More

    ಹಂದಿ-ನಾಯಿಗಳ ಹಾವಳಿ ತಪ್ಪಿಸಲು ಹೂವಿನಹಡಗಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

    ಹೂವಿನಹಡಗಲಿ: ಇಲ್ಲಿನ ಪುರಸಭೆ ಎಂ.ಪಿ.ಪ್ರಕಾಶ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಹಂದಿ ಮತ್ತು ಬೀದಿನಾಯಿಗಳಿಂದ ಪಟ್ಟಣದಲ್ಲಿ ಸೃಷ್ಟಿಯಾಗಿರುವ ಕಿರಿಕಿರಿ ಕುರಿತು ಚರ್ಚೆ ನಡೆಯಿತು.

    ಪಟ್ಟಣದಲ್ಲಿ ಹಂದಿಗಳ ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅರುಣಿ ಮಹಮ್ಮದ್ ರಫಿ ಮತ್ತು ಮಂಜುನಾಥ ಜೈನ್ ಹೇಳಿದರು. ಪುರಸಭೆ ಮೂಲಕ ಇವುಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಮಾತನಾಡಿ, ಈಗಾಗಲೇ ಹಂದಿಗಳ ಮಾಲಿಕರಿಗೆ ಸೂಚನೆ ಕೊಟ್ಟಿದ್ದೇವೆ. ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಪಟ್ಟಣದ ಕಾಯಕನಗರ ಹದಿನೈದು ವರ್ಷಗಳಿಂದಲೂ ಪುರಸಭೆ ವ್ಯಾಪ್ತಿಗೆ ಬಂದಿಲ್ಲ. ಹೀಗಾಗಿ ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ ಎಂದು ಐಗೋಳ ಸುರೇಶ ಸಭೆ ಗಮನಕ್ಕೆ ತಂದರು. ಬಸ್ ನಿಲ್ದಾಣದಿಂದ ಸೋಗಿ ರಸ್ತೆವರೆಗೆ ಒಳಚರಂಡಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಕೂಡಲೇ ದುರಸ್ತಿ ಮಾಡಿಸಬೇಕು. ನೀರು ಗಂಟಿಗಳು ಸದಸ್ಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಯಾವಾಗಲೂ ಮೊಬೈಲ್ ಸ್ವಿಚ್ ಆಪ್ ಮಾಡಿರುತ್ತಾರೆ ಎಂದು ಸೊಪ್ಪಿನ ಮಂಜುನಾಥ ಸಭೆಗೆ ತಿಳಿಸಿದರು. ಮುಖ್ಯಾಧಿಕಾರಿ ಎಚ್.ಇಮಾಮ್ ಸಾಹೇಬ್ ಮಾತನಾಡಿ, ನೀರು ಗಂಟಿಯವರಿಗೆ ಸಾರ್ವಜನಿಕರು ಮತ್ತು ಸದಸ್ಯರ ಸೂಚನೆಗಳನ್ನು ಪಾಲಿಸಬೇಕೆಂದು ಹೇಳುವುದಾಗಿ ತಿಳಿಸಿದರು.

    ಪಟ್ಟಣದಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರ ಬಗ್ಗೆ ವದಂತಿಗಳು ಹಬ್ಬಿವೆ. ಪಾಲಕರು ಆತಂಕಕ್ಕೀಡಾಗಿದ್ದಾರೆ. ಪುರಸಭೆ ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಹೇಳಿದರು. ಪಟ್ಟಣದಲ್ಲಿ ಪಾದಾಚಾರಿಗಳು ಓಡಾಡುವ ಸ್ಥಳದಲ್ಲಿ ಬೀದಿವ್ಯಾಪಾರಿಗಳು ಶಾಶ್ವತ ಟೆಂಟ್‌ಗಳ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಅವರ ವ್ಯಾಪಾರ ಮುಗಿದ ಮೇಲೆ ಮತ್ತೊಬ್ಬರಿಗೆ ಬಾಡಿಗೆ ನೀಡಿ, ಅದರಿಂದಲೂ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಪಾದಚಾರಿಳಿಗೆ ಹಿಂಸೆಯಗುತ್ತಿದೆ ಎಂದು ಹಲವು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು.

    ಪುರಸಭೆ ಕಚೇರಿಗೆ ಲೋಡರ್ಸ್, ಡ್ರೈವರ್ಸ್‌, ಸಿಡಬ್ಲುೃಸಿಸಿ ಆಪರೇಟರ್, ಸೂಪರ್ ವೈಜರ್‌ಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ಸರಬರಾಜು ಮಾಡಲು ಟೆಂಡರ್‌ದಾರರಿಗೆ ದರ ಸಂಧಾನಕ್ಕಾಗಿ ಆಹ್ವಾನಿಸಲು ಅನುಮೋದನೆ ದೊರೆಯಿತು. ಹರಪನಹಳ್ಳಿ ರಸ್ತೆಯಲ್ಲಿರುವ ಹಳೆಯ ತಹಸೀಲ್ ಕಚೇರಿಗೆ ಪುರಸಭೆ ಕಚೇರಿ ಸ್ಥಳಾಂತರ ಮಾಡಲು ಡಿಸಿಗೆ ಪ್ರಸ್ತಾವನೆ ಕಳಿಸಲು ತೀರ್ಮಾನ ಕೈಗೊಳ್ಳಲಾಯಿತು.

    ಉಪಾಧ್ಯಕ್ಷ ತಿಮ್ಮಣ್ಣ, ಹಿರಿಯ ಆರೋಗ್ಯ ನಿರೀಕ್ಷಕ ಮಾರುತಿ ಕೆ., ಕಂದಾಯ ಅಧೀಕಾರಿ ಸಂತೋಷ್ ಕುಮಾರ್, ಕಿರಿಯ ಅಭಿಯಂತರ ಅಜಯ್‌ಕುಮಾರ್, ಸಮುದಾಯ ಸಂಘಟಕ ಮೈಲಾರಪ್ಪ ಜಿ ಹಾಗೂ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts