More

    ಅಪ್ಪನನ್ನು ಭೇಟಿಯಾಗಿದ್ದು ಒಮ್ಮೆ ಮಾತ್ರ, ಅವರ ಮಾತಿನಂತೆ ಸಮಾಜಸೇವೆ ಮಾಡುವ ತುಡಿತ

    ಚೆನ್ನೈ: ಕಾಡುಗಳ್ಳ ವೀರಪ್ಪನ್​ ಎಂದ ಕೂಡಲೇ ದಪ್ಪ ಮೀಸೆಯುಳ್ಳ, ಮೊನಚಾದ, ಕ್ರೂರ ನೋಟ ಬೀರುವ ವ್ಯಕ್ತಿಯ ಮುಖ ನೆನಪಾಗುತ್ತದೆ. ಹಿಂದೊಮ್ಮೆ ಈತ ಪಶ್ಚಿಮ ಘಟ್ಟ ಕಾಡುಗಳನ್ನು ಅಕ್ಷರಶಃ ಆಳಿದವನು. ಅಲ್ಲಿದ್ದ ಗಂಧದ ಮರಗಳನ್ನು ಕಳ್ಳಸಾಗಣೆ ಮಾಡಿದ್ದಲ್ಲದೆ, ನೂರಾರು ಆನೆಗಳನ್ನು ಕೊಂದು ದಂತವನ್ನು ಕಳ್ಳಸಾಗಣೆ ಮಾಡಿದವನು ಈತ. ಅಷ್ಟೇ ಅಲ್ಲ, ಕನ್ನಡದ ವರನಟ ಡಾ. ರಾಜ್​ಕುಮಾರ್​ ಸೇರಿ ಹಲವರನ್ನು ಅಪಹರಿಸಿ, ಭಾರಿ ಮೊತ್ತದ ಒತ್ತೆಹಣ ಪಡೆದುಕೊಂಡು ವಣ್ಣಿಯಾರ್​ ಸಮುದಾಯದವರಿಗೆ ಅಗತ್ಯ ಸಹಾಯ ಮಾಡುತ್ತಾ ಅವರ ಪಾಲಿನ ರಾಬಿನ್​ಹುಡ್ ಎನಿಸಿಕೊಂಡಿದ್ದವನು. 2004ರಲ್ಲಿ ವಿಶೇಷ ಕಾರ್ಯಾಪಡೆಯಿಂದ ಹತನಾದ ಈತನ ಪುತ್ರಿ ಇದೀಗ ಬಿಜೆಪಿಯನ್ನು ಸೇರಿದ್ದು, ತಮಿಳುನಾಡು ಬಿಜೆಪಿಯ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.

    ಇದೀಗ 29 ವರ್ಷದವರಾಗಿರುವ ವೀರಪ್ಪನ್​ ಪುತ್ರಿ ವಿದ್ಯಾರಾಣಿ ಕಾನೂನು ಪದವೀಧರೆಯಾಗಿದ್ದಾರೆ. ತಮ್ಮ ತಾಯಿ ಮುತ್ತುಲಕ್ಷ್ಮಿ ಹಾಗೂ ತಮ್ಮ ಸಮುದಾಯದವರ ವಿರೋಧದ ನಡುವೆಯೂ 2011ರಲ್ಲಿ ಪ್ರೇಮವಿವಾಹ ಆಗಿರುವ ಇವರು ಕೃಷ್ಣಗಿರಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ​ ನಾನು ಯಾವುದೇ ನಿರ್ದಿಷ್ಟವಾದ ಸಮಯದಾಯಕ್ಕೆ ಸೇರಿದವಳಲ್ಲ. ನನಗೆ ಮಾನವೀಯತೆಯಲ್ಲಿ ಹೆಚ್ಚಿನ ನಂಬಿಕೆ ಇದೆ. ಹಾಗಾಗಿ ಜನಸೇವೆ ಮಾಡಲೆಂದು ರಾಜಕೀಯ ರಂಗ ಪ್ರವೇಶಿಸಿದ್ದೇನೆ. ಇದು ನನ್ನ ಅಪ್ಪನ ಆಶಯ ಕೂಡ ಆಗಿತ್ತು ಎಂದು ಹೇಳುತ್ತಾರೆ.

    ಇದನ್ನೂ ಓದಿ: ಕರೊನಾ ಗೆದ್ದು ಹಿಂದಿನಂತೆ ಆರೋಗ್ಯವಂತ ಜೀವನ ಸಾಗಿಸುವವರ ಪ್ರಮಾಣ ಕೇಳಿದರೆ ಹೌಹಾರುತ್ತೀರಿ!

    ನನಗಾಗ 6 ಅಥವಾ 7 ವರ್ಷ ವಯಸ್ಸಿರಬಹುದು. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಕರ್ನಾಟಕದ ಹನೂರು ಬಳಿಯ ಗೋಪಿನಾಥಂನಲ್ಲಿರುವ ನನ್ನ ಅಜ್ಜನ ಮನೆಗೆ ಹೋಗಿದ್ದೆ. ಅಲ್ಲಿಗೆ ಅಪ್ಪ ಬಂದಿದ್ದರು. ನಾನು ಮಕ್ಕಳೊಂದಿಗೆ ಆಟವಾಡುತ್ತಿದ್ದ ಸ್ಥಳಕ್ಕೆ ಬಂದ ಅವರು ನನ್ನೊಂದಿಗೆ ಐದಾರು ನಿಮಿಷ ಮಾತನಾಡಿದರು. ಚೆನ್ನಾಗಿ ಓದು. ಎಲ್ಲರಿಗೂ ಒಳ್ಳೆಯದನ್ನು ಮಾಡು. ವೈದ್ಯೆಯಾಗಿ ಜನರ ಸೇವೆ ಮಾಡು ಎಂದು ಹಾರೈಸಿದ್ದರು. ಇದಿಷ್ಟೇ ನನ್ನ ಅಪ್ಪನೊಂದಿಗಿನ ಒಡನಾಟದ ನೆನಪು ಎಂದು ತಿಳಿಸುತ್ತಾರೆ.

    ನನಗೆ ಬುದ್ಧಿ ತಿಳಿಯುವಷ್ಟರಲ್ಲಿ ಅವರು ಇಲ್ಲವಾಗಿದ್ದರು. ಅವರ ಸುತ್ತಲು ಅಂದು ಇದ್ದ ವಾತಾವರಣದಿಂದಾಗಿ ಅವರು ಇಂಥ ಸಮಸ್ಯಾತ್ಮಕ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಿರಬೇಕು. ಆದರೆ, ಅವರ ಬಗ್ಗೆ ಕೇಳಿಕ ಹಲವು ಕಥೆಗಳು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲು ನನಗೆ ಪ್ರೇರಣೆ ಒದಗಿಸಿವೆ. ಅದಕ್ಕೆಂದೇ ನಾನು ರಾಜಕೀಯ ರಂಗವನ್ನು ಪ್ರವೇಶಿಸಿದ್ದೇನೆ ಎಂದು ಹೇಳುತ್ತಾರೆ.

    ಕೇಂದ್ರ ಸಚಿವ ಪೊನ್​ ರಾಧಾಕೃಷ್ಣನ್​ ಅವರ ಸಲಹೆ ಮೇರೆಗೆ ವಿದ್ಯಾರಾಣಿ 2020ರ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರೂ, ರಾಜಕೀಯ ರಂಗ ನನಗೆ ಹೊಸತು. ಇದರ ಒಳಪಟ್ಟುಗಳನ್ನು ಶೀಘ್ರದಲ್ಲೇ ಗ್ರಹಿಸಿ, ಈ ರಂಗದಲ್ಲಿ ಮುಂದುವರಿಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

    ಕರೊನಾ ಗೆದ್ದು ಹಿಂದಿನಂತೆ ಆರೋಗ್ಯವಂತ ಜೀವನ ಸಾಗಿಸುವವರ ಪ್ರಮಾಣ ಕೇಳಿದರೆ ಹೌಹಾರುತ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts