್ತಿಲ್ಲ. ಚಳವಳಿಗಳು ನಾವು ಸತ್ತ ನಂತರವೂ ಉಳಿಯಬೇಕು ಎಂದು ಹೇಳಿದರು.

    ನಾಲೆಗಳಿಗೆ ಒಂದು ಕಟ್ಟು ನೀರು ಹರಿಸಿದರೆ ರೈತರು ಬದುಕುತ್ತಾರೆ. ನಾಲೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಎಂದು ರೈತ ಸಂಘಟನೆಯ ಮುಖಂಡರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಒತ್ತಾಯಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

    ರೈತ ಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎಣ್ಣೆಹೊಳೆಕೊಪ್ಪಲು ಮಂಜು, ರಘು, ಮದ್ದೂರು ಅಧ್ಯಕ್ಷ ಪುಟ್ಟಸ್ವಾಮಿ, ಕೆ.ಆರ್.ಪೇಟೆಯ ರಾಜೇಗೌಡ, ಪುಟ್ಟೇಗೌಡ, ಮಂಡ್ಯ ಕೃಷ್ಣೇಗೌಡ. ಹರವು ಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts