More

    ಟಿಎಪಿಸಿಎಂಎಸ್‌ನಿಂದ ಮತ್ತೆ 10 ಮಳಿಗೆ ನಿರ್ಮಾಣ

    ಹುಣಸೂರು: ಹುಣಸೂರು ತಾಲೂಕು ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ವತಿಯಿಂದ 49 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶನಿವಾರ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.

    ನಗರದ ಟಿಎಪಿಸಿಎಂಎಸ್‌ನ ಹಳೆಯ ವಾಣಿಜ್ಯ ಸಂಕೀರ್ಣ ವ್ಯಾಪ್ತಿಯ ಅಕ್ಕಿಗಿರಣಿ ಮುಂಭಾಗದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಟಿಎಪಿಸಿಎಂಎಸ್ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. 6 ತಿಂಗಳ ಹಿಂದೆ ಆರಂಭಗೊಂಡ 10 ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಇದೀಗ ಮತ್ತೆ 10 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಟಿಎಪಿಸಿಎಂಎಸ್ ಸಹಕಾರ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ವರ್ಷದ ಹಿಂದೆ ಮಾತುಕೊಟ್ಟಿದ್ದೆ. ಇದೀಗ ಷೇರುದಾರರಿಗೆ ಲಾಭದಾಯಕವಾಗುವಂತೆ ಕ್ರಮ ವಹಿಸಿದ್ದೇನೆ ಎಂದು ಹೇಳಿದರು.

    ದಲಿತ ಸಮಾಜಕ್ಕೆ ಅಧ್ಯಕ್ಷ ಸ್ಥಾನ: ಟಿಎಪಿಸಿಎಂಎಸ್‌ನ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಸಮಾಜದ ಹಿರಿಯ ಮುಖಂಡ ಬಸವಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ವಾಲ್ಮೀಕಿ ಸಮಾಜದ ನಾಗರಾಜು ಅವರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದೇವೆ. ಹಿರಿಯ ಮುಖಂಡ ಬಸವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಒಂದು ಕೋಟಿ ರೂ. ಅಭಿವೃದ್ಧಿ ಕಾಮಗಾರಿ ನಡೆದಿದೆ. ಹಾಲಿ ಇರುವ ರೈತಭವನದ ಅಭಿವೃದ್ಧಿಗೂ ಕ್ರಮವಹಿಸಲಾಗುವುದು ಎಂದರು.

    ಮೈತ್ರಿಧರ್ಮ ಪಾಲನೆ ಮಾಡಲಾಗುವುದು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಸಂಸದ ಪ್ರತಾಪ್‌ಸಿಂಹ ಅವರಿಗೆ ಕೈ ತಪ್ಪಿರುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹರೀಶ್‌ಗೌಡ, ಪ್ರತಾಪ್‌ಸಿಂಹ ಸಂಸದರಾಗಿ ಹುಣಸೂರು ತಾಲೂಕು ಮತ್ತು ಸಂಸದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು- ಕುಶಾಲನಗರ ರೈಲ್ವೆ ಯೋಜನೆ, ಹುಣಸೂರು ಬೈಪಾಸ್ ರಸ್ತೆ ಅಭಿವೃದ್ಧಿಗೆ ವಾರದ ಹಿಂದೆ 86 ಕೋಟಿ ರೂ. ಯೋಜನೆ ಜಾರಿ, ಮರದೂರು ಏತ ನೀರಾವರಿ ಯೋಜನೆ, ಕಾವೇರಿ ಕುಡಿಯುವ ನೀರಿನ ಯೋಜನೆ ಹೀಗೆ ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಯನ್ನು ಹುಣಸೂರಿಗೆ ನೀಡಿದ್ದಾರೆ. ಅವರಿಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷವಾಗಿ ನಾವು ಮೈತ್ರಿಧರ್ಮ ಪಾಲನೆ ಮಾಡುತ್ತೇವೆ. ನಿಯೋಜಿತ ಅಭ್ಯರ್ಥಿ ಯದುವೀರ ಅವರನ್ನು ಜೆಡಿಎಸ್ ಬೆಂಬಲಿಸಲಿದೆ ಎಂದು ತಿಳಿಸಿದರು.

    ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿದರು. ನಿರ್ದೇಶಕರಾದ ಪ್ರೇಮ್‌ಕುಮಾರ್, ವೆಂಕಟೇಶ್, ಎಚ್.ಟಿ.ಬಾಬು, ಅಸ್ವಾಳು ಕೆಂಪೇಗೌಡ, ಗೌರಮ್ಮ, ಮಂಗಳಗೌರಮ್ಮ, ರೇವಣ್ಣ, ಕಾರ್ಯದರ್ಶಿ ಹೇಮಾ, ಷೇರುದಾರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts