More

    ತುತ್ತು ಅನ್ನಕ್ಕೂ ಗುಡಿಸಲು ವಾಸಿಗಳ ಪರದಾಟ

    ರಾಣೆಬೆನ್ನೂರ: ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವ ನೂರಾರು ಕುಟುಂಬಗಳು ಜನತಾ ಕರ್ಫ್ಯಂದಾಗಿ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ವಣವಾಗಿದೆ.

    ಈ ಭಾಗದಲ್ಲಿ ಸಿಳ್ಳೆಕ್ಯಾತರ, ಸುಡುಗಾಡ ಸಿದ್ಧರು, ಡೌರಿ ಸಮಾಜದವರು ಸೇರಿ 200ಕ್ಕೂ ಅಧಿಕ ಕುಟುಂಬಗಳು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಪುರುಷರು ನಿತ್ಯವೂ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಸ್ಟೋವ್ ರಿಪೇರಿ, ಛತ್ರಿ ರಿಪೇರಿ ಕೆಲಸ ಮಾಡುತ್ತಿದ್ದರೆ, ಮಹಿಳೆಯರು ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇನ್ನೂ ಕೆಲವರು ಸುತ್ತಲಿನ ಜಮೀನುಗಳಲ್ಲಿ ಹಾಗೂ ಅರಣ್ಯ ಇಲಾಖೆಯಲ್ಲಿ ಕಳೆ ತೆಗೆಯುವ ಕೆಲಸಕ್ಕೆ ಹೋಗುತ್ತಿದ್ದರು.

    ಗ್ರಾಮಗಳಿಗೆ ನಿರ್ಬಂಧ: ಕರೊನಾ ಎರಡನೇ ಅಲೆ ಶುರುವಾದ ಹಿನ್ನೆಲೆಯಲ್ಲಿ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಗುಡಿಸಲು ನಿವಾಸಿಗಳು ಗ್ರಾಮೀಣ ಭಾಗಕ್ಕೆ ತೆರಳಿದರೆ, ‘ನೀವು ಸಿಟಿಯಿಂದ ಬರುತ್ತೀರಿ. ನಿಮ್ಮಿಂದಲೇ ಕರೊನಾ ಹೆಚ್ಚಾಗುತ್ತದೆ. ನಮ್ಮ ಗ್ರಾಮದೊಳಗೆ ಬರಬೇಡಿ’ ಎಂದು ಗ್ರಾಮಸ್ಥರು ವಾಪಸ್ ಕಳುಹಿಸುತ್ತಿದ್ದಾರೆ.

    ‘ನಿತ್ಯವೂ ಕೂಲಿ ಮಾಡಿಕೊಂಡು ಬಂದು ಅದೇ ದಿನ ಊಟ ಮಾಡಿ ಮಲಗುವ ಜನ ನಾವು. ಈಗ ಅರಣ್ಯ ಇಲಾಖೆಯಲ್ಲಿಯೂ ಕೆಲಸ ಬಂದ್ ಮಾಡಲಾಗಿದೆ. ರೈತರು ಸದ್ಯ ಯಾವುದೇ ಕೆಲಸವಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದಂತಾಗಿದೆ. ಸರ್ಕಾರ ಪಡಿತರ ಅಕ್ಕಿ ನೀಡುತ್ತಿದೆ. ಆದರೆ, ಉಳಿದ ಪದಾರ್ಥಗಳನ್ನು ತೆಗೆದುಕೊಳ್ಳಲು ನಮ್ಮ ಬಳಿ ಶಕ್ತಿಯಿಲ್ಲದಂತಾಗಿದೆ’ ಎಂದು ಗುಡಿಸಲು ನಿವಾಸಿಗಳು ವಿಜಯವಾಣಿ ಎದುರು ಅಳಲು ತೋಡಿಕೊಂಡಿದ್ದಾರೆ.

    ಮರುಕಳಿಸಿದ ದುಸ್ಥಿತಿ: ಕಳೆದ ವರ್ಷ ಸಂಪೂರ್ಣ ಲಾಕ್​ಡೌನ್ ಘೊಷಣೆ ಮಾಡಿದ್ದರಿಂದ ಸರ್ಕಾರದಿಂದ ಹಾಗೂ ವಿವಿಧ ಸಂಘ-ಸಂಸ್ಥೆಯಿಂದ ಅಕ್ಕಿ, ಬೇಳೆ, ಎಣ್ಣೆ ಸೇರಿ ಅಡುಗೆಗೆ ಬೇಕಾದ ಎಲ್ಲ ಪದಾರ್ಥ ಸಿಗುತ್ತಿತ್ತು. ಅದರಲ್ಲಿಯೇ ಅಗತ್ಯಕ್ಕೆ ಬೇಕಾದಷ್ಟು ಅಡುಗೆ ಮಾಡಿಕೊಂಡು ಮರುದಿನಕ್ಕೆ ಎಂದು ಸ್ವಲ್ಪ ಇಟ್ಟುಕೊಳ್ಳುತ್ತಿದ್ದೇವು. ಆದರೆ, ಈ ವರ್ಷ ಕರೊನಾ 2ನೇ ಅಲೆ ಹೆಚ್ಚಾಗಿದ್ದರಿಂದ ಯಾರೊಬ್ಬರೂ ಇತ್ತ ಕಡೆ ಸುಳಿಯುತ್ತಿಲ್ಲ. ಆದ್ದರಿಂದ ಸರ್ಕಾರವೇ ಅಡುಗೆ ಪದಾರ್ಥ ವಿತರಣೆ ಮಾಡಬೇಕು ಎಂದು ಎಂದು ಗುಡಿಸಲು ನಿವಾಸಿಗಳು ಒತ್ತಾಯಿಸಿದ್ದಾರೆ.

    ಸಾಲಗಾರರ ಕಾಟ

    ಸ್ಟೇಷನರಿ ವಸ್ತುಗಳನ್ನು ತೆಗೆದುಕೊಳ್ಳಲು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಾಲ ಪಡೆದುಕೊಂಡಿದ್ದೇವೆ. ಆದರೆ, ಈಗ ಸಕಾಲಕ್ಕೆ ಸಾಲ ತುಂಬಲಾಗುತ್ತಿಲ್ಲ. ಸಾಲಗಾರರ ಕಾಟದಿಂದ ಸಾವಿನ ದಾರಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ತಹಸೀಲ್ದಾರ್, ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ, ಜನತಾ ಕರ್ಫ್ಯೂ ಮುಗಿಯುವವರೆಗೂ ಸಾಲದ ಕಂತು ತುಂಬಲು ಕಾಲಾವಕಾಶ ಕೊಡಿಸಬೇಕು ಎನ್ನುತ್ತಾರೆ ಗುಡಿಸಲು ನಿವಾಸಿಗಳು.

    ನಾವು ನಿತ್ಯದ ದುಡಿಮೆ ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಜನ. ಈಗ ಹೊರಗೆ ಎಲ್ಲಿಯೂ ಹೋಗುವಂತಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಮನೆಯಲ್ಲಿಯೇ ಇದ್ದೇವೆ. ಒಂದು ವಾರದಿಂದ ಅಳಿದುಳಿದ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿದ್ದೇವೆ. ಆದರೆ, ಎರಡು ದಿನದಿಂದ ಮನೆಯಲ್ಲಿ ಎಲ್ಲ ಖಾಲಿಯಾಗಿದೆ. ನಿತ್ಯದ ಊಟವೂ ಇಲ್ಲದ ಪರಿಸ್ಥಿತಿಯಿದೆ. ಸರ್ಕಾರ ನಮಗೆ ಸಹಾಯ ಮಾಡಬೇಕು.

    | ಕಾವೇರಮ್ಮ, ಗುಡಿಸಲು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts