More

    ಹುಣಸೂರು ಆಸ್ಪತ್ರೆ ವರ್ಷದೊಳಗೆ ಪೂರ್ಣ

    ಹುಣಸೂರು: ಹುಣಸೂರಿನ ಬೈಪಾಸ್‌ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬಾಕಿಯಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಈ ವರ್ಷದೊಳಗೆ ಸಂಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

    ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ಕುರಿತು ಸಚಿವರ ಗಮನಸೆಳೆದರು. ಈ ವೇಳೆ ಮಾತನಾಡಿದ ಅವರು 2018ರಲ್ಲಿ ಈ ಯೋಜನೆಗೆ ಚಾಲನೆ ದೊರೆತು, 2019ರಲ್ಲಿ ಕಾಮಗಾರಿ ಆರಂಭಗೊಂಡು 2020ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 31 ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೂ, ಆಸ್ಪತ್ರೆಗೆ ಅವಶ್ಯಕವಿರುವ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಕಳೆದೆರಡು ವರ್ಷಗಳಿಂದ ಕಟ್ಟಡ ಖಾಲಿ ಬಿದ್ದಿದ್ದು, ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಅಸ್ಪತ್ರೆಗೆ ಅಗತ್ಯವಿರುವ ಕಾಂಪೌಂಡ್, ಎಸ್‌ಟಿಪಿ ಘಟಕ, ರ‌್ಯಾಂಪ್, ಲಿಫ್ಟ್, ಇನ್ನಿತರ ಸಲಕರಣೆಗಳು ಯಾವುದನ್ನೂ ಒದಗಿಸಿಲ್ಲ. ಹಾಲಿ ಇರುವ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು, ವಾರ್ಡ್‌ಗಳ ಸಮಸ್ಯೆ ಹೆಚ್ಚಾಗಿದೆ. ತಾಲೂಕಿನ ಜನತೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ ಎಂದು ವಾಸ್ತವವನ್ನು ವಿವರಿಸಿದರು.

    ಇದೂ ಪಾಳು ಕಟ್ಟಡವಾಗಲಿದೆ: ಎರಡು ವರ್ಷಗಳಿಂದ ಕಟ್ಟಡ ಖಾಲಿಯಿದ್ದು, ಹೀಗೆ ಮುಂದುವರೆದಲ್ಲಿ ಇದೂ ಪಾಳು ಕಟ್ಟಡವಾಗಲಿದೆ. ಈಗಾಗಲೇ ಗಿಡಮರಗಳು ಬೆಳೆಯುತ್ತಿವೆ. ಹೀಗಾದಲ್ಲಿ ಈಗಾಗಲೇ ಖರ್ಚು ಮಾಡಿರುವ 31 ಕೋಟಿ ಹಣವೂ ವ್ಯರ್ಥವಾಗುತ್ತದೆ. ಸರ್ಕಾರ ಹೆಚ್ಚುವರಿಯಾಗಿ 9.19 ಕೋಟಿ ರೂ.ಗಳೆಂದು ತಿಳಿಸಿದೆ. ಅದು 2022-23ರ ಅಂದಾಜು ಪಟ್ಟಿಯಾಗಿದ್ದು, ಇದೀಗ ಸರಿಸುಮಾರು 14 ಕೋಟಿ ರೂ.ಗಳ ಅವಶ್ಯಕತೆಯಿದೆ. ಕಾಲಮಿತಿಯೊಳಗೆ ಸರ್ಕಾರ ಕಾಮಗಾರಿ ಸಂಪೂರ್ಣಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.

    ಈ ವರ್ಷವೇ ಪೂರ್ಣಗೊಳಿಸುತ್ತೇವೆ: ಶಾಸಕರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರ ಈಗಾಗಲೇ 31 ಕೋಟಿ ರೂ. ವೆಚ್ಚ ಮಾಡಿ ಕಟ್ಟಡ ನಿರ್ಮಿಸಿದ್ದು, ಸಲಕರಣೆಗಳು ಸೇರಿದಂತೆ ಮೂಲಸೌಕರ್ಯಗಳಾದ ಶವಾಗಾರ, ಬೆಂಕಿ ಅವಘಡ ತಡೆ, ಎಸ್‌ಟಿಪಿ ಮುಂತಾದವುಗಳನ್ನು ಒದಗಿಸದಿರುವುದು ನಿಜ. ಇಷ್ಟು ಖರ್ಚು ಮಾಡಿದ ನಂತರ ಕಟ್ಟಡವನ್ನು ಹಾಗೇ ಬಿಡಲು ಸಾಧ್ಯವಿಲ್ಲ. ಈ ವರ್ಷ(2024) ದಲ್ಲೇ ಕಾಮಗಾರಿ ಸಂಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು. ಆ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದರು.

    15 ಹುಣಸೂರು 6: ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ವಿಧಾನಸಭೆ ಅಧಿವೇಶನದಲ್ಲಿ ನಗರದಲ್ಲಿ ನೂತನ ಆಸ್ಪತ್ರೆ ಕಾಮಗಾರಿ ವಿಳಂಬಗೊಂಡಿರುವುದನ್ನು ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts