More

    ಪೈಸಾರಿ ಜಾಗದಲ್ಲಿ ಹಾಕಿದ್ದ ಗುಡಿಸಲುಗಳು ತೆರವು

    ವಿರಾಜಪೇಟೆ: ಬಾಳುಗೋಡು ಪೈಸಾರಿ ಜಾಗದಲ್ಲಿ 30ಕ್ಕೂ ಹೆಚ್ಚು ದಿನಗಳಿಂದ ಗುಡಿಸಲು ಕಟ್ಟಿಕೊಂಡು ನಿವೇಶನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 60 ಕುಟುಂಬಗಳ ಗುಡಿಸಲುಗಳನ್ನು ಜಿಲ್ಲೆಯ ಉಪ ವಿಭಾಗಾಧಿಕಾರಿ ಜವರೇಗೌಡ ಸಮ್ಮುಖದಲ್ಲಿ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ನೆಲಸಮಗೊಳಿಸಿ ಅವರನ್ನು ತೆರವುಗೊಳಿಸಿದ್ದಾರೆ.

    ಒಕ್ಕಲೆಬ್ಬಿಸುವ ಸಮಯದಲ್ಲಿ ವಿವಿಧ ಸಂಘಟನೆಗಳ ನಾಯಕರು ಪ್ರತಿಭಟನೆ ನಡೆಸಿದರಾದರೂ ಇದನ್ನು ಲೆಕ್ಕಿಸದ ಅಧಿಕಾರಿಗಳು ಎಲ್ಲ ಗುಡಿಸಲುಗಳನ್ನು ನೆಲಸಮ ಮಾಡಿದರು. ಸಂಘಟನೆಗಳು ಪ್ರತಿಭಟನೆ ನಡೆಸಲು ಹಾಕಿದ್ದ ಟೆಂಟ್ ಅನ್ನು ಅಧಿಕಾರಿಗಳು ಹಾಗೆಯೇ ಬಿಟ್ಟಿದ್ದರಿಂದ ಕುಟುಂಬಗಳು ಸೇರಿದಂತೆ ನಾಯಕರು ಈ ಟೆಂಟ್‌ನಲ್ಲಿ ಆಶ್ರಯ ಪಡೆದು ಪ್ರತಿಭಟನೆ ಮುಂದುವರಿಸುವುದಾಗಿ ಹಿಂದುಳಿದ ಜಾಗೃತಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಪಳನಿ ಪ್ರಕಾಶ್ ತಿಳಿಸಿದ್ದಾರೆ.

    ಈ ವೇಳೆ ಉಪ ವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, ಮುಂದಿನ 15ದಿನಗಳೊಳಗೆ ಹೊಸದಾಗಿ ಲೇಔಟ್‌ಗಳನ್ನು ನಿರ್ಮಿಸಿ ಆಯ್ದ ಪೈಸಾರಿ ಜಾಗದಲ್ಲಿ ಇಲ್ಲಿನ ಎಲ್ಲ ನಿರಾಶ್ರಿತರಿಗೆ ನಿವೇಶನ ವಿತರಣೆ ಮಾಡುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಸಂಘಟನೆ ಮುಖಂಡರು ಇದೇ ಜಾಗದಲ್ಲಿ ನಿವೇಶನ ವಿತರಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.
    ಮುಂದಿನ ಹದಿನೈದು ದಿನಗಳೊಳಗೆ ನಿವೇಶನ ವಿತರಿಸುವ ತನಕ ಬಾಳುಗೋಡು ಪೈಸಾರಿಯಲ್ಲಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದು ಗಡುವಿನ ಅವಧಿಯಲ್ಲಿ ನಿವೇಶನ ವಿತರಿಸದಿದ್ದರೆ ವೀರಾಜಪೇಟೆ ತಾಲೂಕು ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಉಪ ವಿಭಾಗಾಧಿಕಾರಿಗೆ ಸಂಘಟನೆ ನಾಯಕರು ಎಚ್ಚರಿಸಿದರು.

    ಗುಡಿಸಲು ತೆರವು ಕಾರ್ಯಾಚರಣೆ ವೇಳೆ 50ಪೊಲೀಸರು, ಇಬ್ಬರು ಎಸ್‌ಐಗಳು, ಡಿಎಆರ್ ಸಶಸ್ತ್ರ ಪೊಲೀಸ್ ಪಡೆಯ ತುಕಡಿ, ತಹಸೀಲ್ದಾರ್ ಮಹೇಶ್, ಕಂದಾಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಗುಡಿಸಲು ವಾಸಿಗಳ ಪರ ಹೋರಾಟಗಾರರಾದ ಮಹದೇವ್, ರಾಮ್‌ದಾಸ್. ಹೇಮಂತ್, ಮೊಣ್ಣಪ್ಪ, ಎಚ್.ಕೆ.ರಾಜಾ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts