More

    ಹೆಡ್​ ಕೋಚ್​ ಆಗಿ ಒಪ್ಪಂದ ವಿಸ್ತರಣೆ: ನಾನಿನ್ನೂ ಸಹಿ ಮಾಡಿಲ್ಲ ಅಂದ್ರು ರಾಹುಲ್​ ದ್ರಾವಿಡ್​!

    ನವದೆಹಲಿ: ವಿಶ್ವಕಪ್ ಫೈನಲ್​ನಲ್ಲಿ ಭಾರತದ​ ಸೋಲಿನ ನಂತರವೂ ಬಿಸಿಸಿಐ ರಾಹುಲ್​ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಸಿದೆ. ತಂಡಕ್ಕೆ ಅವರು ನೀಡಿದ ಕೊಡುಗೆಗಳ ಆಧಾರದ ಮೇಲೆ ದ್ರಾವಿಡ್​ ಅವರ ಕೋಚ್​ ಒಪ್ಪಂದವನ್ನು ಮುಂದುವರಿಸಿದ್ದರೂ ಈವರೆಗೂ ಒಪ್ಪಂದದ ವಿಸ್ತರಣೆ ಕುರಿತಾದ ಪೇಪರ್​ ವರ್ಕ್​ಗೆ ಸಹಿ ಹಾಕಿಲ್ಲ ಎನ್ನುವ ಮೂಲಕ ದ್ರಾವಿಡ್, ಕ್ರೀಡಾಭಿಮಾನಿಗಳಿಗೆ ​ ಶಾಕ್​ ನೀಡಿದ್ದಾರೆ.

    ವಿಶ್ವಕಪ್ ಫೈನಲ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. ಅಂದಿನಿಂದ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಗುತ್ತದೆ ಎಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಈ ಹಿಂದೆ ಕೋಚ್​ ಆಗಿದ್ದ ರಾಹುಲ್​ ದ್ರಾವಿಡ್​ ಅವರೇ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಬುಧವಾರ (ನ.29) ಸ್ಪಷ್ಟನೆ ನೀಡಿದೆ. ಆದಾಗ್ಯೂ, ಬಿಸಿಸಿಐನ ಅಧಿಕೃತ ಪ್ರಕಟಣೆಯು ದ್ರಾವಿಡ್ ಮತ್ತು ಅವರ ಉಳಿದ ಸಿಬ್ಬಂದಿಯ ಒಪ್ಪಂದದ ನಿರ್ದಿಷ್ಟ ಅವಧಿಯನ್ನು ಬಹಿರಂಗಪಡಿಸಿಲ್ಲ.

    ಈ ಒಪ್ಪಂದದ ಬಗ್ಗೆ ದ್ರಾವಿಡ್​ ಅವರನ್ನು ಪ್ರಶ್ನೆ ಮಾಡಿದಾಗ, ಅಧಿಕೃತವಾಗಿ ಘೋಷಣೆಯಾಗಿದೆ. ಆದರೆ, ನಾನಿನ್ನೂ ಯಾವುದಕ್ಕೂ ಸಹಿ ಮಾಡಿಲ್ಲ. ಪತ್ರಗಳು ಬಿಸಿಸಿಐನಿಂದ ಅಧಿಕೃತವಾಗಿ ಬರಲಿ ಎಂದು ಹೇಳಿದರು.

    ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು ಟೀಮ್ ಇಂಡಿಯಾದೊಂದಿಗೆ ತಮ್ಮ ಕಾರ್ಯವನ್ನು ಮುಂದುವರಿಸಲಿದ್ದಾರೆ. ಏಕೆಂದರೆ, ಬಿಸಿಸಿಐ ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿಯ ಒಪ್ಪಂದವನ್ನು ಸಹ ವಿಸ್ತರಿಸಿದೆ.

    ಟೀಮ್ ಇಂಡಿಯಾದೊಂದಿಗೆ ದ್ರಾವಿಡ್ ಅವರ ಎರಡನೇ ಅವಧಿಯ ಒಪ್ಪಂದವು ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಆರಂಭವಾಗಲಿದೆ. ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಎರಡು ಟೆಸ್ಟ್‌ ಪಂದ್ಯಗಳು ಸಹ ನಡೆಯಲಿದ್ದು, ಡಿ. 26ರಿಂದ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದಾದ ಬಳಿಕ ಮುಂದಿನ ವರ್ಷ ಜೂನ್‌ ತಿಂಗಳಲ್ಲಿ ವೆಸ್ಟ್ ಇಂಡೀಸ್/ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

    ಒಪ್ಪಂದದ ವಿಸ್ತರಣೆಯ ಘೋಷಣೆಯ ನಂತರ ಮಾತನಾಡಿದ ದ್ರಾವಿಡ್, ಟೀಮ್ ಇಂಡಿಯಾದೊಂದಿಗೆ ಕಳೆದ ಎರಡು ವರ್ಷಗಳ ಪ್ರಯಾಣ ಸಂಪೂರ್ಣವಾಗಿ ಸ್ಮರಣೀಯವಾಗಿವೆ. ಸಾಕಷ್ಟು ಏರಿಳಿತಗಳಿಗೆ ಸಾಕ್ಷಿಯಾಗಿದ್ದೇವೆ. ಈ ಪ್ರಯಾಣದ ಉದ್ದಕ್ಕೂ ಎಲ್ಲರ ಬೆಂಬಲ ಮತ್ತು ಸೌಹಾರ್ದತೆ ಅಸಾಧಾರಣವಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ಸ್ಥಾಪಿಸಿದ ಸಂಸ್ಕೃತಿಯ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ಇದು ಗೆಲುವು ಅಥವಾ ಪ್ರತಿಕೂಲ ಕ್ಷಣಗಳಲ್ಲಿ ಚೇತರಿಸಿಕೊಳ್ಳುವ ಸಂಸ್ಕೃತಿಯಾಗಿದೆ. ನಮ್ಮ ತಂಡವು ಹೊಂದಿರುವ ಕೌಶಲ್ಯ ಮತ್ತು ಪ್ರತಿಭೆ ಅಸಾಧಾರಣವಾಗಿದೆ ಎಂದರು.

    ಈ ಅವಧಿಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನ ದೃಷ್ಟಿಕೋನವನ್ನು ಒಪ್ಪಿದ್ದಕ್ಕಾಗಿ ಮತ್ತು ಬೆಂಬಲ ಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದಗಳನ್ನು ಹೇಳುತ್ತೇನೆ. ಇದರ ಹಿಂದೆ ನನ್ನ ಕುಟುಂಬದ ತ್ಯಾಗ ಮತ್ತು ಬೆಂಬಲವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ವಿಶ್ವಕಪ್‌ನ ನಂತರ ನಾವು ಹೊಸ ಸವಾಲುಗಳನ್ನು ಸ್ವೀಕರಿಸುತ್ತಿದ್ದಂತೆ, ನಾವು ಶ್ರೇಷ್ಠತೆಯ ಅನ್ವೇಷಣೆಗೆ ಬದ್ಧರಾಗಿರುತ್ತೇವೆ ಎಂದು ದ್ರಾವಿಡ್​ ಹೇಳಿದರು. (ಏಜೆನ್ಸೀಸ್​)

    ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಯಲಿದ್ದಾರೆ ದ್ರಾವಿಡ್; ಬಿಸಿಸಿಐ ಮಹತ್ವದ ನಿರ್ಧಾರ

    ವ್ಯಾಪಾರ ಕ್ಷೇತ್ರದಲ್ಲಿ ದೆಹಲಿ, ಮುಂಬೈಯನ್ನು ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಭಾರತದ ಸಿಲಿಕಾನ್ ವ್ಯಾಲಿ ‘ಬೆಂಗಳೂರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts