More

    ನ್ಯಾಯ ಪಡೆಯಲು ಸಂಘಟನೆ ಅವಶ್ಯ

    ಹುನಗುಂದ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಸಂಘಟನೆ ಕಟ್ಟುವುದೇ ಮೂಲ ಉದ್ದೇಶವಾಗಿದೆ. ರಾಜ್ಯ ಸರ್ಕಾರಿ ನೌಕರರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದು, ಎಲ್ಲರೂ ಒಟ್ಟಾಗಿ ಸಂಘಟನೆ ಮೂಲಕ ಎದುರಿಸೋಣ ಎಂದು ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

    ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಹುನಗುಂದ-ಇಳಕಲ್ಲ ತಾಲೂಕಿನ ಸರ್ಕಾರಿ ನೌಕರರು ಹಾಗೂ ಶಿಕ್ಷಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ವರ್ಷದಲ್ಲಿ ಎಲ್ಲ ಸರ್ಕಾರಿ ನೌಕರರಿಗೆ ಸಂಬಳ ಸಂಪೂರ್ಣ ಆನ್‌ಲೈನ್ ಆಗಿ ನಗದು ರಹಿತ ಪ್ರಕ್ರಿಯೆ ಆರಂಭವಾಗಲಿದೆ. ಒಂದು ವರ್ಷದಲ್ಲಿ ನಾನು ಅಧ್ಯಕ್ಷನಾದ ಬಳಿಕ 45 ಸಾವಿರ ನೌಕರರಿಗೆ ಮುಂಬಡ್ತಿ, 50 ಲಕ್ಷ ರೂ. ವರೆಗೆ ಆರೋಗ್ಯ ವಿಮೆ, ಪ್ರತಿ ತಿಂಗಳಿಗೆ ಒಂದು ಸಾವಿರ ರೂ. ವರೆಗೆ ಔಷಧ ವೆಚ್ಚದ ಸೌಲಭ್ಯ ಯೋಜನೆ ಮಾಡಲಾಗಿದೆ ಎಂದು ಹೇಳಿದರು.

    ಸರ್ಕಾರಿ ನೌಕರರ ಬೃಹತ್ ಸಂಘಟನೆಯೂ ಹೋರಾಟದ ಮೂಲಕ ನ್ಯಾಯ ಪಡೆಯಬೇಕು. ಎಲ್ಲ ನೌಕರರಿಗೆ ಕೇಂದ್ರ ಮಾದರಿಯಲ್ಲಿ ಸರಿ ಸಮಾನ ವೇತನವನ್ನು ಸರ್ಕಾರ ಅನುಷ್ಠಾನ ಮಾಡಲು ನಿರಂತವಾಗಿ ಒತ್ತಡ ತರಲಾಗುತ್ತಿದೆ. ಎನ್.ಪಿ.ಎಸ್. ನೌಕರರಿಗೆ ಒ.ಪಿ.ಎಸ್‌ನ ಎಲ್ಲ ಸೌಲಭ್ಯ ಜಾರಿಗೆ ತರಲು ಸಂಘಟನೆ ಮೂಲಕ ಹೋರಾಟ ಮಾಡುವುದು ಅನಿವಾರ್ಯ. ಆದ್ದರಿಂದ ಪ್ರತಿಯೊಬ್ಬ ನೌಕರ ಸಂಘಟನೆ ಜತೆಗೆ ಕೈಜೋಡಿಸಿದರೆ ಮಾತ್ರ ಸಂಘದ ಬೆಳವಣಿಗೆ ಆಗಲು ಸಾಧ್ಯ ಎಂದು ತಿಳಿಸಿದರು.

    ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಮಾತನಾಡಿ, ಇಳಕಲ್ಲ ನೂತನ ತಾಲೂಕು ಕೇಂದ್ರವಾದ ಹಿನ್ನೆಲೆಯಲ್ಲಿ ಇಳಕಲ್ಲ ತಾಲೂಕು ಶಿಕ್ಷಕರ ಭವನಕ್ಕೆ ನಿವೇಶನ ಮತ್ತು ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

    ಬಿಇಒ ಮಹಾದೇವ ಬೆಳ್ಳೆನ್ನವರ, ಕೋಶಾಧ್ಯಕ್ಷ ಆರ್.ಶ್ರೀನಿವಾಸ, ಗೌರವಾಧ್ಯಕ್ಷ ವಿ.ವಿ. ಶಿವರುದ್ರಯ್ಯ, ವಿಭಾಗೀಯ ಉಪಾಧ್ಯಕ್ಷ ಮೋಹನಕುಮಾರ, ಬಾಗಲಕೋಟೆ ಜಿಲ್ಲಾಧ್ಯಕ್ಷ ಎಂ.ಬಿ. ಬಳ್ಳಾರಿ, ವಿಜಯಪುರ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಕೇಂದ್ರ ಸಂಘದ ಜಂಟಿ ಕಾರ್ಯದರ್ಶಿ ಗಿರಿಗೌಡ, ಕೇಂದ್ರ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಕೋಶಾಧ್ಯಕ್ಷ ಎಸ್.ಕೆ. ಹಿರೇಮಠ, ರಾಜ್ಯ ಪರಿಷತ್ ಸದಸ್ಯ ಸಂಜೀವ ಸತರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠಲ ವಾಲಿಕಾರ, ಹುನಗುಂದ ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ, ಇಳಕಲ್ಲ ತಾಲೂಕು ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts