More

    ನರ್ವಸ್ ಆಗಿದ್ದರೂ ಐಪಿಎಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ದೇವದತ್ ಪಡಿಕಲ್; ಗಂಗೂಲಿ ಮೆಚ್ಚುಗೆ

    ದುಬೈ: ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭರ್ಜರಿ ಎಂಟ್ರಿಕೊಟ್ಟಿದ್ದಾರೆ. ಆದರೆ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಹೆಸರು ಇರುವುದು ಖಚಿತಗೊಂಡಾಗ ಅವರು ಮೊದಲಿಗೆ ನರ್ವಸ್ ಆಗಿದ್ದರಂತೆ. 42 ಎಸೆತಗಳಲ್ಲಿ 56 ರನ್ ಸಿಡಿಸಿ ಆರ್‌ಸಿಬಿ ತಂಡದ ಗೆಲುವಿಗೆ ನೆರವಾದ ಬಳಿಕ ಅವರೇ ಇದನ್ನೂ ಹೇಳಿಕೊಂಡಿದ್ದಾರೆ.

    ‘ನಾನು ಐಪಿಎಲ್‌ಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿದಾಗ ಸಾಕಷ್ಟು ನರ್ವಸ್ ಆಗಿದ್ದೆ. ಆದರೆ ಕ್ರೀಸ್‌ಗೆ ಇಳಿದು ಕೆಲವು ಎಸೆತಗಳನ್ನು ಆಡಿದ ಬಳಿಕ ಸಂಪೂರ್ಣ ನಿರಾಳವಾದೆ’ ಎಂದು ಪಡಿಕಲ್ ಪಂದ್ಯದ ಬಳಿಕ ಯಜುವೇಂದ್ರ ಚಾಹಲ್ ಜತೆಗೆ ನಡೆಸಿದ ಮಾತುಕತೆಯ ವೇಳೆ ಹೇಳಿದ್ದಾರೆ.

    ಕೇರಳ ಮೂಲದ 20 ವರ್ಷದ ಎಡಗೈ ಬ್ಯಾಟ್ಸ್‌ಮನ್ ಪಡಿಕಲ್ ಅವರೀಗ ಪದಾರ್ಪಣೆಯ ಪಂದ್ಯದಲ್ಲಿ ಮಿಂಚುವ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಈ ಮುನ್ನ 2018ರಲ್ಲಿ ಮಹಾರಾಷ್ಟ್ರ ವಿರುದ್ಧ ಪ್ರಥಮ ದರ್ಜೆ, 2019ರಲ್ಲಿ ಜಾರ್ಖಂಡ್ ವಿರುದ್ಧ ಲಿಸ್ಟ್ ಎ ಹಾಗೂ ಉತ್ತರಾಖಂಡ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಅವರು ಈ 4 ಟೂರ್ನಿಗಳಲ್ಲಿ ಅರ್ಧಶತಕದ ಮೂಲಕ ಪದಾರ್ಪಣೆ ಮಾಡಿದ ಏಕಮಾತ್ರ ಆಟಗಾರರೂ ಆಗಿದ್ದಾರೆ.

    ಇದನ್ನೂ ಓದಿ: ಚಹಾಲ್​ ಕಮಾಲ್​: ಮಾರಕ ಬೌಲಿಂಗ್​ ದಾಳಿಗೆ ಹೈದರಾಬಾದ್​ ತತ್ತರ, ಆರ್​ಸಿಬಿ ಶುಭಾರಂಭ!​

    ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಕಲಿತುಕೊಂಡಿರುವೆ ಎಂದಿರುವ ಪಡಿಕಲ್, ‘ಕಳೆದ 1 ತಿಂಗಳಿನಿಂದ ನಾವು ಅಭ್ಯಾಸ ನಡೆಸುತ್ತಿದ್ದೇವೆ. ಈ ವೇಳೆ ವಿರಾಟ್ ಬೈಯ್ಯ ಅವರಿಂದ ಸಾಕಷ್ಟು ಕಲಿತಿರುವೆ. ಅವರ ಜತೆಗಿರುವ ಸಮಯದಲ್ಲೆಲ್ಲಾ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುತ್ತೇನೆ. ಇಂದು ಆರನ್ ಫಿಂಚ್ ಜತೆಗೆ ಆಡುತ್ತಿರುವಾಗಲೂ ಅವರು ನನ್ನ ಮೇಲೆ ಸಾಕಷ್ಟು ಆತ್ಮವಿಶ್ವಾಸವಿಟ್ಟಿದ್ದರು’ ಎಂದು ವಿವರಿಸಿದ್ದಾರೆ.

    ಕೇರಳದ ಎಡಪ್ಪಲ್‌ನಲ್ಲಿ ಜನಿಸಿದ ದೇವದತ್ ಪಡಿಕಲ್ 2014ರಿಂದ ಬೆಂಗಳೂರಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್​ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 16 ಮತ್ತು 19 ವಯೋಮಿತಿ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಅವರು, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ಬಳ್ಳಾರಿ ಟಸ್ಕರ್ಸ್‌ ತಂಡದ ಪರವಾಗಿಯೂ ಮಿಂಚಿದ್ದಾರೆ. 2018-19ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಪಡಿಕಲ್, 2019ರಲ್ಲೇ ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಅವರಿಗೆ ಒಂದೂ ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.

    2019-20ರ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಟೂರ್ನಿಯ 11 ಪಂದ್ಯಗಳಲ್ಲಿ 609 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿದ್ದರು. ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಕರ್ನಾಟಕ ಪರ ಪದಾರ್ಪಣೆ ಮಾಡಿ 12 ಇನಿಂಗ್ಸ್‌ಗಳಲ್ಲಿ 580 ರನ್ ಗಳಿಸಿ ಗಮನ ಸೆಳೆದಿದ್ದರು. ಈ ನಡುವೆ ಭಾರತದ 19 ವಯೋಮಿತಿ ತಂಡದ ಪರವಾಗಿಯೂ ಆಡಿದ್ದಾರೆ.

    ಪಡಿಕಲ್ ಆಟಕ್ಕೆ ಗಂಗೂಲಿ ಮೆಚ್ಚುಗೆ
    ತಮ್ಮಂತೆಯೇ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವಿಟರ್‌ನಲ್ಲಿ ದೇವದತ್ ಪಡಿಕಲ್‌ಗೆ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ. ‘ಆರ್‌ಸಿಬಿ ತಂಡದ ದೇವದತ್ ಪಡಿಕಲ್ ಆಟವನ್ನು ಆನಂದಿಸಿದೆ. ಎಡಗೈ ಆಟಗಾರನ ಆಟದ ಶೈಲಿ ಆನಂದಮಯವಾಗಿತ್ತು’ ಎಂದು ಗಂಗೂಲಿ ಟ್ವೀಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts