More

    ಯಾರದೋ ಜಮೀನು ಇನ್ನಾರದೋ ಹೆಸರಿಗೆ ಖಾತೆ!: ಹುಳಿಯಾರು ಠಾಣೆಯಲ್ಲಿ ಪ್ರಕರಣ

    ಸೋರಲಮಾವು ಶ್ರೀಹರ್ಷ ತುಮಕೂರು

    ಗುಬ್ಬಿ ತಾಲೂಕಿನಲ್ಲಿ 450 ಎಕರೆ ಸರ್ಕಾರಿ ಭೂಮಿ ಖಾಸಗಿಯವರಿಗೆ ಮಾರಿದ ಪ್ರಕರಣ ಮಾಸುವ ಮುನ್ನವೇ ಕಂದಾಯ ಇಲಾಖೆಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ.


    ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಕಲ್ಲೇನಹಳ್ಳಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯಕ್ತಿಯೊಬ್ಬರಿಗೆ 4 ಎಕರೆ ಜಮೀನು ಖಾತೆ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲೇನಹಳ್ಳಿಗೆ ಹೊಂದಿಕೊಂಡಿರುವ ಮುತ್ತುಗದಹಳ್ಳಿ ಸರ್ಕಾರಿ ಸರ್ವೇ ನಂ.79ರಲ್ಲಿ ಗೋಣೆನಿಂಗಪ್ಪ ಎಂಬುವವರಿಗೆ ಮಂಜೂರಾಗಿದ್ದ 4 ಎಕರೆ ಭೂಮಿಯನ್ನು ಹೊಯ್ಸಳಕಟ್ಟೆಯ ತಿಮ್ಮಕ್ಕ ಎಂಬುವವರಿಗೆ ಖಾತೆ ಬದಲಾವಣೆ ಮಾಡಿರುವ ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.


    ಮರಣ ಪ್ರಮಾಣಪತ್ರವೇ ನಕಲಿ: ನಕಲಿ ದಾಖಲೆ ಸೃಷ್ಟಿಸಿರುವ ಆರೋಪಿಗಳು ಸರ್ಕಾರ ಜಮೀನು ಮಂಜೂರು ಮಾಡಿದ್ದ ಗೋಣೆ ನಿಂಗಪ್ಪ ಅವರ ಮರಣ ಪ್ರಮಾಣ ಪತ್ರವನ್ನೇ ನಕಲಿಯಾಗಿ ಸೃಷ್ಟಿಸಿದ್ದಾರೆ. 2016ರಲ್ಲಿ ಮೃತಪಟ್ಟಿರುವ ನಿಂಗಪ್ಪ ಅವರು 1995ರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಜಮೀನು ಖಾತೆ ಮಾಡಿಸಿಕೊಂಡಿರುವ ತಿಮ್ಮಕ್ಕ ಅವರ ವಂಶವೃಕ್ಷ ಪ್ರಮಾಣಪತ್ರ ಕೂಡ ನಕಲಿಯಾಗಿದ್ದು, ಸಂಬಂಧವೇ ಇಲ್ಲದ ಗೋಣೆನಿಂಗಪ್ಪ ಅವರ ಮಗಳು ಎಂದು ನೋಟರಿ ಮಾಡಿಸಿಕೊಂಡು ವಂಚಿಸಿರುವುದು ದೃಢವಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.


    ಅಧಿಕಾರಿಗಳ ಮೇಲೆ ಪ್ರಕರಣ: ಕಲ್ಲೇನಹಳ್ಳಿಯ ರಘುನಂದನ್ ಎಂಬುವವರು ನೀಡಿದ ದೂರು ಪರಿಶೀಲಿಸಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಿ.ಆರ್.ವಿಜಯಕುಮಾರ್ ನೀಡಿದ ವರದಿ ಹಿನ್ನೆಲೆಯಲ್ಲಿ ಹುಳಿಯಾರು ಠಾಣೆಯಲ್ಲಿ ಹೊಯ್ಸಳಕಟ್ಟೆ ತಿಮ್ಮಕ್ಕ, ಗ್ರಾಮಲೆಕ್ಕಿಗ ಎಚ್.ಮಂಜುನಾಥ್, ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ಹುಳಿಯಾರು ನಾಡಕಚೇರಿ ಉಪತಹಸೀಲ್ದಾರ್ ಪುಷ್ಪಾವತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ.


    ಅಧಿಕಾರಿಗಳೇ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಬದಲಾಯಿಸಿದ್ದಾರೆ, ಈ ಬಗ್ಗೆ ದಾಖಲೆ ಸಮೇತ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ, ಲೋಕಾಯುಕ್ತಗೆ ನೀಡಿದ ದೂರು ಫಲ ನೀಡಿದ್ದು ಹುಳಿಯಾರು ಠಾಣೆಯಲ್ಲಿ ನಾಲ್ವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
    – ರಘುನಂದನ್ ದೂರುದಾರ


    ಪೌತಿ ಖಾತೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ದೂರು ಹುಳಿಯಾರು ಠಾಣೆಯಲ್ಲಿ ದಾಖಲಾಗಿರುವ ಬಗ್ಗೆ ತಹಸೀಲ್ದಾರ್ ಅವರಿಂದ ವರದಿ ಕೇಳಿದ್ದೇವೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ.
    – ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts