More

    ಪೊಲೀಸ್ ಇಲಾಖೆಗೆ ಭರ್ಜರಿ ಆದಾಯ…!

    ಹಾವೇರಿ: ಲಾಕ್​ಡೌನ್​ನಿಂದ ರಾಜ್ಯದಲ್ಲಿ ಎಲ್ಲರ ಆದಾಯದಲ್ಲಿ ಇಳಿಕೆಯಾಗಿದೆ. ಆದರೆ, ಪೊಲೀಸ್ ಇಲಾಖೆಗೆ ಮಾತ್ರ ಭರ್ಜರಿ ಆದಾಯ ಬಂದಿದೆ.!

    ಕರೊನಾ ವೈರಸ್ ಹರಡದಂತೆ ತಡೆಯಲು ಮಾ. 24ರಿಂದ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾಗಿದ್ದರಿಂದ ಪೊಲೀಸ್ ಇಲಾಖೆ ಆರಂಭದಲ್ಲಿ ಮನೆಯಿಂದ ಬೈಕ್​ಗಳಲ್ಲಿ ಹೊರಬರುತ್ತಿದ್ದವರ ಮೇಲೆ ಲಾಠಿ ಪ್ರಯೋಗ ನಡೆಸಿತ್ತು. ಆದರೆ, ಲಾಠಿ ಪ್ರಯೋಗಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಪೊಲೀಸರಿಗೆ ಸರ್ಕಾರವೇ ಲಾಠಿ ಬೀಸದಂತೆ ಸೂಚನೆ ನೀಡಿತು. ಇದು ಅನವಶ್ಯಕವಾಗಿ ಬೀದಿಗೆ ಬರುವವರಿಗೆ ಸಂತಸ ತಂದಿತ್ತು. ಹೇಗಾದರೂ ಮಾಡಿ ರಸ್ತೆಗೆ ಬರುವವರನ್ನು ನಿಯಂತ್ರಿಸಬೇಕು ಎಂದು ಹಲವು ಪ್ರಯೋಗಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಕಂಡಿದ್ದು ದಂಡದ ಪ್ರಯೋಗ. ಇದು ಅನವಶ್ಯಕವಾಗಿ ಜನರು ಹೊರಬರುವುದನ್ನು ತಡೆಯಲು ಅನುಕೂಲ ಕಲ್ಪಿಸಿದ್ದಲ್ಲದೇ ಇಲಾಖೆಗೂ ಉತ್ತಮ ಆದಾಯ ತಂದಿದೆ.

    ಹಾವೇರಿ ಜಿಲ್ಲೆಯಲ್ಲಿ ಕಳೆದ 21 ದಿನಗಳ ಅವಧಿಯಲ್ಲಿ ಬೀದಿಗೆ ಬಂದ 5,116 ಬೈಕ್​ಗಳಿಂದ ಹೆಲ್ಮೆಟ್, ಆರ್​ಸಿ ಬುಕ್, ಇನ್ಸೂರೆನ್ಸ್ ಇಲ್ಲದ ಕಾರಣಕ್ಕೆ 25,12,000 ರೂ.ಗಳಷ್ಟು ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ. ಅಲ್ಲದೆ, 839 ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಲಾಖೆಯ ಕ್ರಮಕ್ಕೆ ಮೆಚ್ಚುಗೆ: ಪೊಲೀಸ್ ಇಲಾಖೆ ದಂಡ ವಸೂಲಿ ಮಾಡಿದ್ದು ಮುಖ್ಯವಲ್ಲ. ಆದರೆ, ಅವರ ಈ ಕ್ರಮದಿಂದ ಜಿಲ್ಲೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಬಂದಿದ್ದಲ್ಲದೇ, ಈವರೆಗೂ ಯಾವುದೇ ಕರೊನಾ ಪ್ರಕರಣವೂ ಪತ್ತೆಯಾಗಿಲ್ಲ. ಪೊಲೀಸ್ ಹಾಗೂ ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮ ಶ್ಲಾಘನೀಯ ಎಂದು ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮೊದಲ ಹಂತದ ಲಾಕ್​ಡೌನ್ ಅವಧಿಯಲ್ಲಿ ಅನವಶ್ಯಕವಾಗಿ ಬೀದಿಗೆ ಬರುವ ಬೈಕ್ ಸವಾರರಿಂದ 25 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯಿಂದ ಲಾಠಿ ಪ್ರಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೂ ಕರೊನಾ ಹರಡುವುದನ್ನು ತಡೆಗಟ್ಟಲು ಬೀದಿಗೆ ಬರುವ ಜನರನ್ನು ನಿಯಂತ್ರಿಸುವ ಉದ್ದೇಶದಿಂದ ದಂಡ ವಸೂಲಿ ಮಾಡಲಾಗಿದೆ. ಇದರಿಂದ ಸಾಕಷ್ಟು ಪ್ರಯಾಣದಲ್ಲಿ ಜನಸಂದಣಿ ನಿಯಂತ್ರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts