More

    ಕಾರ್ಣಿಕೋತ್ಸವದಲ್ಲಿ ಭಕ್ತರು ಪುನೀತ

    ಮೈಲಾರದ ಡೆಂಕನ ಮರಡಿಯಲ್ಲಿ ಕಾರ್ಣಿಕೋತ್ಸವದ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರದಿರುವ ಭಕ್ತ ಸಮೂಹ.

    ಹೂವಿನಹಡಗಲಿ: ತಾಲೂಕಿನ ಐತಿಹಾಸಿ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

    ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವಾಮಿ ಕಾರ್ಣಿಕೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಪೂಜೆ ಜರುಗಿದವು. ದೇವಸ್ಥಾನದ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಮೈಲಾರಲಿಂಗ ಸ್ವಾಮಿ ಉತ್ಸವ ಮೂರ್ತಿ ಡೆಂಕಣಮರಡಿಗೆ ಸಾಗಿ ಬಂದಿತು. ಜಾತ್ರೆಯ ಮುಖ್ಯ ಘಟ್ಟವಾದ ರಾಕ್ಷಸರ ಸಂಹಾರದ ನಂತರ 11 ದಿನಗಳ ಕಾಲ ಡೆಂಕನಮರಡಿಯಲ್ಲಿ ಉಪವಾಸ ವ್ರತದಲ್ಲಿದ್ದ ಗೊರವಪ್ಪ ರಾಮಣ್ಣ, ಧರ್ಮಕರ್ತರ ಆರ್ವಾದ ಪಡೆದ ದೈವವಾಣಿಯನ್ನು ನುಡಿಯಲು 15 ಅಡಿಯ ಬಿಲ್ಲನ್ನೇರಿ ಸದ್ದಲ್ಲೇ.. ಎಂದು ಕೂಗಿದೊಡನೆ ನೆರೆದಿದ್ದ ಭಕ್ತ ಸಮೂಹ ಮೌನವಾಯಿತು. ನಂತರ ಗೊರವಪ್ಪ ‘ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕ ನುಡಿದು ಬಿಲ್ಲಿನಿಂದ ಕೆಳಜಿಗಿದರು.

    ಕಾರ್ಣಿಕೋತ್ಸವದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಶಾಸಕ ಕೃಷ್ಣನಾಯ್ಕ, ಡಿಸಿ ಎಂ.ಎಸ್.ದಿವಾಕರ, ಐಜಿಪಿ ಲೋಕೆಶ್, ಎಸ್ಪಿ ಶ್ರೀಹರಿಬಾಬು, ಸಿಇಒ ಬಿ.ಸದಾಶಿವಪ್ರಭು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಸಿ ಗಂಗಾಧರ, ದೇವಸ್ಥಾನ ಸಮಿತಿಯ ಇಒ ಬಿ.ಕೃಷ್ಣಪ್ಪ ಹಾಗೂ ಇತರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಉತ್ತರಕರ್ನಾಟಕ ಸೇರಿದಂತೆ ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಡೆಂಕನಮರಡಿ ಪುಣ್ಯಭೂಮಿಯಲ್ಲಿ ಸೇವೆ ಸಲ್ಲಿಸಿದರು. ಜಾತ್ರೆಗೆ ಬಂದ ಭಕ್ತರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ದೇವರಲ್ಲಿ ಹರಕೆ ಹೊತ್ತರು. ಮದುವೆ ಆಗುವವರು ಹಸಿರು ಚಪ್ಪರ ಹಾಕಿದರು. ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಮಣ್ಣಿನ ರಾಶಿ ಕಟ್ಟಿದರು. ಮನೆ ನಿರ್ಮಿಸುವವರು ಕಲ್ಲು, ಮಣ್ಣಿ ನಿಂದ ಮನೆ ಕಟ್ಟುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತು ನಮ್ಮೆದಿ, ಶಾಂತಿ, ಸುಖ ನೆಲಸಲೆಂದು ದೇವರಲ್ಲಿ ಪ್ರಾರ್ಥಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ವಿವಿಧ ಬಗೆಯಲ್ಲಿ ಕಾರ್ಣಿಕವನ್ನು ವಿಶ್ಲೇಷಿಸಿಕೊಂಡು, ತಮ್ಮ ಸ್ವಗ್ರಾಮಗಳಿಗೆ ಮರಳಿದರು. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸುಶಿಕ್ಷಿತ ಭಕ್ತರೂ ಧಾರ್ಮಿಕ ಆಚರಣೆಗಳನ್ನು ಚಾಚೂ ತಪ್ಪದೆ ಮಾಡುತ್ತಿರುವುದು ವಿಶೇಷವೆನಿಸಿತು.

    ಕಾರ್ಣಿಕೋತ್ಸವದಲ್ಲಿ ಭಕ್ತರು ಪುನೀತ

    ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಡೆಂಕನ ಮರಡಿಯಲ್ಲಿ ಕಾರ್ಣಿಕದ ಸಮಯದಲ್ಲಿ ಗೊರವರು ಡಮರುಗ ಬಾರಿಸುತ್ತಾ ಕುಣಿಯುತ್ತಿರುವುದು.

    ಗೊರವಪ್ಪರ ಉಡುಗೆ ವಿಶೇಷ ಆಕರ್ಷಣೆ

    ರಾಜ್ಯ ಹಾಗೂ ಇತರೇ ರಾಜ್ಯಗಳಲ್ಲಿ ಮೈಲಾರಲಿಂಗನ ಪರಂಪರೆ ನೆಲೆಗಳಿದ್ದರೂ ತಾಲೂಕಿನಲ್ಲಿರುವ ಮೈಲಾರವೇ ದೇವರ ಮೂಲ ನೆಲೆಯಾಗಿದೆ. ಇಲ್ಲಿ ಬರುವ ಗೊರವಪ್ಪಗಳು ಕೈಯಲ್ಲಿ ಡಮರುಗ, ತ್ರಿಶೂಲ ಹಿಡಿದು, ಮತ್ತೊಂದು ಕೈಯಲ್ಲಿ ಭಂಡಾರದ ಬಟ್ಟಲಿಡಿದು, ಕೋರಿ ಅಂಗಿ ಕಂಚಿಗೆ ತೊಟ್ಟು ಬರುವ ಮೂಲಕ ಎಂದಿನಂತೆ ಸಾಂಸ್ಕೃತಿಕ ಶ್ರೀಮಂತಿಕೆ ಸಾರಿದರು. ಕುದುರೆಕಾರರು ಚಡಿಯಿಂದ ದೇಹಕ್ಕೆ ಬಾರಿಸಿಕೊಳ್ಳುವ ಮೂಲಕ ಹರಕೆ ತೀರಿಸಿದರೆ, ದೋಣಿತುಂಬಿಸುವುದು. ಬಯಲಲ್ಲಿಯೇ ಅನ್ನ ಪ್ರಸಾದ ತಯಾರಿಸಿ, ಹಣ್ಣು ತುಪ್ಪದೊಂದಿಗೆ ದೇವರಿಗೆ ನೈವೇದ್ಯ ಸಮರ್ಪಿಸುವುದು. ಗೊರವಮ್ಮ ಮತ್ತು ಇತರ ಭಕ್ತರು ದೇವರಿಗೆ ದೀಪ ಬೆಳಗುವ ಆಚರಣೆಯನ್ನು ಮಾಡಿದರು. ಈ ಬಾರಿಯ ಜಾತ್ರೆಗಳಲ್ಲಿ ನೂತನವಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ದೇವಸ್ಥಾನದ, ಜಾತ್ರಾ ಮೈದಾನದ, ನದಿ ತೀರ, ಡೆಂಕನ ಮರಡಿ ಪ್ರದೇಶ ಸೇರಿದಂತೆ ಇತರೆ ಭಾಗಗಳಲ್ಲಿ ಒಬ್ಬರನೊಬ್ಬರು ಕೈ ಹಿಡಿದು ನಡೆದುಕೊಂಡು ಬರುತ್ತಿರುವ ದೃಶ್ಯಗಳು ಕಂಡು ಬಂದವು. ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತ ಫೆ.27ರಂದು ಸಂಜೆ ಗೊರವರು, ಕಂಚಿವೀರರಿಂದ ಸರಪಳಿ ಪವಾಡ, ಭಗಣಿಗೂಟ ಪವಾಡಗಳು ಗಂಗಿ ಮಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿವೆ. ಡೆಂಕಣ ಮರಡಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಶುಭ ನುಡಿಯಬೇಕೆಂಬ ಕಾರಣಕ್ಕಾಗಿ ಕಾರ್ಣಿಕ ನುಡಿದ ಮರುದಿನದಲ್ಲಿ ಹಲವಾರು ಪವಾಡಗಳನ್ನು ನಡೆಸುತ್ತಾ ಬರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts